ADVERTISEMENT

ಶವಸಂಸ್ಕಾರಕ್ಕೂ ಸಿಗದ ಸ್ಥಳಾವಕಾಶ

ಪ್ರಜಾವಾಣಿ ವಿಶೇಷ
Published 11 ಸೆಪ್ಟೆಂಬರ್ 2011, 7:25 IST
Last Updated 11 ಸೆಪ್ಟೆಂಬರ್ 2011, 7:25 IST

ಹೊನ್ನಾಳಿ: ಮನುಷ್ಯ ಸತ್ತಾಗ ಅಂತ್ಯಸಂಸ್ಕಾರಕ್ಕೆ ಸಾಕಷ್ಟು ಸ್ಥಳ ದೊರೆತರೆ ಎಲ್ಲವೂ ಚೆನ್ನಾಗಿರುತ್ತದೆ. ಒಂದು ವೇಳೆ ಸ್ಥಳ ದೊರೆಯದಿದ್ದರೆ...

ಹೌದು! ಇಂತಹ ಸಮಸ್ಯೆ ಈಚೆಗೆ ತಾಲ್ಲೂಕಿನ ಎಚ್. ಕಡದಕಟ್ಟೆ ಗ್ರಾಮದ ನಂದೀಶ್ವರ ಬಡಾವಣೆಯಲ್ಲಿ ಉದ್ಭವಿಸಿತು. ಶವ ಸಂಸ್ಕಾರಕ್ಕೆ ಸ್ಥಳ ದೊರೆಯದ ಕಾರಣ ಗ್ರಾಮಸ್ಥರು ಪರದಾಡಿದ ಪ್ರಸಂಗ ನಡೆಯಿತು.

ಎಚ್. ಕಡದಕಟ್ಟೆ ಗ್ರಾಮದ ನಂದೀಶ್ವರ ಬಡಾವಣೆಯ ಗೌರಮ್ಮ (65) ಎಂಬ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದರು. ಬುಧವಾರ ಬೆಳಿಗ್ಗೆ ಅವರು ಅಸುನೀಗಿದರು. ಶವ ಸಂಸ್ಕಾರಕ್ಕೆ ಸ್ಮಶಾನ ಇಲ್ಲದ ಕಾರಣ ಮೃತರ ಬಂಧುಗಳು ಹಾಗೂ ಗ್ರಾಮಸ್ಥರು ಕಡದಕಟ್ಟೆ ಗ್ರಾಮ ಪಂಚಾಯ್ತಿ ಕಚೇರಿ ಎದುರಿನ ಜಾಗದಲ್ಲಿ ಶವ ದಹನಕ್ಕೆ ಸಿದ್ಧತೆ ನಡೆಸಿದರು. ಆದರೆ, ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಸದಸ್ಯರು ಪೊಲೀಸರಿಗೆ ದೂರು ನೀಡಿದರು. ಗ್ರಾಮ ಪಂಚಾಯ್ತಿ ಕಚೇರಿ ಎದುರು ಶವ ಸಂಸ್ಕಾರ ನಡೆಸದಂತೆ ಪೊಲೀಸರು ತಡೆದರು.

ಅಲ್ಲಿಂದ, ಮಾರಿಕೊಪ್ಪ ರಸ್ತೆ ಬದಿ ಶವಸಂಸ್ಕಾರ ಮಾಡಲು ಹೋದರೆ ಆ ಜಮೀನಿನ ಮಾಲೀಕರು ಅವಕಾಶ ನೀಡಲಿಲ್ಲ. ನ್ಯಾಮತಿ ರಸ್ತೆಯಲ್ಲಿನ ಹೆಲಿಪ್ಯಾಡ್ ಬಳಿ ಅಂತ್ಯಕ್ರಿಯೆ ನಡೆಸಲು ಮುಂದಾದಾಗ ಅದಕ್ಕೆ ಸಂಬಂಧಪಟ್ಟವರು ಅಡ್ಡಿಪಡಿಸಿದರು.

ಹೀಗೆ ಶವವನ್ನು ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಹೊತ್ತುಕೊಂಡು ಓಡಾಡುವುದು ಆಯಿತೇ ಹೊರತು ಸಂಜೆಯಾದರೂ ಸಂಸ್ಕಾರ ಮಾಡಲು ಆಗಲಿಲ್ಲ. ಕೊನೆಗೆ ಗ್ರಾಮಸ್ಥರು ರಸ್ತೆ ಬದಿಯಲ್ಲಿಯೇ ಶವ ದಹನ ಮಾಡಿದರು.

ಶವಸಂಸ್ಕಾರ ಮಾಡಿ ಮನೆಗೆ ತೆರಳುತ್ತಿದ್ದಾಗ ನಂದೀಶ್ವರ ಬಡಾವಣೆಯ ಹಿರಿಯ ಚೇತನಗಳು `ನಾವು ಸತ್ತರೆ ನಮ್ಮನ್ನು ಇನ್ನೆಲ್ಲಿ ಬಿಸಾಡುತ್ತಾರೋ~ ಎಂದು ಮಾತನಾಡಿಕೊಳ್ಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.

1994 ರಲ್ಲಿಯೇ ನಂದೀಶ್ವರ ಬಡಾವಣೆ ನಿರ್ಮಾಣ ಆಗಿದೆಯಾದರೂ ಅಲ್ಲಿ ಒಂದು ದೇವಸ್ಥಾನವೂ ಇಲ್ಲ. ಸ್ಮಶಾನ ಕೂಡಾ ಇಲ್ಲ. ಆರು ಎಕರೆ ಗೋಮಾಳ ಇದೆ. ಅದನ್ನು ಕೆಲವರು ಉಳುಮೆ ಮಾಡುತ್ತಿದ್ದಾರೆ. ಯಾರೂ ಆ ಬಗ್ಗೆ ಮಾತನಾಡುತ್ತಿಲ್ಲ.

ತಾಲ್ಲೂಕು ಮತ್ತು ಜಿಲ್ಲಾ ಆಡಳಿತ, ಸಂಬಂಧಪಟ್ಟ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸ್ಮಶಾನ ವ್ಯವಸ್ಥೆ ಕಲ್ಪಿಸಬೇಕು ಎಂಬುದು ನಂದೀಶ್ವರ ಬಡಾವಣೆಯ ನಿವಾಸಿಗಳ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.