ಪಾನಿಪೂರಿ
ಮಲೇಬೆನ್ನೂರು: ಪಟ್ಟಣದಲ್ಲಿ ಬೀದಿಬದಿಯ ಅಂಗಡಿಯಲ್ಲಿನ ಪಾನಿಪೂರಿ ಸೇವಿಸಿ 19 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಂಜಾನ್ ಉಪವಾಸದ ನಂತರ ಇಲ್ಲಿನ ಜಾಮಿಯಾ ಮಸೀದಿ ಬಳಿ ಕಳೆದ ಬುಧವಾರ ಸಂಜೆ ಪ್ರಾರ್ಥನೆ ಸಲ್ಲಿಸಿ ಹೊರಬಂದು ಪಾನಿಪೂರಿ ಸೇವಿಸಿದ್ದ ಮಕ್ಕಳು, ಗುರುವಾರ ಬೆಳಿಗ್ಗೆ ಜ್ವರ, ಹೊಟ್ಟೆನೋವು, ವಾಂತಿಯಿಂದ ಬಳಲಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ದಾವಣಗೆರೆಯಲ್ಲಿನ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಸದ್ಯ 7 ವರ್ಷದ ಬಾಲಕನೊಬ್ಬನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬಾಪೂಜಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 11 ಮಕ್ಕಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಮಕ್ಕಳು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮರಳಿದ್ದಾರೆ.
ಹಲವು ಅಧಿಕಾರಿಗಳು ಪಟ್ಟಣಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಘಟನೆಗೆ ಕುಡಿಯುವ ನೀರಿನ ಸಮಸ್ಯೆ ಕಾರಣವಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ ತಿಳಿಸಿದ್ದಾರೆ.
‘ಕಲುಷಿತ ಅಥವಾ ವಿಷಪೂರಿತ ಆಹಾರ ಸೇವನೆ ಘಟನೆಗೆ ಕಾರಣವಾಗಿರಬಹುದು. ವರದಿ ಬಂದ ನಂತರ ಕಾರಣ ತಿಳಿಯಲಿದೆ’ ಎಂದು ಕರ್ತವ್ಯ ವೈದಾಧಿಕಾರಿ ಲಕ್ಷ್ಮೀದೇವಿ ತಿಳಿಸಿದರು.
ಘಟನೆ ನಂತರ ಪಾನಿಪೂರಿ ವ್ಯಾಪಾರಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಇದುವರೆಗೂ ಯಾರೂ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.