ADVERTISEMENT

ಶ್ಯಾಗಲೆ ಹಳ್ಳದ ಸೇತುವೆ ದುರಸ್ತಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 8:55 IST
Last Updated 18 ಸೆಪ್ಟೆಂಬರ್ 2013, 8:55 IST

ದಾವಣಗೆರೆ: ತಾಲ್ಲೂಕಿನ ಕ್ಯಾತನಹಳ್ಳಿ ಬಳಿ ಶ್ಯಾಗಲೆ ಹಳ್ಳದ ಸೇತುವೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸಂಸತ್‌ ಸದಸ್ಯ ಜಿ.ಎಂ.ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚಿಸಿದರು. ನಗರದ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಸೋಮವಾರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ಕ್ಯಾತನಹಳ್ಳಿಯಿಂದ ಹಿರಿಯೂರಿಗೆ ಹೋಗುವ ರಸ್ತೆಯಲ್ಲಿರುವ ಶ್ಯಾಗಲೆ ಹಳ್ಳಕ್ಕೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಇತ್ತೀಚೆಗೆ ಸುರಿದ ಮಳೆಯಿಂದ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಸಂಚಾರಕ್ಕೆ ಅನನುಕೂಲ ಉಂಟಾಗಿದೆ ಎಂದು ಗ್ರಾಮಸ್ಥರು ಮನವಿ
ಸಲ್ಲಿಸಿದರು. ದುರಸ್ತಿಪಡಿಸದೇ ಇದ್ದರೆ ಸೇತುವೆ ಕುಸಿದು ಬೀಳುವ ಸಂಭವಿವಿದ್ದು, ಕ್ಯಾತನಹಳ್ಳಿ–ಹಿರಿಯೂರು ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಳ್ಳುತ್ತದೆ ಎಂದು ವಿವರಿಸಿದರು.

ಇದಕ್ಕೆ ಸ್ಪಂದಿಸಿದ ಸಂಸತ್‌ ಸದಸ್ಯರು ಪರಿಹಾರ ಯೋಜನೆಯಡಿ ಈ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ದೂರವಾಣಿ ಮೂಲಕ ಸೂಚಿಸಿದರು.

ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ನಿರ್ಮಾಣ ವಾಗುತ್ತಿರುವ ಮಾರ್ಕಂಡೇಶ್ವರ ಸಮಾಜದ ಸಮುದಾಯ ಭವನಕ್ಕೆ ಸಂಸತ್‌ ಸದಸ್ಯರ ಅನುದಾನದಲ್ಲಿ ` 5 ಲಕ್ಷ ಒದಗಿಸುವುದಾಗಿ ಭರವಸೆ ನೀಡಿದರು.

ಹರಿಹರ ತಾಲ್ಲೂಕಿನಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗುರುಭವನ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ತಿಳಿಸಿದರು.
ಚನ್ನಗಿರಿ ತಾಲ್ಲೂಕಿನ ಬುಸ್ಸೇನಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಕಾಂಪೌಂಡ್‌ ನಿರ್ಮಾಣಕ್ಕೆ ` 3 ಲಕ್ಷ, ಶೆಟ್ಟಿಹಳ್ಳಿ ಗ್ರಾಮದಲ್ಲಿ ರಂಗಮಂದಿರ ನಿರ್ಮಾಣಕ್ಕೆ ` 2.50 ಲಕ್ಷ, ಜಗಳೂರು ವಿಧಾನಸಭಾ ಕ್ಷೇತ್ರದ ಚಟ್ನಹಳ್ಳಿ ಗ್ರಾಮದ ಸಮುದಾಯ ಭವನಕ್ಕೆ ` 3 ಲಕ್ಷ, ಕೆಂಚಾಪುರದಲ್ಲಿ ರಂಗಮಂದಿರ ನಿರ್ಮಾಣಕ್ಕೆ ` 2 ಲಕ್ಷ, ಕುರೇಮಾಗನಹಳ್ಳಿ ಬಸ್‌ ತಂಗುದಾಣಕ್ಕೆ ` 2 ಲಕ್ಷ, ಸೋಮೇನಹಳ್ಳಿ ಗ್ರಾಮದಲ್ಲಿ ಭಜನಾ ಮಂದಿರಕ್ಕೆ ` 2 ಲಕ್ಷ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ನಾಗರಾಜ್, ಚಿದಾನಂದ ಐಗೂರು, ಬಸಾಪುರದ ರಮೇಶ್‌, ಅಣಜಿ ಗುಡ್ಡೇಶ್‌, ಹಿರೇಮಳಲಿ ಲೋಕಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.