ADVERTISEMENT

ದಾವಣಗೆರೆ | 196 ಮಂದಿಗೆ ಸೋಂಕು, 8 ಸಾವು

ಮೂರು ಸಾವಿರ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 16:00 IST
Last Updated 6 ಆಗಸ್ಟ್ 2020, 16:00 IST
ಮಲೇಬೆನ್ನೂರು ಸಮೀಪದ ಕುಂಬಳೂರಿಗೆ ಗುರುವಾರ ಉಪ ತಹಶೀಲ್ದಾರ್ ಆರ್ .ರವಿ ಹಾಗೂ ಇನ್‌ಸಿಡೆಂಟ್ ಕಮಾಂಡರ್ ಪೂನಂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಲೇಬೆನ್ನೂರು ಸಮೀಪದ ಕುಂಬಳೂರಿಗೆ ಗುರುವಾರ ಉಪ ತಹಶೀಲ್ದಾರ್ ಆರ್ .ರವಿ ಹಾಗೂ ಇನ್‌ಸಿಡೆಂಟ್ ಕಮಾಂಡರ್ ಪೂನಂ ಭೇಟಿ ನೀಡಿ ಪರಿಶೀಲನೆ ನಡೆಸಿದರು.   

ದಾವಣಗೆರೆ: ಜಿಲ್ಲೆಯಲ್ಲಿ 196 ಮಂದಿಗೆ ಸೋಂಕು ಇರುವುದು ಗುರುವಾರ ದೃಢಪಟ್ಟಿದೆ. 8 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ ಮೂರು ಸಾವಿರ ದಾಟಿದೆ.

ವಿದ್ಯಾನಗರದ 65 ವರ್ಷ ಮತ್ತು ವೆಂಕಟೇಶ್ವರ ಕಾಲೊನಿಯ 69 ವರ್ಷದ ವೃದ್ಧರಿಬ್ಬರು, ನೀಲಮ್ಮನ ತೋಟದ 58 ವರ್ಷದ ಮಹಿಳೆ ಉಸಿರಾಟದ ಸಮಸ್ಯೆ ಮತ್ತು ಅಧಿಕ ರಕ್ತದ ಒತ್ತಡದಿಂದ ಆ.5ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅಂದೇ ಮೃತಪಟ್ಟಿದ್ದಾರೆ.

ಉಸಿರಾಟದ ಸಮಸ್ಯೆ, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪಿ.ಜೆ. ಬಡಾವಣೆಯ 77 ವರ್ಷದ ವೃದ್ಧ ಮತ್ತು ಉಸಿರಾಟದ ಸಮಸ್ಯೆ, ಮಧುಮೇಹ, ಅಧಿಕ ರಕ್ತದೊತ್ತಡ ಇದ್ದ ಹರಿಹರ ಗೌಡರಕೆರೆಯ 72 ವರ್ಷದ ವೃದ್ಧ ಆ.3ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ನಿಧನರಾದರು.

ADVERTISEMENT

ಎಚ್‌ಕೆಆರ್‌ ಸರ್ಕಲ್‌ನ 60 ವರ್ಷದ ವೃದ್ಧ ಮತ್ತು ದೇವರಾಜ ಅರಸು ಬಡಾವಣೆಯ 63 ವರ್ಷದ ವೃದ್ಧರು ಉಸಿರಾಟದ ಸಮಸ್ಯೆಯಿಂದ ಆ.1ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಒಬ್ಬರು ಆ.4ರಂದು, ಇನ್ನೊಬ್ಬರು ಆ.5ರಂದು ಮೃತಪಟ್ಟಿದ್ದಾರೆ.

ಉಸಿರಾಟದ ಸಮಸ್ಯೆ, ಮಧುಮೇಹ, ಅಧಿಕ ರಕ್ತದೊತ್ತಡ ಇದ್ದ ಎಲೆಬೇತೂರಿನ 70 ವರ್ಷದ ವೃದ್ಧ ಜುಲೈ 30ರಂದು ಆಸ್ಪತ್ರೆಗೆ ದಾಖಲಾಗಿದ್ದು, ಆ.5ರಂದು ಅಸುನೀಗಿದ್ದಾರೆ.

ಗುರುವಾರ ಸೋಂಕು ತಗುಲಿದವರಲ್ಲಿ 15 ವೃದ್ಧರು, 90 ವರ್ಷದವರೂ ಸೇರಿ 20 ವೃದ್ಧೆಯರು ಇದ್ದಾರೆ. ಮೂರು ಬಾಲಕರು, 11 ಬಾಲಕಿಯರಿಗೆ ಸೋಂಕು ಬಂದಿದೆ.

18ರಿಂದ 59 ವರ್ಷದೊಳಗಿನ 95 ಪುರುಷರು, 51 ಮಹಿಳೆಯರಿಗೆ ಸೋಂಕು ಬಂದಿದೆ. ಅಲ್ಲದೇ 33 ವರ್ಷದ ಒಬ್ಬರು ಲಿಂಗ ನಮೂದಿಸಿಲ್ಲ.

ಸೋಂಕಿತರಲ್ಲಿ ಸಿಂಹಪಾಲು ದಾವಣಗೆರೆಯವರೇ ಆಗಿದ್ದಾರೆ. 146 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಚನ್ನಗಿರಿ ತಾಲ್ಲೂಕಿನ 15 ಮಂದಿಗೆ ಕೊರೊನಾ ಬಂದಿದ್ದರೆ, ಹರಿಹರ, ಜಗಳೂರು, ಹೊನ್ನಾಳಿ (ನ್ಯಾಮತಿ ಒಳಗೊಂಡು) ತಾಲ್ಲೂಕಿನ ತಲಾ 10 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ.

97 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಅದರಲ್ಲಿ 68, 60, 65, 68 ವರ್ಷದ ನಾಲ್ವರು ವೃದ್ಧೆಯರು, 70, 60, 68, 60, 63, 68 ವರ್ಷದ ವೃದ್ಧರು ಒಳಗೊಂಡಿದ್ದಾರೆ. 2, 4, 9, 10, 12 ವರ್ಷದ ಬಾಲಕಿಯರು, 4, 5, 7, 12, 13, 16 ವರ್ಷದ ಬಾಲಕರೂ ಇದ್ದಾರೆ.

ಐಸಿಯುನಲ್ಲಿ 35 ಮಂದಿ: ಜಿಲ್ಲೆಯಲ್ಲಿ ಈವರೆಗೆ 3,036 ಮಂದಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. ಗುರುವಾರ ಬಿಡುಗಡೆಗೊಂಡ 97 ಮಂದಿ ಸೇರಿ 1842 ಮಂದಿ ಗುಣಮುಖರಾಗಿದ್ದಾರೆ. 76 ಮಂದಿ ಮೃತಪಟ್ಟಿದ್ದಾರೆ. 1,118 ಸಕ್ರಿಯ ಪ್ರಕರಣಗಳಿವೆ. ಬುಧವಾರದ ವರೆಗೆ 10 ಮಂದಿ ಮಾತ್ರ ಐಸಿಯುನಲ್ಲಿದ್ದರೆ ಗುರುವಾರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಒಮ್ಮೆಲೇ ಏರಿದೆ. 35 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.