ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿ ಮೇಜರ್ ಮುಜರಾಯಿ ಹೆಳವನಕಟ್ಟೆ ಲಕ್ಷ್ಮೀರಂಗನಾಥ ಸ್ವಾಮಿ ದವನ ಪೂರ್ಣಿಮಾ ಬ್ರಹ್ಮರಥೋತ್ಸವ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಸಾಂಪ್ರದಾಯಿಕ ಪುಣ್ಯಾಹ ವಾಚನ, ರಥಶಾಂತಿ, ಶ್ರೀಚಕ್ರ ಪೂಜೆ, ಗ್ರಾಮ ಪ್ರದಕ್ಷಣೆ, ರಥದ ಗಾಲಿ ಹಾಗೂ ಅಷ್ಟದಿಕ್ಪಾಲಕರಿಗೆ ಬಲಿಹಾಕಿದ ನಂತರ ದೇವಾಲಯದ ಆಡಳಿತಾಧಿಕಾರಿ ಹಾಲೇಶಪ್ಪ ರಥ ಪೂಜೆ ಮಾಡಿದರು. ನಂತರ ಬಾಳೆಹಣ್ಣು, ಹೂವನ್ನು ರಥಕ್ಕೆ ಭಕ್ತರು ಅರ್ಪಿಸಿ ಗೋವಿಂದನ ನಾಮಸ್ಮರಣೆ ಮಾಡಿ ತೇರು ಎಳೆದರು.
ವಿಪ್ರರ ವೇದಘೋಷ, ಮೆಟ್ಟಿಲೋತ್ಸವ, ದಾಸರಪದ ಗಾಯನ, ಮಂಗಳವಾದ್ಯ, ಡೊಳ್ಳು, ನಾಸಿಕ್ ಡೋಲು, ತಮಟೆಮೇಳ ಉತ್ಸವಕ್ಕೆ ಕಳೆ ತಂದಿದ್ದವು.
ಬ್ರಾಹ್ಮಿ ಮುಹೂರ್ತಕ್ಕೆ ದೇವಾಲಯದಲ್ಲಿ ಕಲ್ಯಾಣೋತ್ಸವ ದೇವಾಲಯದಲ್ಲಿ ಹಮ್ಮಿಕೊಳ್ಳ ಲಾಗಿತ್ತು. ನಂತರ ಗಜೇಂದ್ರ ಮೋಕ್ಷ, ನೈವೇದ್ಯ, ಮಂತ್ರಪುಷ್ಟ ಘೋಷಣೆ ಉತ್ಸವಕ್ಕೆ ಕಳೆ ತಂದಿದ್ದವು. ದೇವಾಲಯವನ್ನು ದೀಪದಿಂದ ಹಾಗೂ ರಥವನ್ನು ಹೂವಿನಿಂದ ಶೃಂಗರಿಸಲಾಗಿತ್ತು. ಮುಖ್ಯ ದೇವತೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಶಾಸಕ ಬಿ.ಪಿ. ಹರೀಶ್, ತಹಶಿಲ್ದಾರ್ ನಜ್ಮಾ , ಎಪಿಎಂಸಿ ನಿರ್ದೇಶಕ ಮಂಜುನಾಥ, ಜಿ.ಪಂ. ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಜಿ.ಪಂ. ಅಧ್ಯಕ್ಷ ಹನಗವಾಡಿ ವೀರೇಶ್, ಸದಸ್ಯ ಸಿ.ಎನ್. ವೀರಭದ್ರಪ್ಪ, ಟಿ. ಮುಕುಂದ, ಉಪ ತಹಶೀಲ್ದಾರ್ ರೆಹಾನ್ ಪಾಶಾ, ಗ್ರಾಮಲೆಕ್ಕಾಧಿಕ್ಕಾರಿ ಭಕ್ತವತ್ಸಲ ಇತರರು ಇದ್ದರು. ದಾನಿಗಳ ಸಹಯೋಗದೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು.
ಉತ್ಸವದ ವಿಶೇಷ
ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಉತ್ಸವದಲ್ಲಿ ಭಾಗವಹಿಸಿದ್ದರು. ಹೆಳವನಕಟ್ಟೆ ಹಾಗೂ ಕವಯತ್ರಿ ಗಿರಿಯಮ್ಮ ವಾಸಿಸಿದ ಮನೆ ಹಾಗೂ ಸ್ಥಂಭದೇವತೆ( ಕಂಬದಮ್ಮ), ಅವರು ಪೂಜೆ ಮಾಡುತ್ತಿದ್ದ ವೃಂದಾವನಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಗಿರಿಯಮ್ಮ ವಿರಚಿತ ಗೀತೆಗಳನ್ನು ಆಲಿಸಿದರು. ನಂತರ ಶಂಕರಲಿಂಗ ಭಗವಾನ್ ಸರಸ್ವತಿ ಆಶ್ರಮಕ್ಕೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.