ADVERTISEMENT

14 ದಿನಗಳ ಅವಲೋಕನ ಮುಗಿಸಿದ 250 ಮಂದಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 16:39 IST
Last Updated 30 ಮಾರ್ಚ್ 2020, 16:39 IST
ದಾವಣಗೆರೆಯ ಜಿಲ್ಲಾಡಳಿತಕ್ಕೆ ಶಾಮನೂರು ಫಾರ್ಮಾದಿಂದ ಹ್ಯಾಂಡ್‌ ಸ್ಯಾನಿಟೈಸರ್‌ ಕ್ಯಾನ್‌ಗಳನ್ನು ಹಸ್ತಾಂತರಿಸಲಾಯಿತು
ದಾವಣಗೆರೆಯ ಜಿಲ್ಲಾಡಳಿತಕ್ಕೆ ಶಾಮನೂರು ಫಾರ್ಮಾದಿಂದ ಹ್ಯಾಂಡ್‌ ಸ್ಯಾನಿಟೈಸರ್‌ ಕ್ಯಾನ್‌ಗಳನ್ನು ಹಸ್ತಾಂತರಿಸಲಾಯಿತು   

ದಾವಣಗೆರೆ: ವಿದೇಶಕ್ಕೆ ಹೋಗಿ ಬಂದ 348 ಮಂದಿಯಲ್ಲಿ 250 ಮಂದಿ 14 ದಿನಗಳ ಅವಲೋಕನ ಮುಗಿಸಿದ್ದಾರೆ. ಒಬ್ಬರು 28 ದಿನಗಳ ಅವಲೋಕನ ಪೂರ್ಣಗೊಳಿಸಿದ್ದಾರೆ. ಈಗಾಗಲೇ ಪತ್ತೆಯಾಗಿರುವ ಮೂರು ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಸೋಂಕುಗಳಿಲ್ಲ.

103 ಜನರನ್ನು ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಲಾಗಿದೆ. 28 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಇದುವರೆಗೆ 23 ಜನರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಈವರೆಗೆ 41 ಮಾದರಿಗಳು ನೆಗೆಟಿವ್‌ ಆಗಿವೆ. ಸೋಮವಾರ ಮೂರು ಮಾದರಿಗಳನ್ನು ಕಳುಹಿಸಲಾಗಿದೆ. ಅದರ ಫಲಿತಾಂಶ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ADVERTISEMENT

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ: ಕೋವಿಡ್-19 ನಿಯಂತ್ರಣಕ್ಕಾಗಿ ನಗರದ ಕಚವಿ ಮಂಜುನಾಥ ಅವರು ತಮ್ಮ ತಾಯಿ ವಿಶಾಲಾಕ್ಷಮ್ಮ ಅವರ ಅಭಿಲಾಷೆಯಂತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹ 1 ಲಕ್ಷ ದೇಣಿಗೆ ನೀಡಿದ್ದು, ಈ ಚೆಕ್‌ ಅನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಸೋಮವಾರ ಹಸ್ತಾಂತರಿಸಿದರು. ಕಚವಿ ಮಂಜುನಾಥ್ ಅವರ ಪತ್ನಿ ನಂದಾದೇವಿ, ಮಕ್ಕಳಾದ ಅದಿತಿ ಮತ್ತು ಅಸ್ಮಿತ ಇದ್ದರು.

ಆಹಾರ ವಿತರಣೆ: ವಿನೋಬನಗರ ಅಂಗನವಾಡಿ ಕೇಂದ್ರದಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ಎ.ನಾಗರಾಜ್‌ ಆಹಾರ ಪದಾರ್ಥಗಳನ್ನು ವಿತರಿಸಿದರು. ಅಲ್ಲದೇ ವಾಹನದಲ್ಲಿ ಧ್ವನಿವರ್ಧಕದ ಮೂಲಕ ವಾರ್ಡ್‌ನಲ್ಲಿ ಕೊರೊನಾ ಬಗ್ಗೆ ಮಾಹಿತಿ ನೀಡಲಾಯಿತು. ಎಲ್ಲ ಬೀದಿಗಳಿಗೆ ರಾಸಾಯನಿಕ ಸಿಂಪಡಣೆ ಮಾಡಲಾಯಿತು.

‘ನಾವು ಭಾರತೀಯರು’ ತಂಡದಿಂದ ಬೀದಿ ಬದಿ ಇರುವ 150 ಜನರಿಗೆ ಅಹಾರ ಮತ್ತು ನೀರನ್ನು ವಿತರಿಸಲಾಯಿತು. ತಂಡದಲ್ಲಿ ಅಸ್ಗರ್, ಮುಹಿಸ್, ಅನ್ವರ್, ಜಫ್ರವುಲ್ಲಾ, ಸಲಿಂ, ಉಸ್ಮಾನ್,
ಜಬೀನಾ ಖಾನಂ ಇದ್ದರು.

ಜಾಮಿಯತ್ ಎ ಉಲ್ಮಾ ಎ ಹಿಂದ್ ಜಿಲ್ಲಾ ಘಟಕದಿಂದ ನಿರ್ಗತಿಕರಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷ ಮೌಲಾನಾ ಮೊಹಮ್ಮದ್ ಸಮಿಉಲ್ಲಾ ನೇತೃತ್ವ ವಹಿಸಿದ್ದರು.

ಶಾಮನೂರು ಫಾರ್ಮಾದಿಂದ ಸ್ಯಾನಿಟೈಸರ್

ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಶಾಮನೂರು ಫಾರ್ಮಾ ವತಿಯಿಂದ ಸೋಮವಾರ ಜಿಲ್ಲಾಡಳಿತ ಕಚೇರಿಯಲ್ಲಿ 200 ಲೀಟರ್ ಹ್ಯಾಂಡ್ ಸ್ಯಾನಿಟೈಸರ್‌ ಅನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಹಸ್ತಾಂತರಿಸಲಾಯಿತು.

ಎಸ್.ಎಸ್. ಬಕ್ಕೇಶ್, ಆದಿತ್ಯ ಬಕ್ಕೇಶ್, ಆಶಿಶ್ ಬಕ್ಕೇಶ್, ಅಬಕಾರಿ ಉಪ ಆಯುಕ್ತ ನಾಗರಾಜಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.