ADVERTISEMENT

ಅಯೋಧ್ಯೆಯ ರಾಮಮಂದಿರಕ್ಕೆ 15 ಕೆ.ಜಿ ಬೆಳ್ಳಿ ಇಟ್ಟಿಗೆ

ರಥಯಾತ್ರೆ ಸಂದರ್ಭದ ಘರ್ಷಣೆಯಲ್ಲಿ ಹುತಾತ್ಮರಾದವರ ನೆನಪಿನಲ್ಲಿ ಇಟ್ಟಿಗೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 14:32 IST
Last Updated 4 ಅಕ್ಟೋಬರ್ 2020, 14:32 IST
ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ನೀಡಲು ನಿರ್ಮಿಸಿರುವ ಬೆಳ್ಳಿ ಇಟ್ಟಿಗೆ
ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ನೀಡಲು ನಿರ್ಮಿಸಿರುವ ಬೆಳ್ಳಿ ಇಟ್ಟಿಗೆ   

ದಾವಣಗೆರೆ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗಬೇಕು ಎಂಬ ವಿಚಾರಕ್ಕಾಗಿ 1990ರ ಅ. 6ರಂದು ನಡೆದ ರಥಯಾತ್ರೆ ಸಂದರ್ಭ ನಡೆದ ಘರ್ಷಣೆಯ‌ಲ್ಲಿ ಹುತಾತ್ಮರಾದ ನೆನಪಿಗಾಗಿ ರಾಮಮಂದಿರಕ್ಕೆ 15 ಕೆ.ಜಿ. ಬೆಳ್ಳಿ ಇಟ್ಟಿಗೆ ನೀಡಲು ಇಲ್ಲಿನ ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ.

‘ಮಹಾರಾಷ್ಟ್ರದ ಕೊಲ್ಹಾಪುರದ ಶಿಲ್ಪಿ ಗೌತಮ್‌ ಅವರು ಎರಡು ತಿಂಗಳಿನಿಂದ ಇಟ್ಟಿಗೆಯನ್ನು ಸಿದ್ಧಪಡಿಸಿದ್ದು, ₹11 ಲಕ್ಷ ವೆಚ್ಚವಾಗಿದೆ. ಇಟ್ಟಿಗೆ ಮುಂಭಾಗ ಶ್ರೀರಾಮಮಂದಿರದ ಮಾದರಿ ಹಾಗೂ ಶ್ರೀರಾಮನ ಚಿತ್ರ ಬಿಡಿಸಲಾಗಿದೆ. ಮೇಲ್ಭಾಗದಲ್ಲಿ ‘ಜೈ ಶ್ರೀರಾಮ್‌’ ಎಂದು ಹಿಂದಿಯಲ್ಲಿ ಬರೆದಿದ್ದು, ಹಿಂಬದಿಯಲ್ಲಿ ಹುತಾತ್ಮರಾದ 8 ಮಂದಿಯ ಹೆಸರುಗಳನ್ನು ಕೆತ್ತಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅ.6ರಂದು ಹುತಾತ್ಮರ ಸ್ಥಳ ನಗರದ ವೆಂಕಟೇಶ್ವರ ವೃತ್ತದಲ್ಲಿ ಇಟ್ಟಿಗೆಯ ಸ್ವಾಗತ ಕಾರ್ಯಕ್ರಮ ನಡೆಯಲಿದ್ದು, ಅಂದು ಬೆಳಿಗ್ಗೆ 10.30ಕ್ಕೆ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಾಮರಥದಲ್ಲಿ ಇರಿಸಿ ಪುಷ್ಪಾರ್ಚನೆ ಮಾಡಲಾಗುವುದು’ ಎಂದರು.

ADVERTISEMENT

‘ನಗರದ ಮುಖ್ಯರಸ್ತೆಗಳಲ್ಲಿ ಮೆರವಣಿಗೆಯ ಮೂಲಕ ಪಿ.ಜೆ.ಬಡಾವಣೆಯ ರಾಮಮಂದಿರದಲ್ಲಿ ಪೂಜಿಸಿ, ನಂತರ ಪೇಜಾವರ ಮಠದ ರಾಮಮಂದಿರದ ಟ್ರಸ್ಟಿಗಳ ಮೂಲಕ ಅಯೋಧ್ಯೆಗೆ ಕಳುಹಿಸಲಾಗುವುದು. ಇಲ್ಲವೇ ನಾವೇ ಖುದ್ದಾಗಿ ಅಯೋಧ್ಯೆಗೆ ತಲುಪಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.