ADVERTISEMENT

ರೂ 7.68 ಲಕ್ಷ ಮೌಲ್ಯದ ಆಭರಣ ವಶ

ವೀರಭದ್ರೇಶ್ವರ ದೇಗುಲದಲ್ಲಿ ಕಳವು ಆರೋಪಿಗಳ ಸೆರೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2013, 6:58 IST
Last Updated 23 ಜುಲೈ 2013, 6:58 IST

ದಾವಣಗೆರೆ:  ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ನಲ್ಕುದರೆ ಹಾಗೂ ತಾವರಕೆರೆ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇಗುಲದಲ್ಲಿ ನಡೆದ ಕಳವು ಪ್ರಕರಣ ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿ ಆಗಿದ್ದು, ಇಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಮೈದೊಳ್ ಮಲ್ಲಾಪುರ ಗ್ರಾಮದ ವಸಂತ ಹಾಗೂ ಚಿಕ್ಕಬೆನ್ನೂರು ಗ್ರಾಮದ ಗುರುಮೂರ್ತಿ ಬಂಧಿತರು.
ಬಂಧಿತರಿಂದ ರೂ  7,68,300 ಮೌಲ್ಯದ ವೀರಭದ್ರೇಶ್ವರ ಸ್ವಾಮಿಯ ಬೆಳ್ಳಿಯ ಮುಖವಾಡ, ಕಿರೀಟ, ತಟ್ಟೆ ಹಾಗೂ ಚಿನ್ನದ ತಾಳಿ ಸೇರಿದಂತೆ ಇತರ ಚಿನ್ನ- ಬೆಳ್ಳಿ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. 2012ರಲ್ಲಿ ಈ ಕಳವು ಪ್ರಕರಣ ನಡೆದಿತ್ತು.

ಈ ಹಿಂದೆ ಕಳವು ಪ್ರಕರಣದಲ್ಲಿ ಭಾಗಿಯಾಗಿ, ಸೆರೆ ಸಿಕ್ಕಿದ್ದ ಇಬ್ಬರು ಆರೋಪಿಗಳು ಜೈಲು ವಾಸ ಕೂಡ ಅನುಭವಿಸಿದ್ದರು. ಇವರ ಜತೆಗೆ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ರಂಗ, ರಮೇಶ್, ಮಧು, ಈಶ ಎಂಬುವರು ವಿವಿಧ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪ್ರಕಾಶ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಜ್ಜಂಪುರ ಬಳಿ ಒಂಟಿ ಮಹಿಳೆಯೊಬ್ಬರಿಂದ ಮಾಂಗಲ್ಯ ಸರ ಕಳವು, ಬೀರೂರು ಬಳಿ ಸರ ಕಳವು, ಕಡೂರು ಬಳಿಯ ಗ್ರಾಮವೊಂದರಲ್ಲಿ ಮಹಿಳೆಯೊಬ್ಬರನ್ನು ಹೆದರಿಸಿ ಸರ ಹಾಗೂ ಉಂಗುರ ಕಸಿದುಕೊಂಡು ಪರಾರಿಯಾಗಿದ್ದರು. ಜತೆಗೆ, ಹಾವೇರಿ ಜಿಲ್ಲೆಯ ಹಲಗೇರಿ ಬಳಿಯ ಲಿಂಗದಹಳ್ಳಿ ಮತ್ತು ಹಂಸಭಾವಿ ಗ್ರಾಮಗಳ ದೇವಸ್ಥಾನದ ಕಳವು ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಭಾಗಿಯಾಗಿದ್ದರು ಎಂದು ಮಾಹಿತಿ ನೀಡಿದರು.

ಚನ್ನಗಿರಿ ಸಿಪಿಐ ಎಸ್.ಸಿ.ಪಾಟೀಲ್, ಪಿಎಸ್‌ಐ ಎಸ್.ಎಂ.ಉಮೇಶ್‌ಕುಮಾರ್, ಎಎಸ್‌ಐ ಜಡೇಶಂಕರಯ್ಯ ಹಾಗೂ ನಾಗರಾಜ, ಸಿಬ್ಬಂದಿ ರೇವಣಸಿದ್ದಪ್ಪ, ಈಶ್ವರ, ಲಕ್ಷ್ಮಣ, ನಟರಾಜ, ದೊಡ್ಡೇಶಿ, ಬಷೀರ್, ತಿರುಮಲೇಶ್, ಸಂತೋಷ, ಶಿವಕುಮಾರ, ಅರುಣ್‌ಕುಮಾರ್, ಅಣ್ಣಿಜಾತಪ್ಪ, ಮಂಜುನಾಥ್, ರವಿ ಕಾರ್ಯಾಚರಣೆಯ ತಂಡದಲ್ಲಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿನಾರಾಯಣ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.