ಬಸವಾಪಟ್ಟಣ: ಈ ಬಾರಿ ಹುಣಸೆ ಫಸಲು ಸಮೃದ್ಧವಾಗಿ ಬಂದಿದ್ದು ಬೆಲೆಯೂ ಉತ್ತಮ ಸ್ಥಿತಿಯಲ್ಲಿದೆ.
ಭಾರತೀಯರ ಅಡುಗೆಯ ಅತಿಮುಖ್ಯ ಪದಾರ್ಥ ಎನಿಸಿರುವ ಹುಣಸೆಹಣ್ಣು ವರ್ಷಕ್ಕೊಮ್ಮೆ ಬರುವ ಇತರ ಬೆಳೆಗಳಂತೆ ಜನರ ಕೈಸೇರುತ್ತದೆ.
ಜನವರಿಯಿಂದ ಮಾರ್ಚ್‌ವರೆಗೆ ಕಟಾವಿಗೆ ಬರುವ ಈ ಬೆಳೆ ಬಹುಪಾಲು ಗ್ರಾಮಗಳ ವಸತಿ ಪ್ರದೇಶದಲ್ಲಿ ಬೆಳೆಯುವ ಬೆಳೆ. ಹೊಲಗಳ ಅಂಚಿನಲ್ಲಿಯೂ ರೈತರು ಈ ಮರಗಳನ್ನು ಬೆಳೆಸುತ್ತಾರೆ. ಹಿಂದೆ ರಸ್ತೆಗಳಲ್ಲಿ ಸಾಲು ಮರಗಳನ್ನಾಗಿ ಬೆಳೆಸಲಾಗುತ್ತಿದ್ದರೂ, ಈಗ ರಸ್ತೆಗಳ ಅಗಲೀಕರಣದಿಂದ ಮರೆಯಾಗಿವೆ.
ರೈತರ ಮನೆಗಳ ಹಿಂಬಾಗ, ಕಣಗಳಲ್ಲಿ ತಾನೇ ತಾನಾಗಿ ಹುಟ್ಟಿ ಬೆಳೆಯುವ ಹುಣಿಸೆ ಮರಗಳು ಈಗ ಮನೆಗಳ ನಿರ್ಮಾಣದಿಂದ ಕಡಿಮೆ ಆಗತೊಡಗಿವೆ. ಕೃಷಿ ಉದ್ದೇಶದಿಂದ ರೈತರು ಹುಣಸೆ ಸಸಿಗಳನ್ನು ಸಾಕಿ ಬೆಳೆಸುವುದಿಲ್ಲ. ಇರುವ ಮರಗಳಲ್ಲಿನ ಹುಣಸೆಹಣ್ಣನ್ನೇ ಇಡೀ ವರ್ಷ ನಂಬಿ ಬದುಕಬೇಕು. ಆದ್ದರಿಂದ, ಎಲ್ಲರೂ ಸುಗ್ಗಿಯಲ್ಲಿಯೇ ಖರೀದಿಸಿ ಸಂಗ್ರಹಿಸುತ್ತಾರೆ. ಕೆಲವು ವೇಳೆ ಹವಾಮಾನ ವೈಪರೀತ್ಯದಿಂದ ಹುಣಸೆಯ ಇಳುವರಿ ಬಾರದೇ ಕೊರತೆಯಾಗುವ ಸಂಭವವೂ ಕಂಡು ಬರುತ್ತದೆ.
ಈಗ ಕ್ವಿಂಟಲ್‌ಗೆ ರೂ. 500ರಿಂದ 1200ವರೆಗೆ ಬೆಲೆ ಇದೆ. ಈಗ ಪ್ರತಿ ಶಾಲೆಗಳಲ್ಲಿಯೂ ಮಧ್ಯಾಹ್ನದ ಬಿಸಿಯೂಟದ ಸಾಂಬಾರಿಗಾಗಿ ಹುಣಸೆಹಣ್ಣಿಗೆ ಭಾರೀ ಬೇಡಿಕೆ ಇದೆ. ಆದ್ದರಿಂದ ಬೆಳೆಗಾರರಿಂದ ಕೊಂಡು ಸಂಗ್ರಹಿಸಿ ಮಾರುತ್ತೇವೆ ಎನ್ನುತ್ತಾರೆ ವ್ಯಾಪಾರಿಗಳು.
ಗ್ರಾಮೀಣ ಪ್ರದೇಶದಲ್ಲಿಯೂ ಕೂಲಿಕಾರರ ಅಭಾವ ಉಂಟಾಗಿದ್ದು, ಮರಗಳಿಂದ ಹುಣಸೆಹಣ್ಣನ್ನು ಬಡಿದು ಬೀಳಿಸುವುದು ಕಷ್ಟದ ಕೆಲಸ. ನಂತರ ಅದನ್ನು ಒಣಗಿಸಿ ಬಡಿದು ಸಂಸ್ಕರಣೆ ಮಾಡಲು ತಗಲುವ ಕೂಲಿ ಈಗ ತುಂಬಾ ದುಬಾರಿಯಾಗಿದ್ದು ಬೆಲೆ ಹೆಚ್ಚಾಗಲು ಕಾರಣ ಎನ್ನುತ್ತಾರೆ ಇಲ್ಲಿನ ರೈತ ಮುರಲೀಧರ ರಾವ್. ಬೆಲೆ ಎಷ್ಟಾದರೂ ಆಗಲಿ ಹುಣಸೆ ಹಣ್ಣು ಇಲ್ಲದೇ ಅಡುಗೆ ಸಾಧ್ಯವೇ ಎನ್ನುತ್ತಾರೆ ಗ್ರಾಹಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.