ADVERTISEMENT

ರೈತರ ಬದುಕು ಕಸಿಯುವ ಪ್ರಯತ್ನ ಸಲ್ಲದು

ರೈತ ಸಂಘ, ಹಸಿರು ಸೇನೆ ಸಭೆಯಲ್ಲಿ ಕೋಡಿಹಳ್ಳಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 8:32 IST
Last Updated 17 ಸೆಪ್ಟೆಂಬರ್ 2013, 8:32 IST

ದಾವಣಗೆರೆ:  ರೈತರ ಜಮೀನು ಹಗಲು ದರೋಡೆ ಆಗಬಾರದು. ಅವರ ಬದುಕು ಹಾಳುಮಾಡಿದರೆ ರೈತರೇ ತಿರುಗುಬೀಳಲಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಎಚ್ಚರಿಸಿದರು.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಸೋಮವಾರ ನಡೆದ ರೈತ ಸಭೆಯಲ್ಲಿ ಅವರು ಮಾತನಾಡಿದರು. ಪರಿಹಾರ ನೀಡಿದರೂ ಎಕರೆಗೆ ` 1 ಲಕ್ಷ ಸಿಗಲಿದೆ. ಇದು ಯಾವ ರೀತಿಯ ಪರಿಹಾರ. ` 1 ಲಕ್ಷಕ್ಕೆ ರಾಜ್ಯದ
ಯಾವ ಮೂಲೆಯಲ್ಲಿ ಜಮೀನು ಸಿಗುತ್ತಿದೆ ಎಂದು ಪ್ರಶ್ನಿಸಿದರು.

ರೈತರ ಬದುಕು ಹಾಳು ಮಾಡಿ ಸರ್ಕಾರ ಭೂಮಿಸ್ವಾಧೀನ ಮಾಡಿಕೊಳ್ಳಬಾರದು. ಕೇಂದ್ರದ ಮಂತ್ರಿಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಗಂಭೀರವಾಗಿ ಪರಿಗಣಿಸಿ, ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

ಪ್ರಸಕ್ತ ವರ್ಷ ಮಲೆನಾಡು ಭಾಗದಲ್ಲಿ ವಿಪರೀತ ಮಳೆಯಾಗಿ ಬೆಳೆಗಳು ಹಾನಿಯಾಗಿವೆ. ಮತ್ತೊಂದೆಡೆ 44 ತಾಲ್ಲೂಕುಗಳಲ್ಲಿ ಬರ ಕಾಡುತ್ತಿದೆ. ರಬ್ಬರ್‌, ಅಡಿಕೆ ಹಾಗೂ ತೆಂಗು ರೈತರಿಗೆ ಸಿಗುತ್ತಿಲ್ಲ. ರೈತರಿಗೆ ನಷ್ಟವುಂಟಾಗಿದೆ. ಕೂಡಲೇ, ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ಹಾವಳಿ ಹೆಚ್ಚಾಗಿದೆ. ಇವುಗಳ ನಿಯಂತ್ರಣಕ್ಕೆ ಕಾನೂನುಗಳು ಇದ್ದರೂ ಪ್ರಬಲವಾಗಿಲ್ಲ. ಕೃಷಿ ವಿಶ್ವವಿದ್ಯಾಲಯಗಳು ಬಹುರಾಷ್ಟ್ರೀಯ ಕಂಪೆನಿಗಳ ಏಜೆಂಟರಂತೆ ವರ್ತಿಸುತ್ತಿವೆ. ಹೊಸ ಸಂಶೋಧನೆಗಳಿಗೆ ಒತ್ತು ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೈಗಾರಿಕೆ ಹಾಗೂ ಕೃಷಿಗೆ ಪೂರಕ ಕೆಲಸ ಮಾಡುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ಅಂತಹ ಪ್ರಯತ್ನಗಳು ನಡೆಯುತ್ತಿಲ್ಲ. ಭೂಸ್ವಾಧೀನ ಮಸೂದೆ, ಆಹಾರ ಭದ್ರತಾ ಮಸೂದೆ, ವಿದೇಶಿ ಬಂಡವಾಳ ನೇರ ಹೂಡಿಕೆ ಮಸೂದೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಅದು ಸಂಸತ್‌ ಹಾಗೂ ಸಾರ್ವಜನಿಕರ ಮಧ್ಯೆ ಚರ್ಚೆ ನಡೆದ ಬಳಿಕ ಜಾರಿಗೆ ಬರಬೇಕು ಎಂದು ಆಗ್ರಹಿಸಿದರು.

ಜಾಗತಿಕ ಬಂಡವಾಳದಾರರು ಚಿಲ್ಲರೆ ಮಾರುಕಟ್ಟೆ ಪ್ರವೇಶಿಸಿದರೆ ದೇಶ ಆರ್ಥಿಕವಾಗಿ ಪ್ರಬಲಗೊಳ್ಳುತ್ತದೆ ಎಂದು ಮನದಟ್ಟು ಮಾಡುತ್ತಿದ್ದಾರೆ. ನಮಗೆ ಆಕರ್ಷಣೆ ತೋರಿಸಿ ಬಹುರಾಷ್ಟ್ರೀಯ ಕಂಪೆನಿಗಳನ್ನು ತರುವ ಪ್ರಯತ್ನ ನಡೆಯುತ್ತಿದೆ. 1974ರ ಭೂಸುಧಾರಣಾ ಕಾಯ್ದೆ ಅನ್ವಯ ಕೃಷಿಕರಿಗೆ ಮಾತ್ರ ಭೂಮಿಕೊಳ್ಳುವ ಅಧಿಕಾರವಿತ್ತು. ಆದರೆ, ಇಂದು ಬಂಡವಾಳಶಾಹಿಗಳು ಭೂಮಿಕೊಳ್ಳುವ ಅಧಿಕಾರ ಬಂದಿದೆ. ಇದು ದುರಂತ ಎಂದು ವಿಷಾದಿಸಿದರು.

ನಾವು ಪ್ರಜಾತಂತ್ರ ವ್ಯವಸ್ಥೆಯಡಿ ಕೆಲಸ ಮಾಡುತ್ತಿದ್ದೇವೆ. ದೇಶದ ಪ್ರಗತಿಗೆ ಅನುಕೂಲವಾಗುವ ಕಾಯ್ದೆ ಜಾರಿಗೆ ತರಬೇಕು. ಅಪಾಯಕಾರಿ ನೀತಿ ಜಾರಿಗೊಳಿಸುವ ಮೂಲಕ ಈ ದೇಶವನ್ನು ಅತಂತ್ರ ಸ್ಥಿತಿಗೆ ತಳ್ಳಬಾರದು. ಯಾವುದೇ ಕಾನೂನುಗಳು ಪೂರ್ಣ ಪ್ರಮಾಣದಲ್ಲಿ ವಿಮರ್ಶೆಗೆ ಒಳಪಟ್ಟ ಬಳಿಕ ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.

ಆಯ್ಕೆ: ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಉಪಾಧ್ಯಕ್ಷರಾಗಿ ಬುಳ್ಳಾಪುರದ ಹನುಮಂತಪ್ಪ, ಕಾರ್ಯಾಧ್ಯಕ್ಷರಾಗಿ ಹರಿಹರ ನಾಗರಾಜ್‌ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.