ADVERTISEMENT

ಸ್ವಚ್ಛತಾ ಉತ್ಸವ ಮಾಸಾಚರಣೆಗೆ ಜ್ಲ್ಲಿಲಾಡಳಿತ ಸಜ್ಜು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 6:35 IST
Last Updated 3 ಅಕ್ಟೋಬರ್ 2011, 6:35 IST

ದಾವಣಗೆರೆ: ಸ್ವಚ್ಛತಾ ಆಂದೋಲನ ಯೋಜನೆಯ ಅನುಷ್ಠಾನವನ್ನು ತೀವ್ರಗೊಳಿಸಲು ಜಿಲ್ಲೆಯಲ್ಲಿ ಅ. 2ರಿಂದ ನ. 4ರವರೆಗೆ `ಸ್ವಚ್ಛತಾ ಉತ್ಸವ ಮಾಸಾಚರಣೆ~ ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ತ್ರಿಶೂಲ್ ಕಲಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಮತ್ತು ಸಾಮೂಹಿಕ ಭಜನೆ, ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿಯೂ ಈ ಮಾಸಾಚರಣೆ ಮಾಡಲಾಗುವುದು. ಗ್ರಾಮಸಭೆ, ಕಾರ್ಯಾಗಾರ, ವಿಚಾರ ಸಂಕಿರಣ, ನೈರ್ಮಲ್ಯ ಜಾಥಾ, ಸ್ವಚ್ಛತೆಯ ಕುರಿತು ಕಿರುಚಿತ್ರಗಳ ಪ್ರದರ್ಶನ, ಬೀದಿನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಮಹಾತ್ಮ ಗಾಂಧೀಜಿ ಅವರು ಶಾಂತಿ, ಅಹಿಂಸೆಯ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ದೇಶಕ್ಕೆ ಅವರ ಕೊಡುಗೆ ಅಪಾರ. ಸ್ವಾತಂತ್ರ್ಯ ಬಂದ ನಂತರವೂ ಕೆಲ ಕಾಲ ಗಾಂಧೀಜಿ ಬದುಕಿ ಉಳಿದಿದ್ದರೆ ದೇಶಕ್ಕೆ ಇನ್ನೂ ಹೆಚ್ಚಿನ ಮಾರ್ಗದರ್ಶನ ದೊರೆಯುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಜಿಲ್ಲೆಯಲ್ಲಿ ಸಂಪೂರ್ಣ ಸ್ವಚ್ಛತಾ ಆಂದೋಲನ ಯೋಜನೆ ಅಡಿ ಬಡತನರೇಖೆಗಿಂತ ಕೆಳಗಿರುವವರಿಗೆ 1,22,530 ವೈಯಕ್ತಿಕ ಶೌಚಾಲಯ ನಿರ್ಮಿಸುವ ಗುರಿ ಇತ್ತು, 74,073 (ಶೇ. 60) ಸಾಧನೆ ಮಾಡಲಾಗಿದೆ. ಬಡತನರೇಖೆಗಿಂತ ಮೇಲಿರುವವರಿಗೆ 1,29,754 ವೈಯಕ್ತಿಕ ಶೌಚಾಲಯ ನಿರ್ಮಿಸುವ ಗುರಿಯಿತ್ತು, ಆ ಪೈಕಿ 1,11,220 (ಶೇ. 86) ಸಾಧನೆ ಮಾಡಲಾಗಿದೆ ಎಂದು ವಿವರಿಸಿದರು.

1,385 ಶಾಲಾ ಶೌಚಾಲಯ ನಿರ್ಮಿಸುವ ಗುರಿಯಿತ್ತು, 1,144 ಶೌಚಾಲಯ ನಿರ್ಮಿಸಲಾಗಿದೆ. 972 ಅಂಗನವಾಡಿ ಶೌಚಾಲಯ ನಿರ್ಮಿಸುವ ಮೂಲಕ ಶೇ. 100ರಷ್ಟು ಸಾಧನೆ ಮಾಡಲಾಗಿದೆ. 50 ಸಮುದಾಯ ಶೌಚಾಲಯ ನಿರ್ಮಿಸುವ ಗುರಿಗೆ 30 ಶೌಚಾಲಯ ನಿರ್ಮಿಸಿ, ಶೇ. 60ರಷ್ಟು ಸಾಧನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ನಿರ್ಮಲ ಗ್ರಾಮ ಪ್ರಶಸ್ತಿಯನ್ನು 2009-10ನೇ ಸಾಲಿಗೆ 15 ಗ್ರಾಮ ಪಂಚಾಯ್ತಿಗಳು ಪಡೆದಿದ್ದವು. 2010-11ನೇ ಸಾಲಿಗೆ 81 ಗ್ರಾಮ ಪಂಚಾಯ್ತಿಗಳನ್ನು ಅಣಿಗೊಳಿಸಲಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಇತ್ತೀಚೆಗೆ ಮರೆಯುತ್ತಿದ್ದೇವೆ. ನೆಪಮಾತ್ರಕ್ಕೆ ಅವರ ಜನ್ಮ ದಿನಾಚರಣೆ ನಡೆಯುತ್ತಿವೆ. ಯಾರನ್ನೋ ಓಲೈಸಲು ಕೆಲವು ಯೋಜನೆಗಳಿಗೆ ಯಾರದೋ ಹೆಸರು ಇಡಲಾಗುತ್ತಿದೆ ಎಂದು ವಿಷಾದಿಸಿದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಭಗತ್ ಸಿಂಗ್, ರಾಜಗುರು, ವೀರ ಸಾವರ್ಕರ್, ಮದನ್‌ಲಾಲ್ ಧೀಂಗ್ರಾ ಅಂಥವರ ತ್ಯಾಗದಿಂದ ಇಂದಿನ ಯುವಕರು ಪ್ರೇರಣೆ ಪಡೆಯಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಬಸವರಾಜ ನಾಯ್ಕ ಮಾತನಾಡಿದರು.
`ದೂಡಾ~ ಅಧ್ಯಕ್ಷ ಯಶವಂತರಾವ್ ಜಾಧವ್, ಮೇಯರ್ ಎಂ.ಎಸ್. ವಿಠ್ಠಲ್, ಉಪ ಮೇಯರ್ ಜ್ಯೋತಿ ಪಾಟೀಲ್, ಜಿ.ಪಂ. ಉಸ್ತುವಾರಿ ಅಧ್ಯಕ್ಷೆ ಜಯಲಕ್ಷ್ಮೀ ಮಹೇಶ್, ಸದಸ್ಯೆ ಸಹನಾ ರವಿ, ಪಾಲಿಕೆ ಸದಸ್ಯ ಲಿಂಗರಾಜ್, ಅಪರ ಜಿಲ್ಲಾಧಿಕಾರಿ ಎಸ್.ಎಚ್. ವಿಜಯಕುಮಾರ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುತ್ತಿ ಜಂಬುನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಎಸ್. ವೆಂಕಟೇಶ್, ಪಾಲಿಕೆ ಆಯುಕ್ತ ಪ್ರಸನ್ನ ಕುಮಾರ್, ಮುಸ್ಲಿಂ ಧಾರ್ಮಿಕ ಮುಖಂಡ ಮೌಲಾನಾ ಇಬ್ರಾಹಿಂ ಸಖಾಫಿ, ಕ್ರೈಸ್ತ ಧರ್ಮದ ಮುಖಂಡ ರಾಬರ್ಟ್, ಜೈನ ಧರ್ಮದ ಮುಖಂಡ ಲಲಿತ್ ಕುಮಾರ ಜೈನ್ ಭಾಗವಹಿಸಿದ್ದರು.

ಉಪ ವಿಭಾಗಾಧಿಕಾರಿ ಮಹಾಂತೇಶ ಬೀಳಗಿ ಸ್ವಾಗತಿಸಿದರು. ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳು ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.