ADVERTISEMENT

ಸರ್ಕಾರಿ ನೌಕರರೆಂದು ಪರಿಗಣಿಸಲು ಚರ್ಚೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 4:40 IST
Last Updated 28 ಜನವರಿ 2012, 4:40 IST

ಚನ್ನಗಿರಿ: ಅಂಗನವಾಡಿ ಕಾರ್ಯಕರ್ತೆಯರು ಎಂಬ ಹೆಸರನ್ನು ಬದಲಿಸಬೇಕಾದ ಆವಶ್ಯಕತೆ ಇದೆ. ಹೆಸರನ್ನು `ಅಂಗನವಾಡಿ ಶಿಕ್ಷಕಿಯರು~ ಎಂದು ಬದಲಾಯಿಸಿ ಸರ್ಕಾರಿ ನೌಕರರು ಎಂದು ಸರ್ಕಾರ ಗುರುತಿಸುವಂತೆ ಆಗಬೇಕು. ಈ ಬಗ್ಗೆ ಅಧಿವೇಶದಲ್ಲಿ ಚರ್ಚೆ ನಡೆಸಲಾಗುವುದು ಎಂದು ಶಾಸಕ ಮಾಡಾಳ್ ವಿರೂಪಾಕ್ಕಪ್ಪ ಹೇಳಿದರು.

ಪಟ್ಟಣದ ಹಾಲಸ್ವಾಮಿ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶುಕ್ರವಾರ ನಡೆದ ಅಂಗನವಾಡಿ ಕಾರ್ಯಕರ್ತೆಯರ ಸಮಾವೇಶ, ಭಾಗ್ಯಲಕ್ಷ್ಮೀ ಬಾಂಡ್ ಹಾಗೂ ಸೌಲಭ್ಯಗಳ ಚೆಕ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಸಮಾನತೆಯನ್ನು ಮಹಿಳೆಯರಿಗೆ ಬಿಜೆಪಿ ಸರ್ಕಾರ ನೀಡಿದೆ. ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಎಲ್ಲಾ ರಂಗಗಳಲ್ಲಿಯೂ ಇಂದು ಮಹಿಳೆಯರು ಪುರುಷರಿಗೆ ಸಮಾನವಾಗಿ ಸಾಧನೆಯನ್ನು ಮಾಡುತ್ತಿದ್ದಾರೆ. ಶೇ. 33 ಮೀಸಲಾತಿ ಮಹಿಳೆಯರಿಗೆ ಸಿಗುವಂತಾಗಬೇಕು ಎಂದು ಹೇಳಿದರು.

ಹೆಣ್ಣು ಭ್ರೂಣ ಹತ್ಯೆ ಮಹಾ ಪಾಪವಾಗಿದೆ. `ಹೆಣ್ಣಿರಲಿ, ಗಂಡಿರಲಿ ಆರೋಗ್ಯವಂತ ಮಕ್ಕಳಿರಲಿ~ ಎಂಬ ಮನೋಭಾವನೆ ಹೊಂದುವುದು ಅಗತ್ಯವಾಗಿದೆ. `ಬೇಬಿಕೇರ್~ ಸಂಸ್ಕೃತಿ ಹೋಗಬೇಕಾಗಿದೆ. ಮಾತೃ ವಾತ್ಸಲ್ಯ ತೋರಿಸುವ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ಸೇರಿಸಬೇಕು. ತಾಲ್ಲೂಕಿನ 9,950 ಫಲಾನುಭವಿಗಳಿಗೆ ಇದುವರೆಗೆ ಭಾಗ್ಯಲಕ್ಷ್ಮೀ ಬಾಂಡ್‌ನ್ನು ವಿತರಣೆ ಮಾಡಲಾಗಿದೆ ಎಂದರು.

ತಾ.ಪಂ. ಅಧ್ಯಕ್ಷೆ ಇ. ಸುಧಾ ಕುಮಾರಸ್ವಾಮಿ, ಉಪಾಧ್ಯಕ್ಷ ಎನ್. ಗಣೇಶ್‌ನಾಯ್ಕ, ಪ.ಪಂ. ಉಪಾಧ್ಯಕ್ಷ ಎಂ.ಬಿ. ರಾಜಪ್ಪ, ತಹಶೀಲ್ದಾರ್ ಎಚ್.ಎಂ. ರೇವಣಸಿದ್ದಪ್ಪ, ಪ.ಪಂ. ಸದಸ್ಯರಾದ ಭಾರತಿ ಪ್ರಸಾದ್, ಬತುಲಾಬೀ, ರೆಹಮತ್ ಉಲ್ಲಾ, ಜರೀನಾಬೀ, ಕೃಷ್ಣನಾಯ್ಕ ಇತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಕಾರ್ಯಕರ್ತೆ ಪುಷ್ಪಾ ಮಹೇಶ್ ಅವರನ್ನು ಸನ್ಮಾನಿಸಲಾಯಿತು.
ಪ.ಪಂ. ಅಧ್ಯಕ್ಷೆ ಪುಷ್ಪಲತಾ ಅಧ್ಯಕ್ಷತೆ ವಹಿಸಿದ್ದರು. ಕಮಲಾ ಪ್ರಾರ್ಥಿಸಿದರು. ಸಿಡಿಪಿಒ ಎ.ಜಿ. ಶಿವಪ್ರಕಾಶ್ ಸ್ವಾಗತಿಸಿದರು. ಮಹಾಲಕ್ಷ್ಮೀ ಭಟ್ ಕಾರ್ಯಕ್ರಮ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.