ADVERTISEMENT

ಲಾಭಗಳಿಕೆಗೆ ಜನರ ಮುಗ್ಧತೆಯೇ ಬಂಡವಾಳ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 10:25 IST
Last Updated 24 ಜನವರಿ 2011, 10:25 IST

ದಾವಣಗೆರೆ: ಜ್ಞಾನ ಮತ್ತು ಹಣ ಎರಡನ್ನೂ ಬೆರೆಸುವ ಮೂಲಕ ವಿದ್ಯುನ್ಮಾನ ಮಾಧ್ಯಮಗಳು ಜನರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡು ಲಾಭಗಳಿಸುತ್ತಿವೆ ಎಂದು ಕವಿ ಜಯಂತ್ ಕಾಯ್ಕಿಣಿ ಆರೋಪಿಸಿದರು.ದಾವಣಗೆರೆಯಲ್ಲಿ ಭಾನುವಾರ ನಡೆದ ಜಯದೇವ ಶ್ರೀಗಳ 54ನೇ ಸ್ಮರಣೋತ್ಸವ ಹಾಗೂ ಜಯದೇವಶ್ರೀ, ಶೂನ್ಯಪೀಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೆಳ-ಮಧ್ಯಮ ವರ್ಗದ ಜನರ ಮನಸ್ಸಿನ ದುರ್ಬಲತೆಯನ್ನು ಬಂಡವಾಳ ಮಾಡಿಕೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ರೋಚಕ ಮಾಹಿತಿ ನೀಡುವ ಭರದಲ್ಲಿ ಜನರ ಓದಿನ ಅಭಿರುಚಿಯನ್ನು ಮೊಂಡು ಮಾಡುತ್ತಿವೆ. ಹಣ ಇದ್ದವನೇ ಬಲಶಾಲಿ ಎಂಬ ತತ್ವವನ್ನು ಬಿಂಬಿಸುತ್ತಿವೆ. ಇಂತಹ ದುಷ್ಟ ಪ್ರಯತ್ನಗಳು ನಿಲ್ಲಬೇಕಾದರೆ ಜನರ ಆಂತರಿಕ ಸಾಕ್ಷಿ ಪ್ರಜ್ಞೆ ಜಾಗೃತಗೊಳ್ಳಬೇಕು ಎಂದು ಸಲಹೆ ನೀಡಿದರು.

ದೇಶದಲ್ಲಿ ಇಂದು ಏನೆಲ್ಲ ಸಾಧನೆ ಮಾಡಿದ್ದೇವೆ. ಆದರೆ, ಮಾನವೀಯ ಮೌಲ್ಯಗಳನ್ನು ಮರೆತಿದ್ದೇವೆ. ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ ವಲಯದಲ್ಲಿನ ಯುವಕರ ಗೈರುಹಾಜರಿ ಕಳವಳಕಾರಿಯಾದ ವಿಚಾರ ಎಂದು ಪ್ರತಿಪಾದಿಸಿದರು.ದೇಶವನ್ನು ಆಳುವ ಸರ್ಕಾರಗಳು ಶೇ. 2ರಷ್ಟಿರುವ ಸಂಘಟಿತರ ಪರವಾಗಿ ಎಲ್ಲ ಯೋಜನೆಗಳು ರೂಪಿಸುತ್ತಿದ್ದು, ಶೇ. 98ರಷ್ಟಿರುವ ಅಸಂಘಟಿತ ವಲಯವನ್ನು ಕಡೆಗಣಿಸಿವೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೋರಾಟಗಾರ ಎಂ. ಜಯಣ್ಣ ಮಾತನಾಡಿ, ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವಲ್ಲಿ ಎಲ್ಲ ಸರ್ಕಾರಗಳು ವಿಫಲವಾಗಿವೆ. ಹಕ್ಕುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸೋತಿವೆ ಎಂದು ಆಪಾದಿಸಿದರು.ಹಿಂದುಳಿದ ವರ್ಗಗಳ ಹೋರಾಟಕ್ಕೆ ಶಿವಮೂರ್ತಿ ಶರಣರು ಧ್ವನಿಯಾಗಿದ್ದಾರೆ. ಅವರ ಬೆಂಬಲದಿಂದ ರಾಜ್ಯದಲ್ಲಿ ಹಿಂದುಳಿದವರ ಹೋರಾಟಕ್ಕೆ ಬೆಂಬಲ ದೊರೆತಿದೆ ಎಂದು ಶ್ಲಾಘಿಸಿದರು.

ಇಸ್ಲಾಂಧರ್ಮ ಗುರು ಇಬ್ರಾಹಿಂ ಸಕಾಫಿ ಮಾತನಾಡಿ, ಪ್ರಪಂಚಕ್ಕೆ ಶಾಂತಿ ಬೋಧಿಸಿದ ಮಹಾನ್ ಧರ್ಮ ಇಸ್ಲಾಂ. ಬಸವಣ್ಣ, ಬುದ್ಧ ಮತ್ತಿತರು ಅದನ್ನೇ ಪ್ರತಿಪಾದಿಸಿದರು. ಆದರೆ, ಇಂದು ಕೆಲವರು ಭಯೋತ್ಪಾನೆಯ ಮೂಲಕ ಧರ್ಮದ ಆಶಯಕ್ಕೆ ವಿರುದ್ಧವಾಗಿ ನಡೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.