ADVERTISEMENT

ವಿಭಿನ್ನ ಕಲಾಲೋಕ ಸೃಷ್ಟಿಸಿದ ಮಾಯಾ-ಅಯಾಂ

​ಪ್ರಜಾವಾಣಿ ವಾರ್ತೆ
Published 14 ಜನವರಿ 2011, 8:35 IST
Last Updated 14 ಜನವರಿ 2011, 8:35 IST

ದಾವಣಗೆರೆ: ಜಾಗತಿಕ ಪರಿಭಾಷೆಯಾದ ನೃತ್ಯದ ಮೂಲಕ ಯಾವ ವಿಷಯವನ್ನಾದರೂ ಅಭಿವ್ಯಕ್ತಪಡಿಸಬಹುದು ಎಂಬುದಕ್ಕೆ ಗುರುವಾರ ಬಾಪೂಜಿ ಸಭಾಂಗಣದಲ್ಲಿ ನಡೆದ ‘ಮಾಯಾ- ಅಯಾಂ’ ವಿಭಿನ್ನ ನೃತ್ಯರೂಪಕವೇ ಸಾಕ್ಷಿಯಾಯಿತು.

ಇಂತಹ ಒಂದು ವಿನೂತನವಾದ, ರಂಗ ಸಾಧ್ಯತೆಯ ಪ್ರಯೋಗ ಮಾಡಿದ್ದು, ನಗರದ ಚಿರಂತನ ಅಕಾಡೆಮಿ ಸಹಕಾರದಲ್ಲಿ ಚಿತ್ರಲೇಖಾ ಡ್ಯಾನ್ಸ್ ಕಂಪೆನಿ ಹಾಗೂ ಬೆಂಗಳೂರಿನ ನೃತ್ಯರುತ್ಯ ತಂಡಗಳು.ಬಹು ಮಾಧ್ಯಮ ಸಂಯೋಜನೆಯ ಮೂಲಕ ಪುರಾಣದ ಕಲ್ಪನೆ, ಪ್ರಪಂಚದ ಉಗಮ, ವಿಷ್ಣುವಿನ ದಶಾವತಾರಗಳನ್ನು ನೃತ್ಯದ ಮೂಲಕ ಅಭಿವ್ಯಕ್ತ ಮಾಡಿದ್ದು, ನೆರೆದ ಪ್ರೇಕ್ಷಕರನ್ನು ತದೇಕಚಿತ್ತರನ್ನಾಗಿಸಿತು.ಸಾಂಪ್ರದಾಯಿಕ ಭರತನಾಟ್ಯದ ಜತೆಗೆ, ಸಮಕಾಲೀನ, ಜಾನಪದ ನೃತ್ಯ, ಯೋಗ ಹಾಗೂ ಮಾರ್ಷಲ್ ಆರ್ಟ್ಸ್‌ಗಳ ಸಂಯೋಜನೆಯಲ್ಲಿ ಮಾಯಾ-ಅಯಾಂನ್ನು ಪ್ರಸ್ತುತಪಡಿಸಲಾಯಿತು.

ವಿಷ್ಣುವಿನ ದಶಾವತಾರದ ನೃತ್ಯ ಆರಂಭವಾದಂತೆ ತನ್ನ ಒಳಸುರುಳಿಯನ್ನು ಬಿಚ್ಚಿಕೊಳ್ಳುತ್ತಾ ಸಾಗಿದಂತೆ, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತದೆ. ನೋಡ ನೋಡುತ್ತಿದ್ದಂತೆ ವಿವಿಧ ಅವತಾರಗಳಾದ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ಪರಶುರಾಮದಿಂದ ಕಲ್ಕಿ ಅವತಾರದವರೆಗೆ ಪ್ರೇಕ್ಷಕರನ್ನು ಹಿಡಿದಿಟ್ಟಿದ್ದು ವಿಶೇಷವಾಗಿತ್ತು. ಜೀವ ಸಂಕುಲದ ಉಗಮವನ್ನು, ವಿಶ್ವದ ಹುಟ್ಟನ್ನು ಡಿಜಿಟಲ್ ಇಮೇಜ್ ಮೂಲಕ ರಸದೌತಣವನ್ನು ನೋಡುಗರಿಗೆ ಮಾಯಾ -ಅಯಾಂ ತಂಡ ಉಣಬಡಿಸಿತು.

ಇದಕ್ಕೂ ಮೊದಲು ಶಿವನ ಶಕ್ತಿ, ವೀರಾವೇಶ, ಕೋಪ, ಸಂಯಮ, ರೌದ್ರ ಮುಂತಾದ ರಸಗಳನ್ನು ‘ಸ್ವಯಂ ಶಿವಂ’ ರೂಪಕ ಪ್ರದರ್ಶಿಸಿದರು.
ಇದಕ್ಕೆ ರಘು ದೀಕ್ಷಿತ್, ಪ್ರವೀಣ್ ಡಿ. ರಾವ್ ಅವರು ಸಂಗೀತದ ಮೂಲಕ, ಯುನೈಟೆಡ್ ಕಿಂಗ್ಡಮ್ ಬರ್ಮಿಂಗ್ ಹ್ಯಾಮ್‌ನ ಸುಭಾಷ್ ವಿಮನ್, ಗೀತಾ ಬಲ್ಲಾಳ್ ಹಾಗೂ ಬೆಂಗಳೂರಿನ ಮಾಧುರಿ ಉಪಾಧ್ಯಾಯ ಮತ್ತು ಆಕಾಶ್ ಒಡೆದ್ರಾ ನೃತ್ಯದ ಮೂಲಕ ಜೀವ ತುಂಬಿದರು.

ತೊಗರಿ ಬೆಳೆ ಕ್ಷೇತ್ರೋತ್ಸವ
ದಾವಣಗೆರೆ ತಾಲ್ಲೂಕು ನೇರ್ಲಿಗೆ ಗ್ರಾಮದ ಮಡಿವಾಳರ ನಿಂಗಪ್ಪ ಮತ್ತು ಓಂಕಾರಪ್ಪ ಅವರ ಜಮೀನಿನಲ್ಲಿ ಈಚೆಗೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ, ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರದ ವತಿಯಿಂದ ತೊಗರಿ ಬೆಳೆ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರು ವಿವಿ ಅಭಿವೃದ್ಧಿಪಡಿಸಿರುವ ಬಿಆರ್‌ಜಿ-2 ತೊಗರಿ ತಳಿಯನ್ನು ಮೆಕ್ಕೆಜೋಳದಲ್ಲಿ ಆಂತರಿಕ ಬೆಳೆಯಾಗಿ ಬೆಳೆಯಲಾಗಿದ್ದು, ಉತ್ತಮವಾಗಿ ಕಾಯಿಕಟ್ಟಿದೆ ಎಂದು ಕೃಷಿ ತಜ್ಞರು ತಿಳಿಸಿದ್ದಾರೆ. ಡಾ.ಟಿ.ಎಚ್. ಗೌಡ, ಡಾ.ಡಿ. ಚನ್ನನಾಯ್ಕ, ಡಾ.ರಾಮಪ್ಪ ಪಾಟೇಲ್, ಡಾ.ಜಿ.ಬಿ. ಜಗದೀಶ, ಡಾ.ಬಿ.ಎಂ. ಆನಂದಕುಮಾರ್, ಡಾ.ಎಂ. ಮಾರುತೇಶ ಹಾಗೂ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.