ADVERTISEMENT

ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 8:45 IST
Last Updated 20 ಸೆಪ್ಟೆಂಬರ್ 2013, 8:45 IST
ದಾವಣಗೆರೆಯ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಉಪ ಲೋಕಾಯುಕ್ತ ನ್ಯಾ.ಸುಭಾಷ್‌ ಬಿ.ಅಡಿ ಅಧಿಕಾರಿಗಳ ಸಭೆ ನಡೆಸಿದರು. ಜಿಲ್ಲಾಧಿಕಾರಿ ಎಸ್‌.ಟಿ.ಅಂಜನ್‌ಕುಮಾರ್‌, ಸಿಇಒ ಎ.ಬಿ.ಹೇಮಚಂದ್ರ, ಎಸ್ಪಿ ಡಿ.ಪ್ರಕಾಶ್‌, ಲಿಂಗಾರೆಡ್ಡಿ ಹಾಜರಿದ್ದರು.
ದಾವಣಗೆರೆಯ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಉಪ ಲೋಕಾಯುಕ್ತ ನ್ಯಾ.ಸುಭಾಷ್‌ ಬಿ.ಅಡಿ ಅಧಿಕಾರಿಗಳ ಸಭೆ ನಡೆಸಿದರು. ಜಿಲ್ಲಾಧಿಕಾರಿ ಎಸ್‌.ಟಿ.ಅಂಜನ್‌ಕುಮಾರ್‌, ಸಿಇಒ ಎ.ಬಿ.ಹೇಮಚಂದ್ರ, ಎಸ್ಪಿ ಡಿ.ಪ್ರಕಾಶ್‌, ಲಿಂಗಾರೆಡ್ಡಿ ಹಾಜರಿದ್ದರು.   

ದಾವಣಗೆರೆ: ಅನಧಿಕೃತ ಒತ್ತುವರಿ ತೆರವುಗೊಳಿಸಿ ಸರ್ಕಾರಿ ಜಾಗವನ್ನು ವಶಕ್ಕೆ ಪಡೆಯಬೇಕು ಎಂದು ಉಪ ಲೋಕಾಯುಕ್ತ ನ್ಯಾ.ಸುಭಾಷ್‌ ಬಿ.ಅಡಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ದಾಖಲೆಗಳನ್ನು ನೀಡಲು ಕೆಳಹಂತದ ಸಿಬ್ಬಂದಿ ಸಮರ್ಪಕವಾದ ಸರ್ವೇ ನಡೆಸುತ್ತಿಲ್ಲ. ಇದರಿಂದ ಹೊಣೆಗಾರಿಕೆ ಇಲ್ಲದಂತಾಗಿದೆ. ಪಟ್ಟ ಕೊಡುವಾಗ ಸರ್ಕಾರಿ ಭೂಮಿಯನ್ನೂ ಸೇರಿಸಿರುವ ಪ್ರಕರಣಗಳು ಕಂಡುಬಂದಿವೆ. ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು ಕೇಂದ್ರ ಸ್ಥಾನಗಳಲ್ಲಿ ಉಳಿಯುತ್ತಿಲ್ಲ. ಇದು ಅವರ ಜವಾಬ್ದಾರಿಯಲ್ಲವೇ? ಆದರೆ, ಈ ಕೆಲಸ ನಡೆಯುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಪ್ರಭಾವಿಗಳಿದ್ದರೂ ತೆರವುಗೊಳಿಸಬೇಕು. ಯಾವ ಬಡವರೂ ಒತ್ತುವರಿ ಮಾಡಿಕೊಂಡಿರುವುದಿಲ್ಲ. ಒತ್ತುವರಿ ತೆರವುಗೊಳಿಸದೇ ಇದ್ದಲ್ಲಿ ತಹಶೀಲ್ದಾರರು, ಉಪ ವಿಭಾಗಾಧಿಕಾರಿಗಳೇ ಹೊಣೆ ಅಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರ ಸಾವಿರಾರು ಕೋಟಿ ರೂಪಾಯಿ ತೊಡಗಿಸುತ್ತಿದೆ. ಆದರೆ, ಸೌಲಭ್ಯ ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿದೆಯೇ? ಆಶ್ರಯ ಸೇರಿದಂತೆ ಹಲವು ಯೋಜನೆಗಳಲ್ಲಿ ಅರ್ಹರಿಗೆ ಸೌಲಭ್ಯ ಸಿಗುತ್ತಿಲ್ಲ. ಇದಕ್ಕೆ ಅಧಿಕಾರಿಗಳು ಅವಕಾಶ ನೀಡಬಾರದು. ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಸಹಿಸುವುದಿಲ್ಲ. ಮುಂದೆ ತಾವು ಬಂದಾಗ ಇಂತಹ ದೂರುಗಳು ಕೇಳಿಬಂದಲ್ಲಿ, ಸಂಬಂಧಿಸಿದ ಅಧಿಕಾರಿಯೇ ಜವಾಬ್ದಾರಿ’ ಎಂದು ತಿಳಿಸಿದರು.

ತೂಕ ಸರಿ ಇಲ್ಲ: ನ್ಯಾಯಬೆಲೆ ಅಂಗಡಿಗಳ ಮಾಲೀಕರು ಪಡಿತರ ಚೀಟಿದಾರರಿಗೆ ತೂಕದಲ್ಲಿ ವ್ಯತ್ಯಾಸ ಮಾಡುತ್ತಿದ್ದಾರೆ. ಕಳಪೆ ಗುಣಮಟ್ಟದ ತೂಕದ ಯಂತ್ರಗಳನ್ನು ಬಳಸುತ್ತಿದ್ದಾರೆ. 25 ಕೆ.ಜಿ.ಇರುವ ಪದಾರ್ಥ 30 ಕೆ.ಜಿ. ಇರುವಂತೆ ತೋರುತ್ತದೆ. ಗಣಕೀಕೃತ ತೂಕದ ಯಂತ್ರಗಳನ್ನು ಬಳಸಬೇಕು ಎಂದು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಇಲಾಖೆ ಉಪ ನಿರ್ದೇಶಕ ಮಂಜುನಾಥ್‌, ‘ಈ ಬಗ್ಗೆ ತಪಾಸಣೆಗೆ ನಿರಂತರವಾಗಿ ದಾಳಿ ನಡಸಲಾಗುತ್ತಿದೆ. 5 ನ್ಯಾಯಬೆಲೆ ಅಂಗಡಿ ಅಮಾನತುಗೊಳಿಸಲಾಗಿದೆ. ‘ಪಾಯಿಂಟ್‌ ಆಫ್‌ ಸೇಲ್‌’ ವ್ಯವಸ್ಥೆ ರಾಜ್ಯಾದ್ಯಂತ ವಿಸ್ತರಣೆ ಆಗುತ್ತಿದ್ದು, ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರದಿಂದಲೇ ಅತ್ಯಾಧುನಿಕ ಹಾಗೂ ಗಣಕೀಕೃತ ತೂಕದ ಯಂತ್ರಗಳನ್ನು ಅಳವಡಿಸಲಾಗುವುದು’ ಎಂದು ತಿಳಿಸಿದರು.

22 ಕೆರೆ– ವಿಳಂಬ ಸಲ್ಲದು: 22 ಕೆರೆಗಳ ಏತ ನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕೇವಲ 2 ಗುಂಟೆ ಭೂಮಿ ಸಮಸ್ಯೆಯಿಂದಾಗಿ ದೊಡ್ಡಮಟ್ಟದ ಯೋಜನೆಯೊಂದು ವಿಳಂಬ ಆಗಬಾರದು. ಸಣ್ಣ ವಿಷಯದಿಂದಾಗಿ ಕಾಮಗಾರಿ ನಿಲ್ಲಬಾರದು. ತಿಂಗಳಲ್ಲಿ ಕಾಮಗಾರಿ ಮುಗಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಉಪ ಲೋಕಾಯುಕ್ತರು ಸೂಚಿಸಿದರು.

ಕಣ್ಮುಚ್ಚಿ ಕುಳಿತಿದ್ದೀರಾ?: ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಣೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಚೆಕ್‌ಪೋಸ್ಟ್‌ಗಳಲ್ಲಿ ಸರಿಯಾಗಿ ತಪಾಸಣೆ ಆಗುತ್ತಿಲ್ಲ ಎಂದು ಅಸಮಾಧಾನ ಸೂಚಿಸಿದ ಉಪ ಲೋಕಾಯುಕ್ತರು, ಮರಳು ಹರಾಜಿನಿಂದ ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ನಷ್ಟ ಉಂಟಾಗಬಾರದು. ಮಾರುಕಟ್ಟೆ ದರಕ್ಕೇ ಮಾರಾಟ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಸೂಚಿಸಿದರು.

ಬಹು ದೊಡ್ಡ ಪ್ರಮಾಣದಲ್ಲಿ ಮರಳು ಹರಾಜು ಆಗಿಲ್ಲದೇ ಇರುವುದರ ಬಗ್ಗೆ ಮಾಹಿತಿ ಪಡೆದ ಅವರು, ಇಷ್ಟೊಂದು ಪ್ರಮಾಣದಲ್ಲಿ ಮರಳು ಇದೆ ಎಂದರೆ, ಅಕ್ರಮವಾಗಿ ಮರಳು ಗಣಿಗಾರಿಕೆಗೆ ಅವಕಾಶ ದೊರೆತಿದೆ ಎಂದೇ ಅರ್ಥ. ಎಲ್ಲ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದೀರಾ? ಎಂದು ತರಾಟೆಗೆ ತೆಗೆದುಕೊಂಡರು.

ವೈದ್ಯರು ಇಲ್ಲದಿದ್ದರೆ ಪ್ರಯೋಜನವೇನು?: ಆಸ್ಪತ್ರೆಗಳಿವೆ. ಹಾಸಿಗೆಗಳಿವೆ. ಸೌಲಭ್ಯವೂ ಇದೆ. ವೈದ್ಯರೇ ಇಲ್ಲದಿದ್ದರೆ ಏನು ಪ್ರಯೋಜನ. ವೈದ್ಯರ ನೇಮಕಕ್ಕೆ ಕ್ರಮ ವಹಿಸಬೇಕು ಎಂದು ನ್ಯಾಯಮೂರ್ತಿ ಸೂಚಿಸಿದರು. ‘ಎಷ್ಟೇ ವೇತನ ಕೊಟ್ಟರೂ ವೈದ್ಯರು ಬರುತ್ತಿಲ್ಲ. ಇದರಿಂದ ಕೊರತೆ ಉಂಟಾಗಿದೆ’ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.