ADVERTISEMENT

ಸಚಿವರಿಗೆ ಬಿಡುವಿಲ್ಲ; ಕಟ್ಟಡ ಆರಂಭಕ್ಕೆ ಮುಹೂರ್ತವಿಲ್ಲ

ಎನ್.ನಾಗರಾಜ್
Published 27 ಏಪ್ರಿಲ್ 2017, 6:07 IST
Last Updated 27 ಏಪ್ರಿಲ್ 2017, 6:07 IST
ಉದ್ಘಾಟನೆಗಾಗಿ ಕಾಯುತ್ತಿರುವ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನೂತನ ಕಟ್ಟಡ.
ಉದ್ಘಾಟನೆಗಾಗಿ ಕಾಯುತ್ತಿರುವ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನೂತನ ಕಟ್ಟಡ.   

ದಾವಣಗೆರೆ: ಎದುರಿನಲ್ಲೇ ಸುಸಜ್ಜಿತ ಕಟ್ಟಡ ಇದ್ದರೂ ಅಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸುವಂತಿಲ್ಲ! ಬಿರುಕುಬಿಟ್ಟ ಗೋಡೆಗಳು, ಮುರಿದ ಕಿಟಕಿ–ಬಾಗಿಲುಗಳು, ಜೋತು ಬಿದ್ದ ಮೇಲ್ಚಾವಣಿ ಕೆಳಗೇ ಕಡತಗಳ ವಿಲೇವಾರಿ ಮಾಡುವ ಸಿಬ್ಬಂದಿ.

–ಇದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೌಕರರ ಅಸಹಾಯಕ ಸ್ಥಿತಿ.

ಇತ್ತೀಚಿನ ವರ್ಷಗಳಲ್ಲಿ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಕ್ರೀಡಾ ಚಟುವಟಿಕೆಗಳು ಗರಿಗೆದರುತ್ತಿವೆ. ಕುಸ್ತಿ, ದೇಹದಾರ್ಢ್ಯ, ಪವರ್‌ಲಿಫ್ಟಿಂಗ್‌, ವೇಟ್‌ಲಿಫ್ಟಿಂಗ್‌, ಕ್ರಿಕೆಟ್‌ನಲ್ಲಿ ಬೆಣ್ಣೆದೋಸೆ ನಗರಿಯ ಕ್ರೀಡಾಪಟುಗಳು ಈಗಷ್ಟೇ ಕಣ್ಣುಬಿಡುತ್ತಿದ್ದಾರೆ. ಇಂತಹ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸ ಬೇಕಾದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೇ ಸುಸಜ್ಜಿತ ನೆಲೆಯಿಲ್ಲದಾಗಿದೆ. 

ADVERTISEMENT

ಕ್ರೀಡಾ ಇಲಾಖೆಗಷ್ಟೇ ಅಲ್ಲ. ಕ್ರೀಡಾಪಟುಗಳ ಅನುಕೂಲಕ್ಕೂ ಅನುವಾಗುವಂತೆ ಜಿಲ್ಲಾ ಕ್ರೀಡಾಂಗಣದಲ್ಲಿ ಒಂದೂವರೆ ವರ್ಷದ ಹಿಂದೆಯೇ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ. ಹೀಗಾಗಿ ಸುಸಜ್ಜಿತ ಕಟ್ಟಡ ದೂಳು ಹಿಡಿಯುತ್ತಿದೆ.

₹ 46 ಲಕ್ಷದ ಕಟ್ಟಡ: ‘ಬಹು ಉಪಯೋಗಕ್ಕೆ ಬರುವಂತೆ ಕ್ರೀಡಾ ಇಲಾಖೆಯ ಕಟ್ಟಡ ನಿರ್ಮಿಸಲಾಗಿದ್ದು, ಇದಕ್ಕಾಗಿ ₹ 46 ಲಕ್ಷ ಖರ್ಚು ಮಾಡಲಾಗಿದೆ. ನಗರಕ್ಕೆ ಕ್ರೀಡಾಕೂಟ ಗಳಿಗೆ ಬರುವ ಕ್ರೀಡಾಪಟುಗಳು ಉಳಿದುಕೊಳ್ಳಲು ಡಾರ್ಮಿಟರಿ ಹಾಲ್‌, ಕಾನ್ಫರೆನ್ಸ್‌ ರೂಮ್‌ ನಿರ್ಮಿಸಲಾಗಿದೆ. ಕಟ್ಟಡ ಉದ್ಘಾಟನೆ ಯಾದರೆ ಕ್ರೀಡಾಪಟುಗಳು ಚರ್ಚೆ ನಡೆಸಲು, ತರಬೇತಿ ಪಡೆಯಲು ಅನುಕೂಲ ವಾಗಲಿದೆ ಎನ್ನುತ್ತಾರೆ ಕೊಕ್ಕೊ ಆಟಗಾರ ರಮೇಶ್‌.

2016ರ ಆಗಸ್ಟ್‌ನಲ್ಲೇ ಕಟ್ಟಡ ಉದ್ಘಾಟನೆಗೆ ದಿನಾಂಕ ನಿಗದಿಪಡಿಸ ಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮವನ್ನೂ ಏರ್ಪಡಿಸ ಲಾಗಿತ್ತು. ಆದರೆ, ಕ್ರೀಡಾ ಸಚಿವರು ಬಾರದ ಕಾರಣ ಕಟ್ಟಡ ಉದ್ಘಾಟನೆಯಾಗಲಿಲ್ಲ. 

‘ಉತ್ತಮ ಸೌಲಭ್ಯಗಳಿರುವ ಕಟ್ಟಡವನ್ನು ಉದ್ಘಾಟನೆ ಮಾಡಲು ಕ್ರೀಡಾ ಸಚಿವರ ದಿನಾಂಕಕ್ಕಾಗಿ ಇಲಾಖೆ ಕಾಯುತ್ತಿದೆ. ಆದರೆ, ಒಂದೂವರೆ ವರ್ಷದಿಂದ ಕ್ರೀಡಾ ಸಚಿವರಿಗೆ ಕಟ್ಟಡ ಉದ್ಘಾಟನೆಗೆ ಸಮಯಸಿಕ್ಕಿಲ್ಲವೇ’ ಎಂಬುದು ನಿತ್ಯ ಇಲ್ಲಿ ಓಡಾಡುವ ಕ್ರೀಡಾಸಕ್ತರ ಪ್ರಶ್ನೆಯಾಗಿದೆ.

‘ಕ್ರೀಡಾ ಇಲಾಖೆ ಹೊಸ ಕಟ್ಟಡದಲ್ಲಿ ತಕ್ಷಣ ಕಾರ್ಯಾರಂಭ ಮಾಡಲಿ. ಮುಂದೆ ಬೇಕಾದರೆ ಸಚಿವರು ಉದ್ಘಾಟನೆ ಶಾಸ್ತ್ರ ಪೂರೈಸಲಿ. ಕ್ರೀಡಾಪಟುಗಳಿಗೆ ಮೊದಲು ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸುತ್ತಾರೆ ಕೊಕ್ಕೊ ಆಟಗಾರ ಮೋಹನ್‌.

**

ಹಳೆ ಕಟ್ಟಡ ಸ್ಥಳದಲ್ಲಿ ಜಿಮ್‌ ?

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದರೆ ಹಳೆ ಕಟ್ಟಡದಲ್ಲಿ ಅತ್ಯಾಧುನಿಕ ಮಲ್ಟಿ ಜಿಮ್‌ ನಿರ್ಮಿಸುವ ಚಿಂತನೆ ನಡೆಸಲಾಗಿದೆ. ಆದಷ್ಟು ಬೇಗ ಹೊಸ ಕಟ್ಟಡ ಉದ್ಘಾಟನೆಯಾದರೆ ಜಿಮ್‌ ನಿರ್ಮಾಣದ ರೂಪುರೇಷೆ ಸಿದ್ಧಪಡಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಿಬ್ಬಂದಿ.

**

ಕ್ರೀಡಾ ಇಲಾಖೆ ಕಟ್ಟಡ ಉದ್ಘಾಟನೆಗೆ ದಿನಾಂಕ ನಿಗದಿ ಮಾಡುವಂತೆ ಸಚಿವರ ಕಚೇರಿಗೆ ಪತ್ರ ಬರೆಯಲಾಗಿದೆ. ಉತ್ತರ ಇನ್ನೂ ಬಂದಿಲ್ಲ.
–ಬಿ.ಶ್ರೀನಿವಾಸ್, ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.