ADVERTISEMENT

22 ಕೆರೆ ಹೋರಾಟಗಾರ ಡಾ. ಮಂಜುನಾಥ ಗೌಡ ನಿಧನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 17:18 IST
Last Updated 8 ಸೆಪ್ಟೆಂಬರ್ 2020, 17:18 IST
ಡಾ. ಮಂಜುನಾಥ ಗೌಡ
ಡಾ. ಮಂಜುನಾಥ ಗೌಡ   

ದಾವಣಗೆರೆ: 22 ಕೆರೆ ಹೋರಾಟ ಸಮಿತಿಯ ಅಧ್ಯಕ್ಷ, ವಿದ್ಯಾನಗರ ನಿವಾಸಿ ಡಾ. ಮಂಜುನಾಥ ಗೌಡ (52) ಅಸೌಖ್ಯದಿಂದ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಿಧನರಾದರು.

ಭಾನುವಾರ ಅವರಿಗೆ ಅಸೌಖ್ಯ ಕಾಣಿಸಿಕೊಂಡಿದ್ದರಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ರಾತ್ರಿ 9.40ಕ್ಕೆ ಘೋಷಣೆ ಮಾಡಿದ್ದಾರೆ.

ಬರಗಾಲದಿಂದ ತತ್ತರಿಸಿದ ಊರಿನಲ್ಲಿ ಕೆರೆಗಳನ್ನು ನಿರ್ಮಿಸಿ ನೀರು ತುಂಬಿಸಬೇಕು ಎಂದು ಹೋರಾಟ ಮಾಡಿದ್ದಲ್ಲದೇ ಸಿರಿಗೆರೆ ಶ್ರೀಗಳ ನೇತೃತ್ವದಲ್ಲಿ ಕೆರೆ ತುಂಬಿಸುವಲ್ಲಿ ಯಶಸ್ವಿಯೂ ಆಗಿದ್ದರು.

ADVERTISEMENT

ಲ್ಯಾಪರೊಸ್ಕೋಪಿ ತಜ್ಞರಾಗಿ ಜನಪರ ವೈದ್ಯರಾಗಿದ್ದರು. ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದ ಅವರು ಈ ಬಾರಿ ವಿಧಾನ ಪರಿಷತ್‌ ಟಿಕೆಟ್‌ ಆಕಾಂಕ್ಷಿ ಕೂಡ ಆಗಿದ್ದರು. ರೈತಪರ, ಜನಪರ ಹೋರಾಟಗಳನ್ನು ಸಂಘಟಿಸಿದ್ದರು.

ಅವರಿಗೆ ತಾಯಿ, ಏಳು ಮಂದಿ ಸಹೋದರಿಯರು, ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಸ್ವಗ್ರಾಮವಾದ ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿಯಲ್ಲಿ ಬುಧವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.