ADVERTISEMENT

ರೆಸಾರ್ಟ್ ರಾಜಕಾರಣಕ್ಕೆ ಸಾಕ್ಷಿಯಾದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 9:45 IST
Last Updated 20 ಅಕ್ಟೋಬರ್ 2011, 9:45 IST

ದಾವಣಗೆರೆ: ಜಿಲ್ಲಾ ಪಂಚಾಯ್ತಿಯ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿಯ ಸದಸ್ಯರು ನಗರದ ಹೊರವಲಯದ ಜೆನೆಸಿಸ್ ರೆಸಾರ್ಟ್‌ನಲ್ಲಿ ತಂಗುವ ಮೂಲಕ ರೆಸಾರ್ಟ್ ರಾಜಕಾರಣಕ್ಕೆ ತಾಜಾ ಉದಾಹರಣೆಯಾದರು.

ಒಟ್ಟು 34 ಸದಸ್ಯ ಬಲದ ಜಿ.ಪಂ.ನಲ್ಲಿ ಬಿಜೆಪಿಯ 18 ಹಾಗೂ ಕಾಂಗ್ರೆಸ್‌ನ 16 ಸದಸ್ಯರಿದ್ದಾರೆ. ಮೊದಲ ಅವಧಿಯ 8 ತಿಂಗಳು ಆಡಳಿತ ನಡೆಸಿದ ಬಸವಲಿಂಗಪ್ಪ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಟಿ. ಮುಕುಂದ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ನಡೆದ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಬಿಜೆಪಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿತ್ತು.

ಯಾವುದೇ ಕಾರಣಕ್ಕೂ ವ್ಯತ್ಯಾಸ ಆಗದಿರಲಿ ಎಂಬ ಕಾರಣಕ್ಕೆ ಮಂಗಳವಾರ ಸಂಜೆಯೇ ಬಿಜೆಪಿ ಸದಸ್ಯರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಬೆಳಿಗ್ಗೆ ಶಾಮನೂರು ಆಂಜನೇಯ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದ ಸದಸ್ಯರು ನಂತರ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡರು.

ಪಕ್ಷದ ಜಿಲ್ಲಾಧ್ಯಕ್ಷ ಟಿ. ಗುರುಸಿದ್ಧನಗೌಡ ಅವರು ವರಿಷ್ಠರ ನಿರ್ಧಾರವನ್ನು ಸಭೆಯಲ್ಲಿ ಪ್ರಕಟಿಸಿದರು. ಅಧ್ಯಕ್ಷ ಸ್ಥಾನಕ್ಕೆ ವೀರೇಶ್ ಹನಗವಾಡಿ ಜತೆಗೆ ಅಣಜಿ ಕ್ಷೇತ್ರದ ಚಿದಾನಂದಪ್ಪ ಅವರೂ ಆಕಾಂಕ್ಷಿಯಾಗಿದ್ದರು. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಪ್ರೇಮಾ ಸಿದ್ದೇಶ್ ಅವರ ಜತೆಗೆ ಆನಗೋಡು ಕ್ಷೇತ್ರದ ಯಶೋದಮ್ಮ ಹಾಲೇಶಪ್ಪ ಅವರೂ ಆಕಾಂಕ್ಷಿಯಾಗಿದ್ದರು.

ಈ ಹಿನ್ನೆಲೆಯಲ್ಲಿ ಮಂಗಳವಾರವೇ ಚರ್ಚೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್, ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಇನ್ನಿತರ ವರಿಷ್ಠರು ತಾವು ಕೈಗೊಂಡಿದ್ದ ನಿರ್ಧಾರವನ್ನು ಸಭೆಯಲ್ಲಿ ಪ್ರಕಟಿಸಲು ಗುರುಸಿದ್ಧನಗೌಡರಿಗೆ ಸೂಚನೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಹರಿಹರಕ್ಕೆ ಅಧ್ಯಕ್ಷ ಸ್ಥಾನ ದೊರೆತರೆ ದಾವಣಗೆರೆ ತಾಲ್ಲೂಕಿಗೆ ಉಪಾಧ್ಯಕ್ಷ ಸ್ಥಾನ ದೊರೆಯಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಬುಧವಾರದ ಬೆಳವಣಿಗೆಯಲ್ಲಿ ಹಾಗೆ ಆಗಲಿಲ್ಲ. ಉಪಾಧ್ಯಕ್ಷ ಸ್ಥಾನ ಚನ್ನಗಿರಿ ತಾಲ್ಲೂಕಿಗೆ ಎಂದು ವರಿಷ್ಠರು ನಿರ್ಧರಿಸಿದ್ದರು.

ಈ ಬಾರಿ ಅವಕಾಶ ತಪ್ಪಿಸಿಕೊಂಡ ಚಿದಾನಂದಪ್ಪ ಅವರಿಗೆ ಮುಂದಿನ ಬಾರಿ ಅವಕಾಶ ನೀಡಬಹುದು ಎಂದು ಪಕ್ಷದ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಅದೇ ರೀತಿ ಮುಂದಿನ ಬಾರಿ ಉಪಾಧ್ಯಕ್ಷ ಸ್ಥಾನವೂ ದಾವಣಗೆರೆ ತಾಲ್ಲೂಕಿಗೇ ದೊರೆಯಲಿ ಎಂಬ ಉದ್ದೇಶವೂ ಇದೆ ಎನ್ನಲಾಗುತ್ತಿದೆ.

ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ 6 ತಿಂಗಳು ಅವಕಾಶ ನೀಡಿ ಬದಲಾವಣೆ ಮಾಡಬಹುದು ಎಂದು ಹೇಳಲಾಗು ತ್ತಿದೆ. ಆದರೆ, ಈ ಬಗ್ಗೆ ಪ್ರಶ್ನಿಸಿದರೆ ಎಸ್.ಎಂ. ವೀರೇಶ್ ಅವರು ತಮಗೆ ಆ ರೀತಿ ಏನೂ ಹೇಳಿಲ್ಲ, ಆದರೆ ವರಿಷ್ಠರ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿದರು.

ಬೆಳಿಗ್ಗೆ ಹರಿಹರ ಶಾಸಕ ಬಿ.ಪಿ. ಹರೀಶ್ ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ಕಾಣಿಸಿಕೊಂಡರು. ನೂತನ ಅಧ್ಯಕ್ಷ-ಉಪಾಧ್ಯಕ್ಷರ ಬೆಂಬಲಿಗರು ಆವರಣದೊಳಗೆ ಕಾಯುತ್ತಿದ್ದ ದೃಶ್ಯ ಕಂಡುಬಂತು. ಚುನಾವಣೆ ಮುಗಿಯುತ್ತಿದ್ದಂತೆಯೇ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಜಾರಿಬಿದ್ದ ಅಧ್ಯಕ್ಷ!
ಚುನಾವಣೆ ಪ್ರಕ್ರಿಯೆ ಮುಗಿದ ಮೇಲೆ ನೂತನ ಅಧ್ಯಕ್ಷ ಎಸ್.ಎಂ. ವೀರೇಶ್ ಹೊರಗೆ ಬಂದರು. ಅಲ್ಲಿ ಅದಾಗಲೇ ಜಮಾಯಿಸಿದ್ದ ಬೆಂಬಲಿಗರು ಅವರನ್ನು ಹೆಗಲ ಮೇಲೆ ಹೊತ್ತುಕೊಂಡರು.

ವಿಜಯೋತ್ಸವ ನಡೆಯುತ್ತಿರು ವಾಗಲೇ ಆಯತಪ್ಪಿದ ವೀರೇಶ್ ಅವರು, ಬೆಂಬಲಿಗರ ಹೆಗಲ ಮೇಲಿಂದ ಜಾರಿಬಿದ್ದರು, ಮತ್ತೆ ವಿಜಯೋತ್ಸವ ಮುಂದುವರಿಯಿತು.

ಪರಿಚಯ: ನೂತನ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಅವರು ಡಿ ಫಾರ್ಮಾ ವ್ಯಾಸಂಗ ಮಾಡಿದ್ದು ಉಪಾಧ್ಯಕ್ಷೆ ಪ್ರೇಮಾ ಸಿದ್ದೇಶ್ ಬಿಎ (ಎಲ್‌ಎಲ್‌ಬಿ) ಪದವೀಧರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.