ADVERTISEMENT

ದಾವಣಗೆರೆ: ಮತ್ತೆ 14 ಜನರಿಗೆ ಕೋವಿಡ್‌

ನಗರದಲ್ಲಿ 61ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 9 ಮೇ 2020, 9:14 IST
Last Updated 9 ಮೇ 2020, 9:14 IST
ಮಹಾಂತೇಶ ಬೀಳಗಿ
ಮಹಾಂತೇಶ ಬೀಳಗಿ   

ದಾವಣಗೆರೆ: ನಗರದಲ್ಲಿ ಮತ್ತೆ ಆರು ಮಕ್ಕಳು ಸೇರಿ 14 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 61 ಜನರಿಗೆ ಕೊರೊನಾ ಸೋಂಕು ತಗುಲಿದಂತಾಗಿದೆ.

ಬಾಷಾನಗರದ ಸ್ಟಾಫ್‌ ನರ್ಸ್‌ನ (ಪಿ–533) ಸಂಪರ್ಕದಿಂದ 10 ಜನರಿಗೆ ಹಾಗೂ ಜಾಲಿನಗರದ ಮೃತ ವೃದ್ಧನಿಂದ (ಪಿ–556) ನಾಲ್ವರಿಗೆ ಸೋಂಕು ತಗುಲಿರುವುದನ್ನು ವೈದ್ಯಕೀಯ ವರದಿ ಖಚಿತಪಡಿಸಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ಟಾಫ್‌ ನರ್ಸ್‌ನ ಸಂಪರ್ಕದಿಂದ 18 ವರ್ಷದ ಯುವತಿ (ಪಿ–728), ಆರು ವರ್ಷದ ಬಾಲಕ (ಪಿ–729), ಒಂಬತ್ತು ವರ್ಷದ ಬಾಲಕ (ಪಿ–730), 36 ವರ್ಷದ ಯುವಕ (ಪಿ–731), 32 ವರ್ಷದ ಮಹಿಳೆ (ಪಿ–732), ಮೂರು ವರ್ಷದ ಬಾಲಕಿ (ಪಿ–733), 48 ವರ್ಷದ ಪುರುಷ (ಪಿ–734), 13 ವರ್ಷದ ಬಾಲಕಿ (ಪಿ–735), ಎಂಟು ವರ್ಷದ ಬಾಲಕ (ಪಿ–736), 38 ವರ್ಷದ ಮಹಿಳೆಗೆ (ಪಿ–737) ಕೊರೊನಾ ಸೋಂಕು ಕಾಣಿಸಿ ಕೊಂಡಿದೆ. ಸ್ಟಾಫ್‌ ನರ್ಸ್‌ನ ಸಂಪರ್ಕದಿಂದ ಇದುವರೆಗೆ ಒಟ್ಟು 30 ಜನರಿಗೆ ಸೋಂಕು ಹರಡಿದೆ.

ADVERTISEMENT

ಜಾಲಿನಗರದ ವೃದ್ಧನ ಸಂಪರ್ಕದಿಂದ 10 ವರ್ಷದ ಬಾಲಕ (ಪಿ–724), 20 ವರ್ಷದ ಯುವಕ (ಪಿ–725), 18 ವರ್ಷದ ಯುವತಿ (ಪಿ–726), 27 ವರ್ಷದ ಮಹಿಳೆಗೆ (ಪಿ–727) ಸೋಂಕು ತಗುಲಿದೆ. ಈ ವೃದ್ಧನಿಂದ ಇದುವರೆಗೆ ಒಟ್ಟು 16 ಜನರಿಗೆ ಸೋಂಕು ಹರಡಿದೆ. ವೃದ್ಧನ ಸೊಸೆಯ (ಪಿ–581) ಸಂಪರ್ಕದಿಂದ ಏಳು ಜನರಿಗೆ ಸೋಂಕು ಹರಡಿದೆ.

ಕೋವಿಡ್‌–19 ರೋಗದಿಂದ ಗುರುವಾರ ಮಹಿಳೆ ಮೃತಪಟ್ಟಿರುವುದೂ ಸೇರಿ ನಗರದಲ್ಲಿ ಇದುವರೆಗೆ ಒಟ್ಟು ನಾಲ್ವರು ಈ ರೋಗದಿಂದ ಅಸುನೀಗಿದ್ದಾರೆ. ಇಬ್ಬರು ರೋಗಿಗಳು ಮಾತ್ರ ಗುಣಮುಖರಾಗಿದ್ದಾರೆ. ಶುಕ್ರವಾರ ವರದಿಯಾದ ಪ್ರಕರಣಗಳೂ ಸೇರಿ ಜಿಲ್ಲೆಯಲ್ಲಿ ಒಟ್ಟು 55 ಕೋವಿಡ್‌ ಪ್ರಕರಣಗಳು ಸಕ್ರಿಯವಾಗಿವೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌, ಜಿಲ್ಲಾ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಡಾ.ಕೆ.ಎಚ್‌. ಯತೀಶ್‌ ಹಾಜರಿದ್ದರು.

ಸತ್ಯ ಹೇಳಿದರೆ ಬದುಕುಳಿಯುತ್ತೀರಿ: ಡಿಸಿ

‘ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಕೋವಿಡ್‌ ರೋಗ ಬಂದರೆ ಎಷ್ಟು ದಿನ ಎಂದು ಮುಚ್ಚಿಡಲು ಸಾಧ್ಯ? ಈ ರೋಗ ಬಂದರೂ ಮುಚ್ಚಿಟ್ಟರೆ ಬಹಳ ತೊಂದರೆ ಅನುಭವಿಸುತ್ತೀರಿ. ಕೊನೆಯ ಹಂತಕ್ಕೆ ಆಸ್ಪತ್ರೆಗೆ ಬಂದರೆ ಗುಣಮುಖವಾಗಿ ಬದುಕುಳಿಯುವುದು ಕಷ್ಟ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಸಿದರು.

‘ಕೋವಿಡ್‌ ಪಾಸಿಟಿವ್‌ ಇರುವವರೊಂದಿಗೆ ಸಂಪರ್ಕ ಹೊಂದಿದವರು ಸ್ವಯಂ ಪ್ರೇರಣೆಯಿಂದ ನಮ್ಮ ಬಳಿಗೆ ಬಂದರೆ ನಿಮ್ಮನ್ನು ಬದುಕುಳಿಸುವ ಸಾಮರ್ಥ್ಯ ನಮ್ಮ ವೈದ್ಯರಿಗಿದೆ. ಆಶಾ ಕಾರ್ಯಕರ್ತರು ಮನೆಗೆ ಬಂದಾಗ ಸತ್ಯವನ್ನು ಮರೆಮಾಚಬೇಡಿ. ನಮ್ಮ ನಗರವನ್ನು ಮತ್ತೆ ಮೊದಲಿನಂತೆ ಮಾಡಲು ಸಹಕರಿಸಿ’ ಎಂದು ಮನವಿ ಮಾಡಿದರು.

ಬರಬೇಕಿದೆ 257 ಮಾದರಿಗಳ ವರದಿ

‘ಶುಕ್ರವಾರ ಒಟ್ಟು 141 ಜನರ ಮಾದರಿಗಳು ನೆಗೆಟಿವ್‌ ಎಂದು ಬಂದಿದೆ. ಇನ್ನೂ 257 ಜನರ ಮಾದರಿಗಳ ವರದಿ ಪ್ರಯೋಗಾಲಯದಿಂದ ಬರುವುದು ಬಾಕಿ ಉಳಿದಿದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

‘ಈ ದಿನ ಒಟ್ಟು 150 ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಇದುವರೆಗೆ ಒಟ್ಟು 1,500 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, 1,243 ಮಾದರಿಗಳು ನೆಗೆಟಿವ್‌ ಎಂದು ವರದಿ ಬಂದಿದೆ’ ಎಂದು ವಿವರಿಸಿದರು.

ಮಕ್ಕಳ ತಜ್ಞರಿಂದಲೂ ನಿಗಾ

‘ಕೊರೊನಾ ಸೋಂಕಿತರಲ್ಲಿ ಮಕ್ಕಳೂ ಇದ್ದು ಎಲ್ಲರೂ ಆರೋಗ್ಯವಾಗಿದ್ದಾರೆ. ಯಾರಲ್ಲೂ ರೋಗ ಲಕ್ಷಣ ಕಾಣಿಸಿಕೊಂಡಿಲ್ಲ. ಮಕ್ಕಳ ತಜ್ಞರ ಮೂಲಕ ಇವರ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ. ರೋಗ ಕಾಣಿಸಿಕೊಂಡರೆ ಮಕ್ಕಳ ತಜ್ಞರ ಮೂಲಕ ಚಿಕಿತ್ಸೆ ಕೊಡಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಇಂದು ವೈದ್ಯರ ಸಭೆ ನಡೆಸಿದ್ದೇನೆ. ಕರ್ತವ್ಯ ಲೋಪದಿಂದ ರೋಗಿಯ ಸಾವಿಗೆ ಕಾರಣವಾದರೆ ಅಕ್ಷಮ್ಯ ಅಪರಾಧ ಆಗಲಿದೆ ಎಂದು ಎಚ್ಚರಿಕೆ ನೀಡಿದ್ದೇನೆ. ಕೇಂದ್ರ ಸರ್ಕಾರ ರೂಪಿಸಿರುವ ಶಿಷ್ಟಾಚಾರದಂತೆ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದ್ದೇನೆ. ಬಾಪೂಜಿ ಆಸ್ಪತ್ರೆ ಹಾಗೂ ಎಸ್‌.ಎಸ್‌. ಆಸ್ಪತ್ರೆಯನ್ನೂ ಬಳಸಿಕೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.