ADVERTISEMENT

ವೆನಿಲ್ಲಾ, ಅಡಿಕೆ ಬೆಳೆಗಾರರಿಗೆ ಕೇಂದ್ರ ಸ್ಪಂದನ

​ಪ್ರಜಾವಾಣಿ ವಾರ್ತೆ
Published 18 ಮೇ 2012, 5:55 IST
Last Updated 18 ಮೇ 2012, 5:55 IST

ದಾವಣಗೆರೆ: ದಾವಣಗೆರೆಯ ದಾಮ್ಕೊಸ್, ಚನ್ನಗಿರಿಯ ತುಮ್ಕೊಸ್ ಅಡಿಕೆ ಬೆಳೆಗಾರರ ಸಂಘ ಮತ್ತು ಜಿಲ್ಲಾ ವೆನಿಲ್ಲಾ ಬೆಳೆಗಾರರ ಸಂಘ, ಕಾಫಿ, ರೇಷ್ಮೆ  ಬೆಳೆಗಾರರ ನಿಯೋಗ ಈಚೆಗೆ ಸಚಿವ ವೀರಪ್ಪ ಮೋಯ್ಲಿ ನೇತೃತ್ವದಲ್ಲಿ ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ, ಬೆಳೆಗಾರರ ಆರ್ಥಿಕ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಸಲ್ಲಿಸಿದ್ದು, ವಿಶೇಷ ಪ್ಯಾಕೇಜ್ ಪ್ರಕಟಿಸುವಂತೆ ಒತ್ತಾಯಿಸಿದೆ.

ಭೇಟಿ ನೀಡಿದ್ದ ನಿಯೋಗಕ್ಕೆ ಭರವಸೆ ನೀಡಿರುವ ಮುಖರ್ಜಿ ಅವರು ಸರ್ಕಾರ ಸ್ಪಂದಿಸಿರುವುದಾಗಿ ತಿಳಿಸಿದ್ದಾರೆ ಎಂದು ಜಿಲ್ಲಾ ವೆನಿಲ್ಲಾ ಬೆಳೆಗಾರರ ಸಂಘ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಡಿಕೆ ಬೆಳೆಗಾರರಿಗೆ ಕೆಲವು ಪರಿಹಾರಗಳನ್ನು ಸರ್ಕಾರ ಪ್ರಕಟಿಸಿದ್ದು, 2009ರಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರ ಬ್ಯಾಂಕುಗಳಿಂದ ಪಡೆದ ಸಾಲವನ್ನು ಮರು ಪಾವತಿ ಮಾಡಲು ರೈತರಿಗೆ 11 ವರ್ಷಗಳ ಕಾಲಾವಕಾಶ ಕಲ್ಪಿಸಿದ್ದು, ಕೇಂದ್ರ ಹಣಕಾಸು ಇಲಾಖೆ ಸಾಲದ ಕಂತುಗಳನ್ನು 11 ವರ್ಷಕ್ಕೆ ಮರು ಹೊಂದಾಣಿಕೆ ಮಾಡುವಂತೆ ಸಾಲ ನೀಡಿದ ಬ್ಯಾಂಕ್‌ಗಳಿಗೆ ಸೂಚಿಸಿದೆ.

400 ಕ್ವಿಂಟಲ್‌ಗಿಂತ ಕಡಿಮೆ ಬೆಳೆಯುವ ಬೆಳೆಗಾರರು ಹೊಸ ಸಾಲ ಪಡೆಯಬಹುದಾಗಿದ್ದು, ರೂ ಐದು ಲಕ್ಷ ಸಾಲ ಪಡೆದ ಬೆಳೆಗಾರರಿಗೆ ಬಡ್ಡಿ ಅಸಲು ಮರುಪಾವತಿಗೆ ಒಂದು ವರ್ಷ ರಜೆ ನೀಡಲಾಗಿದೆ. 2009ರಿಂದ 2012ರ ವರೆಗೆ ಬೆಳೆಗಾರರು ಪಡೆದ ಸಾಲದ ಬಡ್ಡಿ ಮೇಲೆ ವಿಧಿಸಲಾಗಿದ್ದ ಸುಸ್ತಿ ಬಡ್ಡಿಯನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಗೋರಖನಾಥ ಸಮಿತಿ ಅಡಿಕೆ ಬೆಳೆಗಾರರ ಸಾಲವನ್ನು ಮನ್ನಾ ಮಾಡಬೇಕು ಎಂದು ಶಿಫಾರಸು ಮಾಡಿತ್ತು. ರಾಜ್ಯದ ಸರ್ವ ಪಕ್ಷ ನಿಯೋಗ ಕೂಡಾ ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿತ್ತು.

 ನಿಯೋಗದಲ್ಲಿ ಸಂಸದ ಆಸ್ಕರ್ ಫರ್ನಾಂಡಿಸ್, ಜಯಪ್ರಕಾಶ್ ಹೆಗ್ಡೆ, ಆರ್. ದೃವ ನಾರಾಯಣ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಟಿ.ಸಿ. ಗಂಗಾಧರ ಮತ್ತು ಪದಾಧಿಕಾರಿಗಳು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.