ADVERTISEMENT

ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 8:10 IST
Last Updated 18 ಫೆಬ್ರುವರಿ 2011, 8:10 IST

ದಾವಣಗೆರೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಜೆಡಿಎಸ್ ಘಟಕ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.ಜೆಡಿಎಸ್ ಶಾಸಕ ಜಮೀರ್ ಅಹಮದ್ ಅವರ ಮೇಲೆ ಡಕಾಯಿತಿ ಆರೋಪ ಹೊರಿಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಇದರಲ್ಲಿ ಯಾವುದೇ ಹುರುಳಿಲ್ಲ. ಅಲ್ಲದೇ, ಇದ್ದಕ್ಕಿದ್ದಂತೆ ಈ ಕ್ರಮಕ್ಕೆ ಮುಂದಾಗಿರುವ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ನಂತರ ಪ್ರಜಾಪ್ರಭುತ್ವದ ತತ್ವಗಳನ್ನು ಗಾಳಿಗೆ ತೂರಿದೆ. ವಿರೋಧ ಪಕ್ಷಗಳನ್ನು ದಮನ ಮಾಡುವ ಕಾರ್ಯದಲ್ಲೇ ಮಗ್ನವಾಗಿದೆ. ವಿಪಕ್ಷದ ಶಾಸಕರಿಗೆ ಹಣದ ಆಮಿಷ ತೋರಿಸಿ, ‘ಆಪರೇಷನ್ ಕಮಲ’ದ ಮೂಲಕ ತನ್ನತ್ತ ಸೆಳೆಯುವ ಕುತಂತ್ರದ ರಾಜಕಾರಣ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ವಿರುದ್ಧ ಧ್ವನಿಯೆತ್ತಿದ ಶಾಸಕರನ್ನು ಅಮಾನತು ಮಾಡುವ ಬೆದರಿಕೆ ಹಾಕುತ್ತಿದೆ. ಇದಕ್ಕೆ ತಕ್ಕಂತೆ ವಿಧಾನಸಭೆ ಅಧ್ಯಕ್ಷರೂ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರಿದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸ ಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಟಿ. ದಾಸಕರಿಯಪ್ಪ, ಬಿ.ಎಂ. ಸತೀಶ್, ಷಫೀ ಅಹಮದ್, ಬಾತಿ ಶಂಕರ್, ಮುನ್ನಾ ಪೈಲ್ವಾನ್, ಅಮಾನುಲ್ಲಾ ಜೆ. ಖಾನ್, ದಾದಾಪೀರ್, ಹೈದರ್ ಅಲಿ, ಹನೀಫ್, ಕುಮಾರ ನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.