ADVERTISEMENT

ವೈದ್ಯಕೀಯ ಕ್ಷೇತ್ರಕ್ಕೆ ಬಳಕೆಯಾಗದ ಅನುದಾನ: ಜಯಚಂದ್ರ

​ಪ್ರಜಾವಾಣಿ ವಾರ್ತೆ
Published 11 ಜೂನ್ 2012, 6:05 IST
Last Updated 11 ಜೂನ್ 2012, 6:05 IST

ಚಿತ್ರದುರ್ಗ: ವೈದ್ಯಕೀಯ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಉಪ ನಾಯಕ ಟಿ.ಬಿ. ಜಯಚಂದ್ರ ವಿಷಾದಿಸಿದರು.

ನಗರದ ತರಾಸು ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ಚಿತ್ರದುರ್ಗದ ಖಾಸಗಿ ನರ್ಸಿಂಗ್ ಶಾಲೆಗಳ ಆಡಳಿತ ಮಂಡಳಿ ವತಿಯಿಂದ ಆಯೋಜಿಸಿದ್ದ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ.ಪಿ.ವಿ. ಶ್ರಿಧರ್‌ಮೂರ್ತಿ ಅವರಿಗೆ ಸನ್ಮಾನ ಹಾಗೂ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಮಾಜಿ ಕಾರ್ಯದರ್ಶಿ ವೈ.ಎಚ್. ಸಾಲಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವೈದ್ಯಕೀಯ ಕ್ಷೇತ್ರ ನೀಡುತ್ತಿರುವ ನೂರಾರು ಕೋಟಿ ಹಣ ಸರ್ಕಾರ ಬಳಕೆ ಮಾಡಿಕೊಳ್ಳಬೇಕಿದೆ. ಅಲ್ಲದೇ, ಈ ಕ್ಷೇತ್ರಕ್ಕೆ ಹೆಚ್ಚು ದಾದಿಯರನ್ನು ನೇಮಕ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ ಎಂದರು.

ADVERTISEMENT

ಈಗಾಗಲೇ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಕಂಡಿದ್ದು, ರಾಜ್ಯದ ವೈದ್ಯರು ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ನರ್ಸಿಂಗ್ ವ್ಯಾಸಂಗ ಮಾಡಿದವರಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ ಎನ್ನುವ ಕಾರಣದಿಂದಲೇ ಪ್ರಸ್ತುತ ದಿನಗಳಲ್ಲಿ ನರ್ಸಿಂಗ್ ಶಾಲೆಗಳು ನಾಯಿಕೊಡೆಗಳಂತೆ ತಲೆಎತ್ತಿವೆ. ಎಲ್ಲ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುವ ಕಡೆ ಕೇಂದ್ರಿಕರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್.ಕೆ. ಬಸವರಾಜನ್, ಡಾ.ಪಿ.ವಿ. ಶ್ರೀಧರ್‌ಮೂರ್ತಿ ತಮ್ಮ ಯೋಗ್ಯತೆಯ ಮೇಲೆ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದಾರೆ. ಇಂದಿನ ವ್ಯವಸ್ಥೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದವರಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಹಣ ಮತ್ತು ಶಿಫಾರಸಿಗೆ ಒಳಗಾಗಿ ಸ್ಥಾನಮಾನ ಬೇರೆಯವರ ಪಾಲಾಗುತ್ತಿದೆ. ಅರ್ಹ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಿದಾಗ ಮಾತ್ರ ಅದೊಂದು ಉತ್ತಮ ಕಾರ್ಯ ಆಗಲಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ವೈದ್ಯರು ತಮ್ಮ ವೃತ್ತಿಗೆ ದ್ರೋಹ ಮಾಡುತ್ತಿದ್ದಾರೆ. ರೋಗಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡುವ ಮೂಲಕ ಭ್ರಷ್ಟರಾಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕಾಣುತ್ತಿದ್ದೆವು. ಆದರೆ, ಖಾಸಗಿ ಕ್ಷೇತ್ರಕ್ಕೂ ವಿಸ್ತಾರವಾಗಿದೆ ಎಂದು ವಿಷಾದಿಸಿದರು.

ಮಾದಾರ ಚನ್ನಯ್ಯ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಶಾಸಕ ಎನ್.ವೈ. ಗೋಪಾಲಕೃಷ್ಣ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎ. ಸೇತುರಾಂ, ಮದಕರಿ ನಾಯಕ ಕಾಲೇಜಿನ ಪ್ರಾಂಶುಪಾಲ ಡಾ.ಎ. ಬಸಪ್ಪ, ಎಸ್‌ಆರ್‌ಎಸ್ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಜಾಹ್ನವಿ ನರ್ಸಿಂಗ್ ಶಾಲೆಯ ಅಧ್ಯಕ್ಷ ಎನ್. ನಾಗರಾಜ್, ನಗರಸಭೆ ಸದಸ್ಯ ಎಚ್. ಶ್ರಿನಿವಾಸ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಶ್ವನಾಥ್ ಜಿ. ಪಾಟೀಲ್ ಹಾಜರಿದ್ದರು.

ಸುಮಿತ್ರಾ ಪ್ರಾರ್ಥಿಸಿದರು. ಬದರಿನಾಥ್ ಸ್ವಾಗತಿಸಿದರು, ವೆಂಕಣ್ಣಾಚಾರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.