ADVERTISEMENT

ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಆಗ್ರಹ

ದಾವಣಗೆರೆ ಉಪ ರಾಜಧಾನಿಯಾಗಿಸುವ ಕೂಗಿಗೆ ದನಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2013, 6:39 IST
Last Updated 23 ಜೂನ್ 2013, 6:39 IST

ದಾವಣಗೆರೆ (ಮುದೇನೂರು ಸಂಗಣ್ಣ ವೇದಿಕೆ): ಡಾ.ಸರೋಜಿನಿ ಮಹಿಷಿ ಸಮಿತಿ ವರದಿಯನ್ನು ಸಂಪೂರ್ಣ ಅನುಷ್ಠಾನಗೊಳಿಸಬೇಕು ಎಂದು ಹಿರಿಯ ಸಾಹಿತಿ ಕುಂ.ಬಾ.ಸದಾಶಿವಪ್ಪ ಸರ್ಕಾರವನ್ನು ಆಗ್ರಹಿಸಿದರು.

ಬಾಪೂಜಿ ಸಭಾಂಗಣದಲ್ಲಿ ಶನಿವಾರ ಆರಂಭವಾದ 5ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ಅವರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದರು.
ಕನ್ನಡ ಭಾಷೆಯ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಸಚಿವರು, ಶಾಸಕರು, ಜಿಲ್ಲಾ ಪಂಚಾಯ್ತಿ, ನಗರಪಾಲಿಕೆ, ಪುರಸಭೆ ಮೊದಲಾದ ಜನಪ್ರತಿನಿಧಿಗಳು ದೈನಂದಿನ ಪತ್ರ ವ್ಯವಹಾರಗಳನ್ನು, ಕಡತಗಳ ಮೇಲೆ ಬರೆಯುವ ಟಿಪ್ಪಣಿಗಳು ಕನ್ನಡದಲ್ಲಿ ಇರಬೇಕು. ಸರ್ಕಾರಿ ಕಚೇರಿಗಳಲ್ಲಿ ಸಮರ್ಪಕ ಬೆರಳಚ್ಚು ಒದಗಿಸಬೇಕು. ಕನ್ನಡ ರಾಜ್ಯೋತ್ಸವದಂದು ಕನ್ನಡ ಭಾಷೆಗೆ ಹೆಚ್ಚು ಕಾಳಜಿ ವಹಿಸಿದ ಅಧಿಕಾರಿಗಳನ್ನು ಗುರುತಿಸಿ ಅವರನ್ನು ಗೌರವಿಸಬೇಕು. ಕನ್ನಡದ ಕಾರ್ಯಕ್ರಮಗಳಿಗೆ ಕನ್ನಡೇತರರನ್ನು ಆಹ್ವಾನಿಸಿ ಅವರಿಗೆ ಕನ್ನಡ ಸಂಸ್ಕೃತಿ ಪರಿಚಯಿಸಬೇಕು ಎಂದು ಒತ್ತಾಯಿಸಿದರು.

`ಹಳ್ಳಿಗರು ತಾವಾಡುವ ಭಾಷೆಯಲ್ಲಿ ರಚಿಸಿದ ಸಾಹಿತ್ಯ ಜಾನಪದ ಸಾಹಿತ್ಯ. ನಮಗೆ ನಮ್ಮ ಮನೆಯ ದೋಸೆ ರುಚಿಸುವುದಿಲ್ಲ. ಅನ್ಯರ ಮನೆಯ ಅಥವಾ ಹೋಟೆಲ್ ದೋಸೆ ಹೆಚ್ಚು ರುಚಿಸುವುದು' ಮಾರ್ಮಿಕವಾಗಿ ಹೇಳಿದರು.

`ನಮ್ಮಲ್ಲಿ, ಮಂಟೇಸ್ವಾಮಿ, ಮೈಲಾರಲಿಂಗ, ಮಲೆಮಹದೇಶ್ವರ, ಜುಂಜಪ್ಪ ಮಹಾಕಾವ್ಯಗಳಿದ್ದು, ಅವುಗಳ ಬಗೆಗೆ ತಿಳಿವಳಿಕೆ ನಮ್ಮಲ್ಲಿ ಎಷ್ಟು ಜನರಿಗಿದೆ? ಸರ್ಕಾರ ಜನಪದ ಸಾಹಿತಿಗಳಿಗೂ ಹೆಚ್ಚು ಗೌರವಧನ ಕೊಡುವುದು ಒಳಿತು' ಎಂದು ಅಭಿಪ್ರಾಯಪಟ್ಟರು.

ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇತರ ಸಮಿತಿಗಳಿಗೆ ಸಾಹಿತಿಗಳನ್ನು ಅದರಲ್ಲಿಯೂ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸಾಹಿತಿಗಳನ್ನು ಗುರುತಿಸುವುದು ಸೂಕ್ತ ಎಂದರು.

ದಾವಣಗೆರೆ ಪುಣೆ-ಬೆಂಗಳೂರು ನಡುವೆ ಇದೆ. ಪೂರ್ವಕ್ಕೆ ಕೋಲಾರ, ಪಶ್ಚಿಮಕ್ಕೆ ಬೆಳಗಾವಿ, ಉತ್ತರಕ್ಕೆ ಬೀದರ, ಗುಲ್ಬರ್ಗ, ದಕ್ಷಿಣಕ್ಕೆ ಕೊಡಗು ಮತ್ತು ಮಂಗಳೂರು ಇದೆ. ಇವುಗಳ ಮಧ್ಯ ಕೇಂದ್ರವಾಗಿರುವ ದಾವಣಗೆರೆಯ ಭಾಷೆ ಎಲ್ಲ ಜಿಲ್ಲೆಯವರಿಗೂ ಹೊಂದುತ್ತದೆ. ಹೀಗಾಗಿ ಕರ್ನಾಟಕದ ಉಪ ರಾಜಧಾನಿಯನ್ನಾಗಿ ಘೋಷಿಸಬೇಕು ಎಂದರು.

ಕಾವ್ಯ ಬರುಬರುತ್ತಾ ಜನರಿಂದ ದೂರವಾಗಿ ವೈಯಕ್ತಿಕವಾಗಿ, ಯಾವುದೋ ಸಣ್ಣ ಗುಂಪಿನ ಅಥವಾ ವ್ಯಕ್ತಿಯ ವಾಣಿಯಾದಾಗ ಅದರ ಅವನತಿ ಶುರುವಾಗುವುದು; ಅದು ಸತ್ವಹೀನವೂ ಆಗುವುದು. ಕಾವ್ಯಾನುಭವ, ಜೀವನಾನುಭವ ಕೂಡಿದರೆ ಅದು ಸಾರ್ಥಕ ಜೀವನೋತ್ಸಾಹ ಪಡೆಯುತ್ತದೆ. ಹಳೆಯದನ್ನು ಗೌರವಿಸಿ, ಹೊಸದನ್ನು ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.