
ದಾವಣಗೆರೆ: ‘ಭಾವನೆಯಿಂದಷ್ಟೇ ಕವಿತೆ ಬರೆದರೆ ಸಾಲದು; ಕವಿತೆಗಳಲ್ಲಿ ಸಾಮಾಜಿಕ ಸ್ಪಂದನೆ ಇರಬೇಕು’ ಎಂದು ಸಾಹಿತಿ ಯು.ಎನ್.ಸಂಗನಾಳಮಠ ಅಭಿಪ್ರಾಯಪಟ್ಟರು.
ನಗರದ ರೋಟರಿ ಬಾಲಭವನದಲ್ಲಿ ಪ್ರಗತಿಪರ ಸಾಹಿತ್ಯ ಪರಿಷತ್ ಹಾಗೂ ಶಿಕಾರಿಪುರದ ಮಿಂಚು ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಕೆ.ಬಿ. ಸಂತೋಷ್ ಅವರ ಪ್ರಥಮ ಕವನ ಸಂಕಲನ ‘ಕವಲೊಡೆದ ನದಿ’ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
‘ಕವಿತೆಗಳಿಗೆ ಒಂದು ಸಾಮರ್ಥ್ಯ ಇರುತ್ತದೆ. ಒಂದೇ ಪದದಲ್ಲಿ ಹಲವು ಬಾವಾರ್ಥ ಕಟ್ಟಿಕೊಡಬಹುದು. ಸಾಮಾಜಿಕ ಪರಿವರ್ತನೆ, ಕವಿತೆಯ ಉದ್ದೇಶವಾಗಿರಬೇಕು. ಬರಹಗಾರರು ಓದಿದಷ್ಟೂ ಕವಿತೆಗಳು ಪರಿಣಾಮಕಾರಿ ಆಗಿ ಮೂಡಲು ಸಾಧ್ಯ. ವೈದ್ಯಕೀಯ ಸೇವೆಯ ಜೊತೆಗೆ ಕವಿತೆಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡುತ್ತಿರುವ ಸಂತೋಷ್ ಸೇವೆ ಶ್ಲಾಘನೀಯ ಎಂದು ಹೇಳಿದರು.
ಸಂತೋಷ್ ಅವರು ಎಕ್ಸ್‌ರೇ ಮಾಡುವ ಜೊತೆಗೆ ಸಮಾಜದ ಕುಂದುಕೊರತೆ, ಸಾಮಾಜಿಕ ವೈಪರೀತ್ಯಕ್ಕೂ ಚಿಕಿತ್ಸೆ ನೀಡುತ್ತಿದ್ದಾರೆ ಎಂದ ಅವರು, ಸಮಾಜದಲ್ಲಿ ಮಾನವೀಯತೆ ಬದಲಾಗುತ್ತಿದೆ. ಸಂಬಂಧಗಳು ನಶಿಸಿ ಹೋಗುತ್ತಿವೆ. ಕವಿಗಳು, ಸಂಬಂಧಗಳು ಬೆಸೆಯುವ ಸೂಜಿಯಾಗಿ ಕವಿತೆ ಹೆಣೆಯಲಿ ಎಂದು ಆಶಿಸಿದರು.
ಕವಿಗಳಿಗೆ ಸಂತೃಪ್ತಿ ಇರಬಾರದು; ಅತೃಪ್ತಿ ಇರಬೇಕು. ಅತೃಪ್ತಿಯಿದ್ದರೆ ಮಾತ್ರ ಹೆಚ್ಚೆಚ್ಚು ಕವಿತೆಗಳು ಹಾಗೂ ಪರಿಣಾಮಕಾರಿ ಕವಿತೆಗಳು ಮೂಡಲು ಸಾಧ್ಯ ಎಂದು ಹೇಳಿದರು.
ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಮಾತನಾಡಿ, ಕವಿತೆಗಳಿಗೆ ಸಮಾಜದಲ್ಲಿ ಅನೇಕ ಅಲೆ ಸೃಷ್ಟಿಸು ಶಕ್ತಿಯಿದೆ. ಮಾನವ ಚಂದ್ರಲೋಕಕ್ಕೆ ಹೋಗಿ ಬರುವವಷ್ಟರ ಮಟ್ಟಿಗೆ ವಿಜ್ಞಾನ ಬೆಳೆದಿದೆ. ಆದರೆ, ನಮ್ಮ ಮಗುವಿಗೆ ತೋರಿಸುತ್ತಿದ್ದ ಚಂದಮಾಮ ಅದೇ ಕವಿತೆಯೊಳಗೆ ಅಡಗಿದ್ದಾನೆ ಎಂದು ಹೇಳಿದರು.
ಸಂತೋಷ್ ಅವರು ನನ್ನ ಶಿಷ್ಯ. ವೈದ್ಯನಾಗಿ ಸಾಹಿತ್ಯ ವಲಯದಲ್ಲೂ ಗುರುತಿಸಿಕೊಂಡಿರುವುದು ಸಂತೋಷದ ವಿಚಾರ. ಅವರ ಉದ್ದೇಶ ಒಳ್ಳೆಯದು. ಯುವ ಸಾಹಿತಿಗಳಿಗೆ ಸಮಾಜ ಹಾಗೂ ಸಾಹಿತಿಗಳು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಕೃತಿ ಕುರಿತು ಸಂತೇಬೆನ್ನೂರು ಫೈಜ್ನಟ್ರಾಜ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.