ADVERTISEMENT

ವಿವಿಯಲ್ಲಿ ಪರಿಶಿಷ್ಟರ ಹಣ ದುರುಪಯೋಗ: ಡಿಎಸ್‌ಎಸ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 8:20 IST
Last Updated 19 ಫೆಬ್ರುವರಿ 2011, 8:20 IST

ದಾವಣಗೆರೆ: ಪರಿಶಿಷ್ಟ ಜಾತಿ-ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಾದ ಶೇ. 22.75ರ ಹಣವನ್ನು ದಾವಣಗೆರೆ ವಿವಿ ದುರುಪಯೋಗಪಡಿಸಿಕೊಳ್ಳುತ್ತಿದೆ. ದಲಿತ ನೌಕರರಿಗೆ ಕಿರುಕುಳ ನೀಡಿ ವರ್ಗಾವಣೆ ಮಾಡುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಬಣ) ಮುಖಂಡರು ಆರೋಪಿಸಿದ್ದಾರೆ.ಸಮಿತಿ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ವಿವಿಗೆ ಭೇಟಿ ನೀಡಿ ಈ ಬಗ್ಗೆ ಕುಲ ಸಚಿವರೊಂದಿಗೆ ತೀವ್ರ ಮಾತಿನ ಚಕಮಕಿ ನಡೆಸಿದರು. ಪರಿಶಿಷ್ಟರ ಹಣ ದುರುಪಯೋಗ ತಡೆಯಬೇಕು. ದಲಿತ ಸಿಬ್ಬಂದಿಗೆ ಕಿರುಕುಳ ನೀಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸ್ವಾಯತ್ತ ಸಂಸ್ಥೆಗಳಿಗೆ ಸರ್ಕಾರದ ಮಾರ್ಗಸೂಚಿ ಅನ್ವಯ ಬಿಡುಗಡೆಯಾಗುವ ಅನುದಾನ ಹಾಗೂ ಇತರೆ ಆದಾಯದ ಮೂಲಗಳಿಂದ ಸಂಗ್ರಹಿಸುವ ನಿಧಿಯ ಶೇ. 22.75ರ ಹಣವನ್ನು 16.20 ಹಾಗೂ 6.55ರ ಅನುಪಾತದಲ್ಲಿ ಪರಿಶಿಷ್ಟ ಜಾತಿ-ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಕ್ಷೇಮಾಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳಿಗೆ ಬಳಸಬೇಕು. ಆದರೆ, ವಿವಿ ಅದನ್ನು ಪರಿಶಿಷ್ಟರಿಗೆ ಬಳಸದೇ, ಅನುದಾನ ದುರುಪಯೋಗ ಪಡಿಸಿಕೊಳ್ಳುವ ಮೂಲಕ ಅನ್ಯಾಯ ಎಸಗಿದೆ ಎಂದು ಆರೋಪಿಸಿದರು.

ಫೆ. 28ರ ಒಳಗೆ ಈ ಬಗ್ಗೆ ಕುಲಪತಿಗಳು ಲಿಖಿತ ವಿವರಣೆ ನೀಡಬೇಕು. ಲೋಪ-ದೋಷ ಸರಿಪಡಿಸಬೇಕು. ಇಲ್ಲದಿದ್ದರೆ ವಿವಿ ಮುಂದೆ ಧರಣಿ ಸತ್ಯಾಗ್ರಹ ನಡೆಸ ಲಾಗುವುದು ಎಂದು ಎಚ್ಚರಿಸಿದರು.ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಆಲೂರು ಲಿಂಗರಾಜ್, ಜಿಲ್ಲಾ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ, ನಗರ ಸಂಚಾಲಕ ಬಿ. ದುಗ್ಗಪ್ಪ, ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್, ಎನ್. ವಾಸುದೇವ್, ಗಿಡ್ಡಿ ಮಂಜುನಾಥ್, ಗಂಗನಕಟ್ಟೆ ಹನುಮಂತಪ್ಪ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.