ADVERTISEMENT

‘ಖಾತ್ರಿ ದುರ್ಬಳಕೆ: ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಿ’

ಸಭೆಯಲ್ಲಿ ಪ್ರತಿಧ್ವನಿಸಿದ ತಿಮ್ಲಾಪುರ ಗ್ರಾಮ ಪಂಚಾಯ್ತಿ ಅವ್ಯವಹಾರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 6:03 IST
Last Updated 4 ಡಿಸೆಂಬರ್ 2013, 6:03 IST

ದಾವಣಗೆರೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹಣ ದುರ್ಬಳಕೆ, ಅರಣ್ಯ ಇಲಾಖೆ ಪ್ರಗತಿಯ ಬಗ್ಗೆ ಆಕ್ರೋಶ, ಕುಡಿಯುವ ನೀರು ಕಲ್ಪಿಸದ ಅಧಿಕಾರಿಗಳ ವಿರುದ್ಧ ಸಂಸತ್‌ ಸದಸ್ಯರ ಗರಂ, ಕಾಮಗಾರಿ ನಡೆದ ಸ್ಥಳಗಳ ಪರಿಶೀಲನೆ...

ಇವು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಸಂಸತ್‌ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೇಳಿ ಬಂದ ಪ್ರಮುಖ ವಿಷಯಗಳು.

ತಿಮ್ಲಾಪುರ ಗ್ರಾಮ ಪಂಚಾಯ್ತಿಯ ಪಿಡಿಒ ಒಬ್ಬರು ಅವ್ಯವಹಾರ ನಡೆಸಿದ್ದಾರೆ. ಅವರ ಮೇಲೆ ಕ್ರಿಮಿನಲ್‌ ದೂರು ದಾಖಲಾಗಿ, ಅವರನ್ನು ಅಮಾನತು ಮಾಡಲಾಗಿತ್ತು. ಮತ್ತೆ ಕೆಲಸಕ್ಕೆ ಮರುನೇಮಕ ಮಾಡಲಾಗಿದೆ ಎಂದು ಸಂಸತ್‌ ಸದಸ್ಯ ಆಕ್ರೋಶ ವ್ಯಕ್ತಪಡಿಸಿದರು.

‘ಖಾತ್ರಿ’ ಯೋಜನೆ ಹಣ ದುರ್ಬಳಕೆ ಮಾಡಿದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬೇಕು. ಅಮಾನತು ಆದ ಅಧಿಕಾರಿಯನ್ನು ಮತ್ತೆ ಕೆಲಸಕ್ಕೆ ಕರೆಸಿಕೊಂಡಿದ್ದೀರಾ? ಅವರ ಬಗ್ಗೆ ಕೂಡಲೇ ಕ್ರಮಕೈಗೊಳ್ಳಿ ಎಂದು ಸೂಚಿಸಿದರು.

ಆಗ ಜಿಲ್ಲಾ ಪಂಚಾಯ್ತಿ ಸಿಇಒ ಎ.ಬಿ.ಹೇಮಚಂದ್ರ ಪ್ರತಿಕ್ರಿಯಿಸಿ, ‘ಖಾತ್ರಿ’ ಅವ್ಯವಹಾರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. 2009ರ ಅವಧಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ದೂರು ದಾಖಲಾಗಿದೆ. 2010–11 ಹಾಗೂ 11–12ನೇ ಸಾಲಿನ ಅವ್ಯವಹಾರದ ಬಗ್ಗೆ ಅಧಿಕಾರಿಗಳ ತಂಡ ಕಳುಹಿಸಿ ತನಿಖೆ ನಡೆಸಲಾಗುತ್ತಿದೆ. ಯಾವುದೇ ದಾಖಲೆಗಳು ಇಲ್ಲದಿರುವುದು ಪತ್ತೆಯಾಗಿದೆ.  ಬುಧವಾರವೇ ಮತ್ತೊಮ್ಮೆ ಪಂಚಾಯ್ತಿ ಕಚೇರಿಗೆ ಅಧಿಕಾರಿಗಳನ್ನು ಕಳುಹಿಸಿ ಎಲ್ಲಾ ದಾಖಲೆ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ತಪ್ಪಿದ್ದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಅರಣ್ಯ ಇಲಾಖೆ ಏನು ಮಾಡುತ್ತಿದ್ದೆ. ಖಾತ್ರಿಯಲ್ಲಿ ಸುಮಾರು ₨ 135 ಕೋಟಿ ಹಣ ಬಂದಿದೆ. ಅದರಲ್ಲಿ ಅರಣ್ಯ ಇಲಾಖೆ ಪರಿಸರ ಉಳಿಸಿ; ಬೆಳೆಸಲು ₨ 13 ಕೋಟಿ ಹಣ ನೀಡಲಾಗುತ್ತಿದೆ. ಅದು ಎಲ್ಲಿಗೆ ಹೋಗಿದೆ? ಎಂದು ಸಿದ್ದೇಶ್ವರ ಪ್ರಶ್ನಿಸಿದರು.

ಆಗ ಅರಣ್ಯ ಇಲಾಖೆ ಅಧಿಕಾರಿ ಬೋರ್ಕರ್‌ ಮಾತನಾಡಿ, ಹೊದ ವರ್ಷ ಖಾತ್ರಿ ಅಡಿ ಸಸಿ ಬೆಳೆಸುವ ಸೌಲಭ್ಯ ಇರಲಿಲ್ಲ. ಆದ್ದರಿಂದ ಸುಮಾರು 10 ಲಕ್ಷ ಸಸಿ ವಿತರಣೆ ಮಾಡಲಾಗಿತ್ತು. ಪ್ರಸಕ್ತ ವರ್ಷ ಗಿಡ ನೆಡಲು ಅವಕಾಶವಿದ್ದು, 2.56 ಲಕ್ಷ ಸಸಿ ನೆಡಲಾಗಿದೆ. ಸುಮಾರು 61 ಹೆಕ್ಟೇರ್‌ನಲ್ಲಿ ನಾಟಿ ಮಾಡಲಾಗಿದ್ದು, ರಸ್ತೆಬದಿಯೂ ಗಿಡ ನೆಟ್ಟು ಸಂರಕ್ಷಣೆ ಮಾಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ವಿದ್ಯುತ್‌ ನೀಡಿ: ವಿದ್ಯುತ್‌ ಸಂಪರ್ಕ ಕಾಣದ ಹರಿಹರದ ಗೋವಿನಹಾಳು ಕ್ಯಾಂಪ್‌, ದಾವಣಗೆರೆಯ ಕೋಡಿಹಳ್ಳಿ, ಹೊನ್ನಾಳಿಯ ಕೋಡಿಕಟ್ಟೆ ಗ್ರಾಮಕ್ಕೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.

ಇಂದಿರಾ ಆವಾಸ್‌ ಯೋಜನೆ ಅಡಿ 58.33ರಷ್ಟು ಪ್ರಗತಿಯಾಗಿದೆ. ಇದು ನನಗೆ ತೃಪ್ತಿ ತಂದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳಬಾರದು. ಸಭೆಯಲ್ಲಿ ನಾವೇನಾದರೂ ಆರೋಪ ಮಾಡಿದರೆ ಕಾರ್ಯಕರ್ತರಿಗೆ ಬೈದಂತೆ ಎನ್ನುತ್ತೀರಾ? ಜನರಿಗೆ ನಾವೇನು ಉತ್ತರ ನೀಡುವುದು. ಗರ್ಭಗುಡಿಯಿಂದ ಕುಡಿಯುವ ನೀರು ಇನ್ನೂ ಎರಡು ಗ್ರಾಮಗಳಿಗೆ ಸಿಕ್ಕಿಲ್ಲ. ಕೂಡಲೇ ತಲುಪಿಸಿ ಎಂದು ಆದೇಶಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪ್ರೇಮಾ ಲೋಕೇಶಪ್ಪ ಮಾತನಾಡಿ, ಚನ್ನಗಿರಿ ತಾಲ್ಲೂಕಿನಲ್ಲಿ ಟ್ಯಾಂಕ್‌ ಮಾತ್ರ ನಿರ್ಮಿಸಲಾಗಿದೆ. ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ಆಪಾದಿಸಿದರು.

ಟ್ಯಾಂಕ್‌ ಕಟ್ಟಿ ನೀರು ಕೊಡಲಿಲ್ಲ ಎಂದರೆ ಅಧಿಕಾರಿಗಳ ಬೇಜವಾಬ್ದಾರಿ ತನ ಅರ್ಥವಾಗುತ್ತದೆ. ಈ ಕೂಡಲೇ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.
ಮಲೇಬೆನ್ನೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ಎಂಬ ದೂರುಗಳು ಬಂದಿವೆ ಎಂದು ಸಿದ್ದೇಶ್ವರ್‌ ಗಮನ ಸೆಳೆದಾಗ, ಇನ್ನೊಂದು ತಿಂಗಳಲ್ಲಿ ಕುಡಿಯುವ ನೀರು ಕಲ್ಪಿಸಲಾಗುವುದು ಎಂದು ಹೇಮಚಂದ್ರ ಭರವಸೆ ನೀಡಿದರು.

ಪರಿಶೀಲನೆ...: ಚೆಕ್‌ಡ್ಯಾಂಗಳು ಸೋರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಅವುಗಳನ್ನು ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.
ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.