ADVERTISEMENT

ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಿಂದ ರೈತರ ಬದುಕು ಹಸನು: ಶಾಸಕ ವಡ್ನಾಳ್

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 8:39 IST
Last Updated 5 ಡಿಸೆಂಬರ್ 2017, 8:39 IST

ಚನ್ನಗಿರಿ: ತಾಲ್ಲೂಕಿನ ಕಸಬಾ ಮತ್ತು ಸಂತೇಬೆನ್ನೂರು ಹೋಬಳಿಗಳ 87 ಕೆರೆಗಳಿಗೆ ತುಂಗಾಭದ್ರಾ ನದಿಯಿಂದ ನೀರು ತುಂಬಿಸುವ ₹ 446 ಕೋಟಿ ವೆಚ್ಚದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಿಂದ ಈ ಭಾಗದ ರೈತರ ಬದುಕು ಹಸನಾಗಲಿದೆ ಎಂದು ಶಾಸಕ ವಡ್ನಾಳ್‌ ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು. ತಾಲ್ಲೂಕಿನ ಮಾವಿನಹೊಳೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘4 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ₹ 2 ಕೋಟಿ ಅನುದಾನ ಬಿಡುಗಡೆಯಾಗಿದೆ. ಅದೇ ರೀತಿ ಹಿರೇಮಳಲಿ–ಮಲ್ಲಿಗೆರೆ ಗ್ರಾಮದ ರಸ್ತೆ ಅಭಿವೃದ್ಧಿಗೆ ₹ 2 ಕೋಟಿ ಅನುದಾನ ಮಂಜೂರಾಗಿದ್ದು, ಈ ದಿನ ಕಾಮಗಾರಿ ಆರಂಭಿಸಲಾಗುತ್ತಿದೆ. ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಆರಂಭಗೊಳ್ಳುತ್ತಿದ್ದು, ಅಗತ್ಯ ಪೈಪ್‌ಗಳ ಸಂಗ್ರಹಕ್ಕಾಗಿ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ ’ ಎಂದರು.

‘ಇತಿಹಾಸದಲ್ಲಿಯೇ ಬಾರದಷ್ಟು ಅನುದಾನ ಈ ನಾಲ್ಕೂವರೆ ವರ್ಷದ ಅವಧಿಯಲ್ಲಿ ಕ್ಷೇತ್ರಕ್ಕೆ ಬಂದಿದೆ. ಜನರು ಕೇಳಿರುವ ಬಹುತೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ತೃಪ್ತಿ ನನಗಿದೆ. ಯಾರು ಏನೇ ಟೀಕೆ ಮಾಡಿದರೂ ಅದಕ್ಕೆ ತಲೆಕೆಡಿಸಿಕೊಳ್ಳದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಪರಿಶಿಷ್ಟ ಜಾತಿ ಮತ್ತು ವರ್ಗದ 10,184 ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಿತರಣೆ ಮಾಡಲಾಗಿದೆ. ಇದುವರೆಗೆ 4 ಸಾವಿರ ವಿದ್ಯುತ್ ಪರಿವರ್ತಕಗಳನ್ನು ರೈತರಿಗೆ ನೀಡಲಾಗಿದೆ’ ಎಂದು ಹೇಳಿದರು.

ADVERTISEMENT

ಹೊನ್ನೇಬಾಗಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಸದಸ್ಯೆ ಮಂಜುಳ ಟಿ.ವಿ. ರಾಜು ಪಟೇಲ್ ಮಾತನಾಡಿ, ‘ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯ ಮೂಲಕ ಮಾವಿನಹೊಳೆ ಗ್ರಾಮದ ಕೆರೆಯನ್ನು ತುಂಬಿಸಿದರೆ 25 ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಶಾಸಕರು ಈ ಕೆರೆಯನ್ನು ತುಂಬಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿಕೊಂಡರು.

ತಾಲ್ಲೂಕು ಪಂಚಾಯ್ತಿ ಸದಸ್ಯ ಎ.ಜಿ. ಜಗದೀಶ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶೈಲಜಾ, ಸದಸ್ಯರಾದ ನಳಿನಾ ವೀರಭದ್ರಯ್ಯ, ಶಿವಾನಂದಪ್ಪ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಬೀವುಲ್ಲಾ, ಲೋಕೋಪಯೋಗಿ ಇಲಾಖೆ ಎಇಇ ಶಂಕರಮೂರ್ತಿ, ಗುತ್ತಿಗೆದಾರ ಶಶಿಧರ್‌ನಾಯ್ಕ, ಚಂದ್ರನಾಯ್ಕ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.