ADVERTISEMENT

ರಾಸಾಯನಶಾಸ್ತ್ರದ ರಾಷ್ಟ್ರಮಟ್ಟದ ಸಮ್ಮೇಳನ.ಜಿಡಿಪಿ ಹೆಚ್ಚಳಕ್ಕೆ ಶ್ರಮಿಸಲು ಕರೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 12:20 IST
Last Updated 20 ಫೆಬ್ರುವರಿ 2011, 12:20 IST

ದಾವಣಗೆರೆ: ದೇಶದ ಉತ್ಪಾದನಾ ಸಾಮರ್ಥ್ಯ ಹೆಚ್ಚಳವಾಗಿ ಆ ಮೂಲಕ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಏರಿಕೆಯಾಗಬೇಕಿದ್ದು ಈ ನಿಟ್ಟಿನಲ್ಲಿ ಕೆಮಿಕಲ್ ಎಂಜಿನಿಯರ್‌ಗಳ ಪಾತ್ರ ಮಹತ್ವದ್ದಾಗಿದೆ ಎಂದು ದಾವಣಗೆರೆ ವಿವಿ ಕುಲಸಚಿವ ಪ್ರೊ.ಡಿ.ಎಸ್. ಪ್ರಕಾಶ್ ಅಭಿಪ್ರಾಯಪಟ್ಟರು.ಸ್ಥಳೀಯ ಡಿಆರ್‌ಎಂ ವಿಜ್ಞಾನ ಕಾಲೇಜಿನ ರಾಸಾಯನಶಾಸ್ತ್ರ ವಿಭಾಗದ ವತಿಯಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ, ‘ಆಧುನಿಕ ರಾಸಾಯನಶಾಸ್ತ್ರದಲ್ಲಿ ವಿಶ್ಲೇಷಣೆ-ಒಂದು ಹೊಸ ಹಾದಿ’ (ರಿಸೆಂಟ್ ಟ್ರೆಂಡ್ಸ್ ಇನ್ ಅನಾಲಿಟಿಕಲ್ ಟೆಕ್ನಿಕ್ಸ್) ಕುರಿತು ಯುಜಿಸಿ ಪ್ರಾಯೋಜಿತ ರಾಷ್ಟ್ರಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಸೇವಾ ವಲಯದ ಮೂಲಕವೇ ಜಿಡಿಪಿ ಬೆಳವಣಿಗೆ ಕಂಡಿದೆ. ಆದರೆ, ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳಿಂದ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗಬೇಕಿದೆ. ಕೆಮಿಕಲ್ ಎಂಜಿನಿಯರ್‌ಗಳು ಇದನ್ನು ಸವಾಲಾಗಿ ಸ್ವೀಕರಿಸಬೇಕು. ಆ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.ಯುವಜನರು ದೇಶದ ಶಕ್ತಿಯಾಗಿದ್ದಾರೆ. ಜನಸಂಖ್ಯೆ ಏರಿಕೆಯಾಗುತ್ತಲೇ ಇದೆ, ಅದಕ್ಕೆ ತಕ್ಕಂತೆ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆಯೂ ಹೆಚ್ಚಾಗಬೇಕು ಎಂದು ಹೇಳಿದರು.

ದೇಶದಲ್ಲಿ ವಿವಿಗಳ ಸಂಖ್ಯೆ 480ರಿಂದ 800ಕ್ಕೆ ಏರಿಕೆಯಾಗುತ್ತಿದೆ. 22 ಸಾವಿರದಷ್ಟಿದ್ದ ಕಾಲೇಜುಗಳ ಸಂಖ್ಯೆ 45 ಸಾವಿರಕ್ಕೇರುತ್ತಿದೆ. ಆದರೆ, ಈ ಸಂಸ್ಥೆಗಳಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಕೊರತೆಯನ್ನು ಯುವಜನರು ನೀಗಿಸಬೇಕು. ಜತೆಗೆ, ವಿಶ್ಲೇಷಣಾತ್ಮಕ ರಾಸಾಯನಶಾಸ್ತ್ರದಲ್ಲಿ ಸಂಶೋಧನೆಯಲ್ಲಿ ತೊಡಗಬೇಕು ಎಂದರು.ಮೈಸೂರು ವಿವಿ ರಾಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಸೈಯದ್ ಅಖೀಲ್ ಅಹಮದ್ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದ್ದು, ಗ್ರಾಮೀಣ ವಿದ್ಯಾರ್ಥಿಗಳು ಮುಂದೆ ಬರಬೇಕು. ಎರಡು ಜಿಲ್ಲೆಗೆ ಒಂದರಂತೆ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಎಂದು ಹೇಳಿದರು.

ಜ್ಞಾನ ಆಧಾರಿತ ಆರ್ಥಿಕತೆಯ ಬೆಳವಣಿಗೆಗೆ ಗಮನಹರಿಸಬೇಕಿದೆ. ಅದಕ್ಕಾಗಿ ಯುವ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸಬೇಕಿದ್ದು, ಇದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಅವರು ತಮ್ಮ ಮನೋಭಾವನೆಯನ್ನು ಬದಲಾಯಿಸಿಕೊಂಡು ವಿದ್ಯಾರ್ಥಿಗಳನ್ನು ದೇಶದ ಅಭಿವೃದ್ಧಿಗಾಗಿ ಸಿದ್ಧಗೊಳಿಸಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಅಧ್ಯಕ್ಷ ಆರ್.ಎಲ್. ಭೀಮಾನಂದ್ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನಗಳು ನಮ್ಮ ಬದುಕಿಗೆ ನೆರವಾಗಿವೆ ಎಂದರು.

ದಾವಣಗೆರೆ ವಿವಿಯ ವಿಶ್ಲೇಷಣಾತ್ಮಕ ರಾಸಾಯನಶಾಸ್ತ್ರ ವಿಷಯದ ಸ್ನಾತಕೋತ್ತರ ಅಧ್ಯಯನ ವಿಭಾಗದ ಡಾ.ಎಸ್. ಮಂಜಪ್ಪ, ಸಮ್ಮೇಳನದ ಸಂಚಾಲಕ ಡಾ.ಜೆ.ಬಿ. ರಾಜ್ ಭಾಗವಹಿಸಿದ್ದರು. ಕಾಲೇಜು ಪ್ರಾಚಾರ್ಯ ಪ್ರೊ.ಮೇಜರ್ ಎನ್. ಶ್ರೀನಿವಾಸ ಸ್ವಾಗತಿಸಿದರು. ಪ್ರೊ.ಕೆ.ಎಸ್. ಹನುಮಂತಪ್ಪ ವಂದಿಸಿದರು. ‘ನ್ಯಾಕ್’ ಸಂಯೋಜಕ ಕೆ.ಎಸ್. ಈಶ್ವರಪ್ಪ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.