ADVERTISEMENT

ವಿಜೃಂಭಣೆಯ ದೈವಜ್ಞ ದರ್ಶನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 6:10 IST
Last Updated 21 ಅಕ್ಟೋಬರ್ 2011, 6:10 IST

ದಾವಣಗೆರೆ: ಹೊನ್ನಾವರ ತಾಲ್ಲೂಕಿನ ಕರ್ಕಿಯಲ್ಲಿ ಸ್ಥಾಪಿತವಾಗಿರುವ ದೈವಜ್ಞ ಸಮಾಜದ ಏಕೈಕ ಧರ್ಮಪೀಠವಾದ ದೈವಜ್ಞ ಬ್ರಾಹ್ಮಣ ಮಠ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಅಂಗವಾಗಿ ಸಮಾಜದ ಗುರು ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಅವರ `ದೈವಜ್ಞ ದರ್ಶನ~ ಕಾರ್ಯಕ್ರಮದ ಅಡಿ ರಾಜರಾಜೇಶ್ವರಿ ಸ್ವರೂಪಿಣಿ ಜ್ಞಾನೇಶ್ವರಿ ದೇವಿಯ ರಥವನ್ನು ಗುರುವಾರ ನಗರಕ್ಕೆ ಸಂಭ್ರಮದಿಂದ   ಬರಮಾಡಿಕೊಳ್ಳಲಾಯಿತು.

ನಗರದ ದುರ್ಗಾಂಬಿಕಾ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ, ಅಲ್ಲಿಂದ ಕಾಳಿಕಾದೇವಿ ರಸ್ತೆ- ಮಂಡಿಪೇಟೆ- ಗಾಂಧಿ ವೃತ್ತ- ಪಿ.ಬಿ. ರಸ್ತೆ ಮೂಲಕ ರೇಣುಕಾ ಬಡಾವಣೆಯ ದೈವಜ್ಞ ಕಲ್ಯಾಣ ಮಂಟಪದವರೆಗೆ ಸಂಚರಿಸಿತು.

ಪೂರ್ಣಕುಂಭ ಮೇಳದಲ್ಲಿ ದೈವಜ್ಞ ಸಮಾಜ, ಜ್ಞಾನೇಶ್ವರಿ ಮಹಿಳಾ ಮಂಡಳಿಯ 300ರಿಂದ 400 ಮಹಿಳೆಯರು ಭಾಗವಹಿಸಿದ್ದರು. ಡೊಳ್ಳು ಕುಣಿತ, ಹಗಲು ವೇಷ ಕಲಾವಿದರು, ಸ್ತಬ್ಧಚಿತ್ರಗಳು, ನಂದಿಕೋಲು ಕಣಿತದ ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ದೈವಜ್ಞ ಸಮಾಜದ ಅಧ್ಯಕ್ಷ ಸತ್ಯನಾರಾಯಣ, ವಾಸುದೇವ ರಾಯ್ಕರ್, ಪ್ರಶಾಂತ್ ಸೇರಿದಂತೆ ದೈವಜ್ಞ ಸಮಾಜದ ಹಲವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.