ADVERTISEMENT

ಹುಳು ಬಾಧೆಗೆ ನಳನಳಿಸುವ ಪೈರು ಸರ್ವನಾಶ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 6:42 IST
Last Updated 1 ಅಕ್ಟೋಬರ್ 2017, 6:42 IST
ಹರಪನಹಳ್ಳಿ ತಾಲ್ಲೂಕಿನ ಅರಸನಾಳು ಗ್ರಾಮದ ರೈತರ ಹೊಲದಲ್ಲಿ ವಿಚಿತ್ರ ಹುಳುಗಳ ಬಾಧೆಗೆ ಹಾಳಾಗಿರುವ ಪೈರು
ಹರಪನಹಳ್ಳಿ ತಾಲ್ಲೂಕಿನ ಅರಸನಾಳು ಗ್ರಾಮದ ರೈತರ ಹೊಲದಲ್ಲಿ ವಿಚಿತ್ರ ಹುಳುಗಳ ಬಾಧೆಗೆ ಹಾಳಾಗಿರುವ ಪೈರು   

ದಾವಣಗೆರೆ: ಕಳೆದ ಮೂರ್ನಾಲ್ಕು ವರ್ಷಗಳ ಬರಗಾಲದಿಂದ ಕಂಗಾಲಾಗಿದ್ದ ರೈತರು ಮತ್ತೊಂದು ಸಮಸ್ಯೆ ಎದುರಿಸುವಂತಾಗಿದೆ. ಬೆಳೆಗಳಿಗೆ ವಿಚಿತ್ರ ಹುಳುಗಳ ಬಾಧೆ ಕಾಡುತ್ತಿದ್ದು ತೀವ್ರ ಆತಂಕದಲ್ಲಿದ್ದಾರೆ.

ಹರಪನಹಳ್ಳಿ ತಾಲ್ಲೂಕಿನ ಅರಸನಹಾಳು ಗ್ರಾಮದ ಹೊಲಗಳಿಗೆ ಭೇಟಿ ನೀಡಿದ ವೇಳೆ ಶನಿವಾರ ರೋಗಬಾಧೆಯ ಕುರಿತು ರೈತರು ಮಾಹಿತಿ ನೀಡಿದರು. ‘ಒಂದೆಡೆ ಮಳೆಬಂತು ಎನ್ನುವ ಸಂತೋಷದಲ್ಲಿ ‌ಹಲವು ಬೆಳೆಗಳನ್ನು ಬಿತ್ತನೆ ಮಾಡಿದ್ವಿ. ಒಂದೆರೆಡು ತಿಂಗಳಲ್ಲಿ ಬೆಳೆ ಕೈಗೆ ಬರುತ್ತದೆ. ಜೀವನ ನಿರ್ವಹಣೆ ಸುಗಮವಾಗುತ್ತದೆ.

ಮಾಡಿದ ಸಾಲ ತೀರುತ್ತದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬಹುದು ಎಂಬ ಕನಸು ಕಂಡಿದ್ದೆವು. ಇದೀಗ ಹುಳುಗಳ ಬಾಧೆ ಕನಸನ್ನು ಮಣ್ಣುಪಾಲು ಮಾಡಿವೆ ಎಂದು ಅಳಲು ತೋಡಿಕೊಂಡರು ರೈತರು.

ADVERTISEMENT

‘ಹುಳುಗಳು ಹೊಲದಲ್ಲಿನ ಕಳೆಯನ್ನು ತಿನ್ನುತ್ತಿಲ್ಲ. ಬದಲಾಗಿ ದನಗಳು ಮೇಯುವಂತೆ ನವಣೆ, ಜೋಳ, ಸಜ್ಜೆ ಸೇರಿದಂತೆ ಆಹಾರ ಬೆಳೆಗಳನ್ನು ತಿಂದು ಹಾಕುತ್ತಿವೆ. ಗಂಟೆಗೆ ಎಕರೆಯಷ್ಟು ಬೆಳೆಗಳನ್ನು ತಿಂದು ಬಿಸಾಡುತ್ತಿವೆ. ಒಂದೊಂದು ಸಸಿಯಲ್ಲೂ 15 ರಿಂದ 20 ವಿಚಿತ್ರ ಹುಳುಗಳನ್ನು ಕಾಣಬಹುದು. ನೋಡಲು ಕಂಬಳಿ ಹುಳುಗಳ ಆಕಾರವಿದ್ದರೂ, ನಿಖರವಾಗಿ ಇಂತವುದೇ ಹುಳುಗಳೆಂಬ ಮಾಹಿತಿ ದೊರಕುತ್ತಿಲ್ಲ ಎನ್ನುತ್ತಾರೆ ರೈತರು.

ಅರಸನಾಳು ಗ್ರಾಮದವೊಂದರಲ್ಲೇ ಮೂರು ದಿನಗಳಲ್ಲಿ 500 ಎಕರೆಗೂ ಹೆಚ್ಚು ಬೆಳೆ ನಾಶ ಆಗಿದೆ. ಮುಂಜಾನೆ ಹುಲುಸಾಗಿದ್ದ ಸಂಜೆ ಹೊತ್ತಿಗೆ ಇರುವುದಿಲ್ಲ. ಹುಳುಗಳ ಹತೋಟಿಯೇ ಸವಾಲಾಗಿದೆ. ಈ ಬಗ್ಗೆ ಕೃಷಿ ಅಧಿಕಾರಿಗಳಿಗೂ ಮಾಹಿತಿ ಇಲ್ಲ. ಇದೇ ಮೊದಲು ಇಂತಹ ಹುಳುಗಳನ್ನು ನಾವು ಕಂಡಿರೋದು ಎನ್ನುತ್ತಾರೆ ರೈತರು
ಜಿಲ್ಲಾಡಳಿತ, ಸರ್ಕಾರ ಕೂಡಲೇ ಬೆಳೆಗಳಿಗೆ ಆಗಿರುವ ನಷ್ಟ ಭರಿಸಬೇಕು. ಅಷ್ಟಿಷ್ಟು ಜೀವ ಉಳಿಸಿಕೊಂಡಿರುವ ಬೆಳೆಗಳನ್ನು ಉಳಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರಿಗೆ ನೆರವಾಗಬೇಕು ಎನ್ನುತ್ತಾರೆ ರಾಜ್ಯ ರೈತ ಮುಖಂಡ ಸಿದ್ದಪ್ಪ.

ಕುಂಚೂರು, ಕಣಿವೆಹಳ್ಳಿ, ದಿದ್ದಿಗೆ, ಕಸ್ತೂರಿಪುರ, ಕುರುಡಿ, ಜಗಳೂರು, ಹರಪನಹಳ್ಳಿ, ದಾವಣಗೆರೆ ಸೇರಿದಂತೆ ಜಿಲ್ಲೆಯಲ್ಲಿ ಕನಿಷ್ಠ 2 ಸಾವಿರ ಎಕರೆ ಪ್ರದೇಶದ ಬೆಳೆಗಳು ನಾಶವಾಗಿವೆ. ಇಷ್ಟಾದರೂ ಕೃಷಿ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿಲ್ಲ. ರಜೆಯ ಮಜಾ ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ರಾಜ್ಯ ರೈತ ಸಂಘ (ಹುಚ್ಚವನಹಳ್ಳಿ ಮಂಜುನಾಥ್‌ ಬಣ) ಹಾಗೂ ಹಸಿರು ಸೇನೆ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್‌.

ಗ್ರಾಮದಲ್ಲಿರುವ ಹಿರಿಯ ಹಾಗೂ ಅನುಭವಿ ರೈತರಿಗೂ ಹುಳುಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಮೆಕ್ಕೆಜೋಳ, ರಾಗಿ, ಊಟದ ಜೋಳ, ಸಜ್ಜೆ, ನವಣಿ, ಕುಂಬಳಕಾಯಿ ಸೇರಿದಂತೆ ಹಲವು ಬೆಳೆಗಳನ್ನು ತಿಂದು ಹಾಕುತ್ತಿವೆ. ಇಡೀ ಪ್ರದೇಶ ಸಂಪೂರ್ಣ ಬರಡಾಗಿ ಕಾಣುತ್ತಿದೆ ಎಂದರು.

ಕೃಷಿ ಅಧಿಕಾರಿಗಳು ಬೆಲ್ಲ, ಅಕ್ಕಿ ತೌಡು ಮಿಶ್ರಣ ಮಾಡಿ ಬೆಳೆಗಳಿಗೆ ಉಗ್ಗಿ, ನಿವಾರಣೆ ಕಾಣದಿದ್ದರೆ ವಾಸನೆ ಬರುವ ಹಾಲ್ಕೋಹಾಲ್‌ ಅನ್ನು ಪೌಡರ್‌ನೊಂದಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಆದರೂ ಹುಳುಗಳ ಬಾಧೆ ಸ್ವಲ್ಪವೂ ಕಡಿಮೆ ಆಗಿಲ್ಲ. ಗ್ರಾಮಗಳಿಗೆ ಭೇಟಿನೀಡದೆ ಕಚೇರಿಯಲ್ಲೇ ಕುಳಿತು ಸಲಹೆ ನೀಡುತ್ತಿದ್ದಾರೆ. ಸಮಗ್ರ ಕೀಟ ನಿವಾರಣೆಗೆ ಪರಿಹಾರ ನೀಡುತ್ತಿಲ್ಲ. ಕೂಡಲೇ ಜಿಲ್ಲಾಡಳಿತ, ಕೃಷಿ ಇಲಾಖೆ, ರಾಜ್ಯ ಸರ್ಕಾರದಿಂದ ಪರಿಹಾರ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಕೃಷಿ ಇಲಾಖೆ ಅಧಿಕಾರಿಗಳು ಸಮಗ್ರ ಪರಿಹಾರಕ್ಕಾಗಿ ಉಚಿತ ಔಷಧಿ ವಿತರಿಸಬೇಕು. ಇಲ್ಲವೇ ಔಷಧಿ ಸಿಂಪರಣೆ ಮಾಡಿಸಿ ಹುಳುಗಳನ್ನು ಹತೋಟಿಗೆ ತರಬೇಕು. ಇಲ್ಲವಾದರೆ, ಅ.2 ರಂದು ಜಿಲ್ಲಾಧಿಕಾರಿ ಮನೆ ಮುಂದೆ ಪ್ರತಿಭಟನೆ ಮಾಡುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹುಚ್ಚವನಹಳ್ಳಿ ಮಂಜುನಾಥ್‌ ಎಚ್ಚರಿಕೆ ನೀಡಿದರು.

ಹವಾಮಾನ ವೈಪರಿತ್ಯದಿಂದ ಬೆಳೆಗಳಿಗೆ ಹುಳುಬಾಧೆ ಹರಡುತ್ತವೆ. ಮೇಲಧಿಕಾರಿಗಳ ಸೂಚನೆ ಮೇರೆಗೆ ಔಷಧ ಸಿಂಪರಣೆ ಮಾಡಲು ತಿಳಿಸಿದ್ದೇವೆ. ಆದರೂ ಕಡಿಮೆ ಆಗಿಲ್ಲ. ಹಿರಿಯ ಅಧಿಕಾರಿಗಳು ಹೊಲಗಳಿಗೆ ಭೇಟಿನೀಡಿ ಪರಿಶೀಲಿಸಲಿದ್ದಾರೆ ಎನ್ನುತ್ತಾರೆ ತೆಲಗಿಯ ರೈತ ಸಂಪರ್ಕ ಕಚೇರಿಯ ಸಹಾಯಕ ಕೃಷಿ ಅಧಿಕಾರಿ ಅಬ್ದುಲ್‌ ಸಾಲಿಯಾನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.