ADVERTISEMENT

ಹರಿಹರ-ದಾವಣಗೆರೆ ರಸ್ತೆತಡೆ: 72 ರೈತರ ಬಂಧನ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2011, 5:55 IST
Last Updated 12 ಮಾರ್ಚ್ 2011, 5:55 IST
ಹರಿಹರ-ದಾವಣಗೆರೆ ರಸ್ತೆತಡೆ: 72 ರೈತರ ಬಂಧನ
ಹರಿಹರ-ದಾವಣಗೆರೆ ರಸ್ತೆತಡೆ: 72 ರೈತರ ಬಂಧನ   

ದಾವಣಗೆರೆ: ನಗರದ ಜಿಎಂಐಟಿ ಪಕ್ಕದಿಂದ ಕರೂರು ಸಂಪರ್ಕಿಸುವ ರೈತರ ಜಮೀನು ರಸ್ತೆಯನ್ನು ತಕ್ಷಣವೇ ನಿರ್ಮಿಸಿಕೊಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಶುಕ್ರವಾರ ರಸ್ತೆತಡೆ ಚಳವಳಿ ನಡೆಸುತ್ತಿದ್ದ 72 ಮಂದಿ ರೈತರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.

ನಿಯಮದ ಪ್ರಕಾರ ರಸ್ತೆಗೆ 12 ಅಡಿ ಸ್ಥಳ ಬಿಡಬೇಕು. ಆದರೆ, ಶ್ರೀಶೈಲ ಎಜುಕೇಷನ್ ಟ್ರಸ್ಟ್ ನಿಗದಿತ ಸ್ಥಳವನ್ನು ಬಿಡದೇ ಕಾಂಪೌಂಡ್ ನಿರ್ಮಿಸಿಕೊಂಡಿದೆ. ಕೂಡಲೇ ಕಾಂಪೌಂಡ್ ತೆರವುಗೊಳಿಸಬೇಕು. ರೈತರ ಸಂಚಾರಕ್ಕೆ ಉತ್ತಮ ರಸ್ತೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.ಜಿಎಂಐಟಿ ಕಾಲೇಜು ಕ್ಯಾಂಪಸ್‌ನಿಂದ ಹೊರ ಬಿಡುತ್ತಿರುವ ಕಲ್ಮಶ ಅಕ್ಕಪಕ್ಕದ ಜಮೀನುಗಳಲ್ಲಿ ಹರಿಯುತ್ತಿದ್ದು, ಬೆಳೆನಷ್ಟವಾಗುತ್ತಿದೆ. ಕಲ್ಮಶ ನೀರನ್ನು ಹೊರಗೆ ಹರಿಯಲು ಬಿಡದಂತೆ ಸೂಕ್ತ ಬಂದೋಬಸ್ತ್ ಮಾಡಬೇಕು. ಬೆಳೆ ಹಾನಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಎರಡು ತಾಸಿಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಿದ ಪರಿಣಾಮ ಹರಿಹರ-ದಾವಣಗೆರೆ ಮಧ್ಯದಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.
ನಂತರ ಪೊಲೀಸರು, ರೈತ ಮುಖಂಡರು ಹಾಗೂ ರೈತರನ್ನು ಬಂಧಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.ಮಾರ್ಚ್ 14ರಂದು ಸಂಜೆ 5ಗಂಟೆಗೆ ರೈತ ಮುಖಂಡರ ಸಭೆ ಕರೆದು ಅಲ್ಲಿನ ಸಮಸ್ಯೆ ಹಾಗೂ ರೈತರ ಬೇಡಿಕೆ ಕುರಿತು ಚರ್ಚಿಸಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಡಾ.ಬಿ.ಆರ್. ಹರೀಶ್ ಭರವಸೆ ನೀಡಿದರು.

ರೈತ ಮುಖಂಡರಾದ ವಾಸನದ ಓಂಕಾರಪ್ಪ, ಪೂಜಾರ್ ಅಂಜಿನಪ್ಪ, ಜಿ. ಪ್ರಭುಗೌಡ, ಮರಡಿ ನಾಗಣ್ಣ, ದೊಗ್ಗಳ್ಳಿ ಸಿದ್ದಪ್ಪ, ಸತ್ಯನಾರಾಯಣ ರೆಡ್ಡಿ ಮತ್ತಿತರರು ಚಳವಳಿಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.