ADVERTISEMENT

40 ಮಂದಿಗೆ ಕೊರೊನಾ: ವೃದ್ಧ ಸಾವು

ಇದೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಅತಿಹೆಚ್ಚು

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 16:44 IST
Last Updated 9 ಜುಲೈ 2020, 16:44 IST

ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 40 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಕೊರೊನಾ ಆರಂಭಗೊಂಡಲ್ಲಿಂದ ಇಲ್ಲಿಯವರೆಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳು ಬಂದಿರಲಿಲ್ಲ. ಇದು ಜನರಲ್ಲಿ ಆತಂಕವನ್ನುಂಟು ಮಾಡಿದೆ. ಒಟ್ಟು ಪ್ರಕರಣಗಳ ಸಂಖ್ಯೆ ಚತುರ್‌ಶತಕ ದಾಟಿದೆ.

ಮೇ 3 ಮತ್ತು ಮೇ 19ರಂದು ತಲಾ 22 ಪ್ರಕರಣಗಳು ಘೋಷಣೆಯಾಗಿರುವುದೇ ಇಲ್ಲಿವರೆಗೆ ಜಿಲ್ಲೆಯಲ್ಲಿ ಅತಿ ಹೆಚ್ಚು ಆಗಿತ್ತು.

ಎಂಸಿಸಿ ಎ ಬ್ಲಾಕ್‌ ಚರ್ಚ್‌ ರಸ್ತೆಯ 73 ವರ್ಷದ ವೃದ್ಧ ಮೃತಪಟ್ಟವರು. ಅವರಿಗೆ ತೀವ್ರ ಉಸಿರಾಟದ ತೊಂದರೆ ಇದ್ದ ಕಾರಣ ಜುಲೈ 7ಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ಮೃತಪಟ್ಟಿದ್ದರು.

ADVERTISEMENT

ಸರಸ್ವತಿ ನಗರದ 52 ವರ್ಷದ ಸೋಂಕು ಕಂಡು ಬಂದಿದ್ದು, ಪುರುಷನಿಗೆ ಜ್ವರ, ಕಫ ಎಂದು ಗುರುತಿಸಲಾಗಿದೆ. ಮಾದೇವಪುರದ 35 ವರ್ಷದ ಮಹಿಳೆಗೆ ಸೋಂಕು ಬಂದಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಹದಡಿ ರಸ್ತೆ ಶ್ರೀನಿವಾಸನಗರದ 65 ವೃದ್ಧನಿಗೆ ಶೀತಜ್ವರ ಎಂದು ಗುರುತಿಸಲಾಗಿದೆ. ಬಂಬೂಬಜಾರ್‌ ಬಸಾಪುರದ 11 ವರ್ಷದ ಬಾಲಕಿ, 10 ವರ್ಷದ ಬಾಲಕನಿಗೆ ವೈರಸ್‌ ತಗುಲಿದೆ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಬಾಷಾನಗರದ 75 ವರ್ಷದ ಪುರುಷನಿಗೆ ಸೋಂಕು ಬಂದಿದೆ. ಹರಿಹರ ಎಳೆಹೊಳೆಯ 55 ವರ್ಷದ ಪುರುಷನಿಗೆ ಶೀತಜ್ವರ ಎಂದು ಗುರುತಿಸಲಾಗಿದೆ.

ಮಹಾರಾಷ್ಟ್ರದಿಂದ ಬಂದಿರುವ 57 ವರ್ಷದ ಪುರುಷ, 45 ವರ್ಷದ ಮಹಿಳೆಗೆ ಕೊರೊನಾ ಬಂದಿದೆ. ವಿದ್ಯಾನಗರದ 25 ವರ್ಷದ ಯುವತಿಗೆ ಸೋಂಕು ಬಂದಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ವೆಂಕಬೋವಿ ಕಾಲೊನಿಯ 44 ವರ್ಷದ ಪುರುಷನಿಗೆ ಎಲ್ಲಿಂದ ಸೋಂಕು ಬಂದಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಅಶೋಕನಗರದ 69 ವರ್ಷದ ವೃದ್ಧನಿಗೆ ಶೀತಜ್ವರ ಎಂದು ಗುರುತಿಸಲಾಗಿದೆ. ಕೆ.ಬಿ. ಬಡಾವಣೆಯ 73 ವರ್ಷದ ವೃದ್ಧನಿಗೂ ಕೊರೊನಾ ಬಂದಿದ್ದು, ಸಂಪರ್ಕ ಹುಡುಕಲಾಗುತ್ತಿದೆ. ಪಿ.ಜೆ. ಬಡಾವಣೆಯ 27 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಸಂಪರ್ಕ ಹುಡುಕಲಾಗುತ್ತಿದೆ. ತರಳಬಾಳು ನಗರದ 29 ವರ್ಷದ ಪುರುಷನಿಗೆ ಶೀತಜ್ವರ ಎಂದು ಗುರುತಿಸಲಾಗಿದೆ.

ಗೊಲ್ಲರಹಳ್ಳಿಯ 38 ವರ್ಷದ ಪುರುಷನಿಗೆ ರ‍್ಯಾಂಡಮ್‌ ಆಗಿ ತಪಾಸಣೆಗೆ ಒಳಪಡಿಸಿದಾಗ ಸೋಂಕು ಪತ್ತೆಯಾಗಿದೆ. ವಿನೋಬನಗರದ 10 ವರ್ಷದ ಬಾಲಕಿಗೆ ಶೀತಜ್ವರ ಎಂದು ಗುರುತಿಸಲಾಗಿದೆ. ಚನ್ನಗಿರಿ ತಾಲ್ಲೂಕಿನ ದಿಗ್ಗೆನಹಳ್ಳಿಯ 27 ವರ್ಷದ ಪುರುಷನಿಗೆ ರ‍್ಯಾಂಡಮ್‌ ಆಗಿ ತಪಾಸಣೆ ಮಾಡುವಾಗ ಪತ್ತೆಯಾಗಿದೆ.

ಕೆಟಿಜೆ ನಗರದ 60 ವರ್ಷ ವೃದ್ಧ, 56, 38, 42 ವರ್ಷದ ಮಹಿಳೆಯರಿಗೆ ಕೊರೊನಾ ಬಂದಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಕೆ.ಆರ್‌. ರಸ್ತೆಯ 4 ವರ್ಷದ ಬಾಲಕ, ಶೇಖರಪ್ಪ ನಗರದ 26 ವರ್ಷ ಮಹಿಳೆ,

ಹೊನ್ನಾಳಿಯ ಕೋಟೆರೋಡಿನ 53,53 ವರ್ಷದ ಮಹಿಳೆ, 56 ವರ್ಷದ ಪುರುಷ ಸಂತೆಮೈದಾನದ 56, 60 ವರ್ಷದ ಮಹಿಳೆ, 58, 52 , 58 ವರ್ಷದ ಪುರುಷರು, ಬಾಲರಾಜ್‌ಘಾಟ್‌ನ 62 ವರ್ಷದ ವೃದ್ಧ, 48 ವರ್ಷದ ಮಹಿಳೆ, ಹಳೇಪೇಟೆಯ 60 ವರ್ಷದ ವೃದ್ಧೆ, ಟಿ.ಎಂ. ರಸ್ತೆಯ 40 ವರ್ಷದ ಮಹಿಳೆ, 50 ವರ್ಷದ ಪುರುಷ, ದೊಡ್ಡಗಣ್ಣನಗರದ 56 ವರ್ಷದ ಮಹಿಳೆ, ಹೊನ್ನಾಳಿಯ 68 ವರ್ಷದ ವೃದ್ಧರಿಗೆ ರ‍್ಯಾಂಡಮ್‌ ಆಗಿ ತಪಾಸಣೆ ಮಾಡುವಾಗ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 423 ಮಂದಿಗೆ ಸೋಂಕು ಬಂದಿದೆ. ಗುರುವಾರ ನಾಲ್ವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅವರೂ ಸೇರಿ ಒಟ್ಟು 328 ಮಂದಿ ಗುಣಮುಖರಾಗಿದ್ದಾರೆ. 14 ಮಂದಿ ಮೃತಪಟ್ಟಿದ್ದಾರೆ. 81 ಪ್ರಕರಣಗಳು ಸಕ್ರಿಯವಾಗಿವೆ.

ಭಯ ಪಡುವ ಅಗತ್ಯವಿಲ್ಲ: ಜಿಲ್ಲಾಧಿಕಾರಿ

ಜೂನ್‌ ತಿಂಗಳಲ್ಲಿ 13 ಸಾವಿರ ಗಂಟಲುದ್ರವ ಮಾದರಿ ಸಂಗ್ರಹಿಸಲಾಗಿತ್ತು. ಜುಲೈಯಲ್ಲಿ ಈಗಾಗಲೇ 8 ಸಾವಿರಕ್ಕೂ ಅಧಿಕ ಮಂದಿಯ ಗಂಟಲುದ್ರವ ಸಂಗ್ರಹಿಸಲಾಯಿತು. ಪ್ರಯೋಗಾಲಯಗಳಲ್ಲಿ ಬುಧವಾರ, ಗುರುವಾರ ಹೆಚ್ಚು ಮಾದರಿಗಳ ಪರೀಕ್ಷೆ ನಡೆದಿದ್ದರಿಂದ ಫಲಿತಾಂಶ ಹೆಚ್ಚು ಬಂದಿದೆ. ಯಾರೂ ಭಯ ಪಡುವ ಅಗತ್ಯ ಇಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

‘ಸೋಂಕು ಇರುವವರ ಪ್ರಥಮ, ದ್ವಿತೀಯ ಸಂಪರ್ಕವನ್ನಷ್ಟೇ ಸಂಗ್ರಹಿಸಿಕೊಂಡು ನಾವು ಕುಳಿತಿಲ್ಲ. ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುತ್ತಾ ಇದ್ದೇವೆ. ಜನರು ಮನೆಯಲ್ಲಿಯೇ ಇರಬೇಕು. ಅಗತ್ಯ ಇದ್ದರಷ್ಟೇ ಮಾಸ್ಕ್‌ ಹಾಕಿಕೊಂಡು, ಅಂತರ ಕಾಪಾಡಿಕೊಂಡು ಹೊರಬರಬೇಕು. ಅನಗತ್ಯವಾಗಿ ತಿರುಗಾಟ ಮಾಡಬಾರದು’ ಎಂದು ಮನವಿ ಮಾಡಿದರು.

‘ದಿನಕ್ಕೆ ಚಿಗಟೇರಿ ಆಸ್ಪತ್ರೆಯಲ್ಲಿ 300ಕ್ಕೂ ಅಧಿಕ, ಇಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ 150ಕ್ಕೂ ಅಧಿಕ ಮಾದರಿಗಳ ಪರೀಕ್ಷೆ ನಡೆಯುತ್ತಿದೆ. ಅಲ್ಲದೇ ಬೇರೆ ಲ್ಯಾಬ್‌ಗಳಿಗೂ ಕಳುಹಿಸುತ್ತಿದ್ದೇವೆ. ಹಾಗಾಗಿ ಇನ್ನೂ ಹೆಚ್ಚಿನ ಪಾಸಿಟಿವ್‌ ಪ್ರಕರಣಗಳು ಬರಬಹುದು. ಅದಕ್ಕೆ ಧೈರ್ಯಗುಂದಬೇಕಿಲ್ಲ’ ಎಂದು ತಿಳಿಸಿದರು.

ಶೇ 2 ಪಾಸಿಟಿವ್‌: ಡಿಎಸ್‌ಒ

ದಾವಣಗೆರೆಯಲ್ಲಿ ಸಂಗ್ರಹಿಸಿದ ಗಂಟಲು ದ್ರವ ಮಾದರಿಯಲ್ಲಿ ಪಾಸಿಟಿವ್‌ ಬರುವ ಪ್ರಮಾಣ ಶೇ 2ರಷ್ಟು ಇದೆ. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಬಹಳ ಕಡಿಮೆ. ಕಳೆದ 10 ದಿನಗಳಲ್ಲಿ 10 ಸಾವಿರದ ಹತ್ತಿರ ಮಾದರಿ ಸಂಗ್ರಹಿಸಿದ್ದೆವು. ಈಗ ಬಂದಿರುವ ಪ್ರಮಾಣ ಶೇ 2ಕ್ಕಿಂತಲೂ ಕಡಿಮೆ ಇದೆ ಎಂದು ಜಿಲ್ಲಾ ಸರ್ವಲೆನ್ಸ್‌ ಅಧಿಕಾರಿ ಡಾ. ಜಿ.ಡಿ. ರಾಘವನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.