ADVERTISEMENT

ಸೌಹಾರ್ದ ಜೀವನ ನಡೆಸಿ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 9:40 IST
Last Updated 21 ಮಾರ್ಚ್ 2011, 9:40 IST

ಮಾಯಕೊಂಡ: ಲಂಬಾಣಿ ಜನಾಂಗದವರು ಎಲ್ಲಾ ಜನಾಂಗಗಳೊಂದಿಗೆ ಸೌಹಾರ್ದತೆಯಿಂದ ಜೀವಿಸಿ ಪ್ರಗತಿ ಸಾಧಿಸಲು ಸಂತ ಸೇವಾಲಾಲ್ ಸ್ವಾಮೀಜಿ ಕರೆ ನೀಡಿದರು.ಸಮೀಪದ ದೊಡ್ಡಮಾಗಡಿಯಲ್ಲಿ ಭಾನುವಾರ ನಡೆದ ಸೇವಾಲಾಲ್ ಮತ್ತು ಮರಿಯಮ್ಮ ದೇವತಾ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಲಂಬಾಣಿ ಜನಾಂಗ ಪ್ರಾಮಾಣಿಕತೆಗೆ, ನಿಷ್ಠೆಗೆ ಹೆಸರಾಗಿದೆ. ಯಾವುದೇ ಜನಾಂಗಕ್ಕಿಂತ ಹೆಚ್ಚಿನ ಶ್ರಮಜೀವಿಗಳು ತಮ್ಮ ಜನಾಂಗದಲ್ಲಿದ್ದಾರೆ. ಯುವಪೀಳಿಗೆ ಸಂತ ಸೇವಾಲಾಲ್‌ರ ಮೌಲ್ಯಗಳನ್ನು ಅನುಸರಿಸಬೇಕೆಂದರು.ಸಂಸದ ಸಿದ್ದೇಶ್ವರ ಮಾತನಾಡಿ, ಸರ್ಕಾರ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದಲ್ಲದೆ ಈ ಜನಾಂಗದವರನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿ ಮತ್ತು ಕುಲಪತಿಯನ್ನಾಗಿ ಮಾಡಿದ ಕೀರ್ತಿ ನಮ್ಮ ಸರ್ಕಾರದ್ದು ಎಂದರು.

ಮಾಜಿ ಪುರಸಭಾ ಅಧ್ಯಕ್ಷ ಎಸ್. ನೀಲಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮದ ಯುವಕರು ಸಮಾಜದ ಬುದ್ಧಿಜೀವಿಗಳ ಮಾರ್ಗದರ್ಶನದಲ್ಲಿ ನಡೆದು ಪ್ರಗತಿ ಸಾಧಿಸಲು ಕರೆ ನೀಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಹನುಮಂತಪ್ಪ ಮಾತನಾಡಿ, ದೇವಸ್ಥಾನ ನಿರ್ಮಾಣದ ಕನಸು ಇಲ್ಲಿನ ಯುವಕರ ಸಂಘಟನೆಯಿಂದ ನನಸಾಗಿದ್ದು, ಇಲ್ಲಿನ ಯುವಕರು ಇತರ ಗ್ರಾಮಗಳಿಗೆ ಮಾದರಿಯಾಗಿದ್ದಾರೆ ಎಂದರು.

ವಕೀಲ ಜಯದೇವ ನಾಯ್ಕ ಮಾತನಾಡಿ, ಬುದ್ಧ, ಬಸವರ ನಾಡಿನಲ್ಲಿ ಭ್ರಷ್ಟಾಚಾರ ಹೆಚ್ಚಿದ್ದು, ಪ್ರಾಮಾಣಿಕರು ರಾಜಕಾರಣದಿಂದ ದೂರವಾಗಿದ್ದಾರೆ ಎಂದು ವಿಷಾದಿಸಿದರು.ಸಮಾರಂಭಕ್ಕೆ ಸ್ಥಳೀಯ ಶಾಸಕರು ಗೈರುಹಾಜರಾಗಿದ್ದ ಕಾರಣ ಅಸಮಾಧಾನ ವ್ಯಕ್ತವಾಯಿತು.

ಜಿ.ಪಂ. ಸದಸ್ಯೆ ಶಾರದಾ ಉಮೇಶ ನಾಯ್ಕ, ಸೋನಿಯಾ ಬಸವರಾಜ ನಾಯ್ಕ, ಮಾಯಕೊಂಡ ರೈತಸಂಘ ಅಧ್ಯಕ್ಷ ಬಿರೇಶಪ್ಪ, ನಿವೃತ್ತ ಶಿಕ್ಷಕ ನೀಲಪ್ಪ, ಕೊಡಗನೂರು ಗ್ರಾ.ಪಂ. ಅಧ್ಯಕ್ಷೆ ಜಯಶ್ರೀ ಶಾಂತರಾಜ್, ಉಪಾಧ್ಯಕ್ಷೆ ನಿಂಗಮ್ಮ  ನಾಗರಾಜಪ್ಪ, ಸದಸ್ಯ ನೀರಭತ್ತಪ್ಪ, ಹಟ್ಟಿ ಮುಖಂಡ ಜಯಾನಾಯ್ಕ, ತಿಪ್ಪೇಶ್ ನಾಯ್ಕ, ಕರಮಚಂದ್, ವಕೀಲ ರಾಘವೇಂದ್ರ ನಾಯ್ಕ, ಮಂಜಾನಾಯ್ಕ, ಗೌಡ್ರ ಜಯ್ಯಣ್ಣ, ಕೊಡಗನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಸಿದ್ದಪ್ಪ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.