ADVERTISEMENT

ಸರ್ಕಾರದ ಅನುದಾನ ಸದ್ಬಳಕೆಗೆ ಕರೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 10:50 IST
Last Updated 13 ಸೆಪ್ಟೆಂಬರ್ 2011, 10:50 IST
ಸರ್ಕಾರದ ಅನುದಾನ ಸದ್ಬಳಕೆಗೆ ಕರೆ
ಸರ್ಕಾರದ ಅನುದಾನ ಸದ್ಬಳಕೆಗೆ ಕರೆ   

ಚನ್ನಗಿರಿ: ತಾಲ್ಲೂಕಿನ ಗಾಣದಕಟ್ಟೆ ಗ್ರಾಮದ ಬಳಿ ರೂ 6 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬೃಹತ್ ಚೆಕ್ ಡ್ಯಾಂ ಹಿನ್ನೀರಿನಲ್ಲಿ ಮುಳಗಡೆಯಾಗಲಿರುವ ಬಗರ್‌ಹುಕುಂ ಸಾಗುವಾಳಿದಾರರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕುಮುಟಾ-ಕಡಮಡಗಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿಗೆ ರೂ  33 ಕೋಟಿ, ಮಲ್ಪೆ-ಮೊಳಕಾಲ್ಮೂರು ರಸ್ತೆ ಅಭಿವೃದ್ಧಿಗೆ ರೂ 13 ಕೋಟಿ ಅನುದಾನ ಬಿಡುಗಡೆಯಾಗಿದೆ.
 
ಆದಷ್ಟು ಬೇಗ ಕಾಮಗಾರಿ ಆರಂಭಿಸಿ ಗುಣಮಟ್ಟದ ಕಾಮಗಾರಿಯಾಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಹಾಗೆಯೇ ಸಂತೇಬೆನ್ನೂರು ಗ್ರಾಮದ ಕುಡಿಯುವ ನೀರಿನ ಕಾಮಗಾರಿ ಈ ತಿಂಗಳೊಳಗೆ ಮುಕ್ತಾಯಗೊಳಿಸಿ ಜನರಿಗೆ ನೀರನ್ನು ನೀಡಬೇಕೆಂದು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಬಸವರಾಜ್‌ನಾಯ್ಕ ಮಾತನಾಡಿ, ತಾಂಡಾಗಳ ಅಭಿವೃದ್ಧಿಗೆ ನಿಗಮದಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ, ಸಮಯಕ್ಕೆ ಸರಿಯಾಗಿ ಕಾಮಗಾರಿ ಆರಂಭಿಸದಿದ್ದರೆ, ಬಂದ ಅನುದಾನ ವಾಪಸು ಹೋಗುತ್ತದೆ.

ಆದ್ದರಿಂದ ಶೀಘ್ರ ಕಾಮಗಾರಿ ಆರಂಭಿಸಬೇಕು. ಈ ತಾಲ್ಲೂಕಿನ ತಾಂಡಾಗಳ ಅಭಿವೃದ್ಧಿಗೆ ಒಟ್ಟು ರೂ 70 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ಪ್ರಗತಿ ಪರಿಶೀಲನಾ ಸಭೆಗೆ ಮುಖ್ಯವಾಗಿ ಅಧಿಕಾರಿಗಳು ಭಾಗವಹಿಸದೇ ಕಿರಿಯ ಅಧಿಕಾರಿಗಳನ್ನು ಕಳುಹಿಸಿಕೊಡುವ ಪರಿಪಾಠ ನಡೆಯುತ್ತಿದೆ.

ಈ ಅಧಿಕಾರಿಗಳು ಮಾಹಿತಿ ಕೇಳಿದರೆ ನಮಗೆ ಗೊತ್ತಿಲ್ಲ ಎಂದು ಉತ್ತರ ಕೊಡುತ್ತಾರೆ. ಆದ್ದರಿಂದ ಗೈರುಹಾಜರಾದ ಅಧಿಕಾರಿಗಳಿಗೆ ನೋಟಿಸ್ ಕಳುಹಿಸಿ ಶಿಸ್ತುಕ್ರಮ ತೆಗೆದುಕೊಳ್ಳಬೇಕೆಂದು ತಾ.ಪಂ. ಇಒ ಅವರಿಗೆ ಆದೇಶ ಮಾಡಿದರು.

ತಾ.ಪಂ. ಅಧ್ಯಕ್ಷೆ ಸಿ.ಎಂ. ಅನುಸೂಯಮ್ಮ, ಉಪಾಧ್ಯಕ್ಷ ಎನ್. ಗಣೇಶ್‌ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದಲಿಂಗಪ್ಪ, ತಹಶೀಲ್ದಾರ್ ಎಚ್.ಎಂ. ರೇವಣಸಿದ್ದಪ್ಪ, ಇಒ ಎಲ್.ಎ. ಕೃಷ್ಣನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.