ADVERTISEMENT

ದಾವಣಗೆರೆ ವಿಶ್ವವಿದ್ಯಾಲಯ: 5 ಹೊಸ ಕೋರ್ಸ್‌ಗಳಿಗೆ ಯುಜಿಸಿ ಒಪ್ಪಿಗೆ

10 ಹೊಸ ಕೋರ್ಸ್‌ಗಳಿಗೆ ಪ್ರಸ್ತಾವ ಸಲ್ಲಿಸಿದ್ದ ದಾವಣಗೆರೆ ವಿಶ್ವವಿದ್ಯಾಲಯ

ವಿನಾಯಕ ಭಟ್ಟ‌
Published 17 ಸೆಪ್ಟೆಂಬರ್ 2020, 7:12 IST
Last Updated 17 ಸೆಪ್ಟೆಂಬರ್ 2020, 7:12 IST
ಪ್ರೊ. ಶರಣಪ್ಪ ವಿ. ಹಲಸೆ
ಪ್ರೊ. ಶರಣಪ್ಪ ವಿ. ಹಲಸೆ   

ದಾವಣಗೆರೆ: ಹೊಸದಾಗಿ ಐದು ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಲು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ಒಪ್ಪಿಗೆ ನೀಡಿದೆ.

ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವಂತಹ 10 ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಲು ದಾವಣಗೆರೆ ವಿಶ್ವವಿದ್ಯಾಲಯವು ಯುಜಿಸಿಗೆ ಪ್ರಸ್ತಾವ ಸಲ್ಲಿಸಿತ್ತು. ಇವುಗಳ ಪೈಕಿ ಐದು ಕೋರ್ಸ್‌ಗಳನ್ನು ಆರಂಭಿಸಲು ಯುಜಿಸಿ ಹಸಿರು ನಿಶಾನೆ ತೋರಿಸಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

ಹೊಸ ಕೋರ್ಸ್‌ಗಳಾವವು?: ಎಂಬಿಎ ವಿಭಾಗದಲ್ಲಿ ಮ್ಯಾನೇಜ್‌ಮೆಂಟ್‌ ಆ್ಯಂಡ್‌ ಎಂಟರ್‌ಪ್ರಿನರ್‌ಷಿಪ್‌/ ಮಾರ್ಕೆಟಿಂಗ್‌ ರಿಟೇಲ್‌ ಮ್ಯಾನೇಜ್‌ಮೆಂಟ್‌ (ಬ್ಯಾಚುಲರ್‌ ವೊಕೇಷನಲ್‌ ಡಿಗ್ರಿ– 3 ವರ್ಷ), ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ಐ.ಟಿ/ಐಟಿಇಎಸ್‌/ಸೈಬರ್‌ ಕ್ರೈಂ (ಮಾಸ್ಟರ್‌ ವೊಕೇಷನಲ್‌ ಡಿಗ್ರಿ– 5 ವರ್ಷ), ಫೈನ್‌ ಆರ್ಟ್ಸ್ ಕಾಲೇಜಿನಲ್ಲಿ ಮೀಡಿಯಾ ಆ್ಯಂಡ್‌ ಎಂಟರ್‌ಟೇನ್‌ಮೆಂಟ್‌/ಡಿಜಿಟಲ್‌ ಮೀಡಿಯಾ (ಡಿಪ್ಲೊಮಾ– 1 ವರ್ಷ), ಬಯೊಕೆಮಿಸ್ಟ್ರಿ ವಿಭಾಗದಲ್ಲಿ ಲೈಫ್‌ ಸೈನ್ಸ್‌/ಕ್ಲಿನಿಕಲ್‌ ಡಯಟೀಸ್‌ ಆ್ಯಂಡ್‌ ಅಪ್ಲೈಡ್‌ ನ್ಯೂಟ್ರಿಷನ್ಸ್‌ (ಪಿ.ಜಿ. ಡಿಪ್ಲೊಮಾ–1 ವರ್ಷ) ಹಾಗೂ ಜರ್ನಲಿಸಂ ವಿಭಾಗದಲ್ಲಿ ಮೀಡಿಯಾ ಆ್ಯಂಡ್‌ ಎಂಟರ್‌ಟೇನ್‌ಮೆಂಟ್‌/ ಡಿಜಿಟಲ್‌ ಮೀಡಿಯಾ (ಪಿ.ಜಿ. ಡಿಪ್ಲೊಮಾ– 1 ವರ್ಷ) ವಿಷಯಗಳಲ್ಲಿ ಕೋರ್ಸ್‌ ಆರಂಭಿಸಲು ಯುಜಿಸಿ ಒಪ್ಪಿಗೆ ನೀಡಿದೆ. ‘ನ್ಯಾಷನಲ್‌ ಸ್ಕಿಲ್‌ ಕ್ವಾಲಿಫಿಕೇಷನ್‌ ಫ್ರೇಮ್‌ವರ್ಕ್‌’ ಯೋಜನೆಯಡಿ ಯುಜಿಸಿ ಇವುಗಳಿಗೆ ಅನುದಾನ ಒದಗಿಸಲಿದೆ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.

ADVERTISEMENT

ಪತ್ರಿಕೋದ್ಯಮ ವಿಭಾಗದಿಂದ ಒಟ್ಟು ಆರು ಕೋರ್ಸ್‌ಗಳೂ ಸೇರಿ ಒಟ್ಟು 10 ಕೋರ್ಸ್‌ಗಳನ್ನು ಆರಂಭಿಸಲು ಪ್ರಸ್ತಾವ ಕಳುಹಿಸಲಾಗಿತ್ತು. ಇವುಗಳ ಪೈಕಿ ಪತ್ರಿಕೋದ್ಯಮ ವಿಭಾಗದ ‘ಬ್ರಾಡ್‌ ಕಾಸ್ಟ್‌ ಆ್ಯಂಡ್‌ ಆನ್‌ಲೈನ್‌ ಜರ್ನಲಿಸಂ’, ‘ಅಡ್ವರ್‌ಟೈಸಿಂಗ್‌ ಆ್ಯಂಡ್‌ ಪಬ್ಲಿಕ್‌ ರಿಲೇಷನ್ಸ್‌’, ‘ಟೆಲಿವಿಷನ್‌ ಪ್ರೊಡಕ್ಷನ್‌ ಸ್ಟಡೀಸ್‌’, ‘ಫೋಟೊಗ್ರಫಿ’, ‘ಡಾಟಾ ಜರ್ನಲಿಸಂ’ ವಿಷಯಗಳಲ್ಲಿ ಪಿಡಿ ಡಿಪ್ಲೊಮಾ ಕೋರ್ಸ್‌ ಆರಂಭಿಸುವ ಪ್ರಸ್ತಾವಕ್ಕೆ ಯುಜಿಸಿ ಇನ್ನೂ ಒಪ್ಪಿಗೆ ನೀಡಿಲ್ಲ.

‘ಕೌಶಲ ಆಧಾರಿತ 10 ಕೋರ್ಸ್‌ ಗಳನ್ನು ಆರಂಭಿಸಲು ಯುಜಿಸಿಗೆ ಪ್ರಸ್ತಾವ ಕಳುಹಿಸಿಕೊಡಲಾಗಿತ್ತು. ಐದು ಕೋರ್ಸ್‌ಗಳನ್ನು ಆರಂಭಿಸಲು ಒಪ್ಪಿಗೆ ನೀಡಿದೆ. ಹೊಸ ಕೋರ್ಸ್‌ಗಳಿಗೆ ಅನುದಾನ ಬಿಡುಗಡೆಯಾಗಲು ಒಂದೆರಡು ತಿಂಗಳುಗಳಾದರೂ ಬೇಕಾಗಲಿದೆ. ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿದೆ. ಈ ವರ್ಷ ಕೋರ್ಸ್‌ ಆರಂಭಿಸಲು ಸಾಧ್ಯವಾಗದಿದ್ದರೆ ಮುಂದಿನ ವರ್ಷದಿಂದ ಕೋರ್ಸ್‌ಗಳನ್ನು ಆರಂಭಿಸುತ್ತೇವೆ’ ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತುರುವನೂರು ಕಾಲೇಜಿನಲ್ಲಿ ಬಿಇಡಿ ಕೋರ್ಸ್‌

‘ಚಿತ್ರದುರ್ಗ ತಾಲ್ಲೂಕಿನ ತುರುವನೂರಿನ ಸರ್ಕಾರಿ ಪದವಿ ಕಾಲೇಜನ್ನು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿದ್ದಾರೆ. ಈ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಿಂದಲೇ ನಾಲ್ಕು ವರ್ಷಗಳ ಇಂಟಿಗ್ರೇಟೆಡ್‌ ಬಿಇಡಿ ಕೋರ್ಸ್‌ ಆರಂಭಿಸಲಾಗುವುದು. ವಿದ್ಯಾರ್ಥಿಗಳು ಬಿಎ, ಬಿಎಸ್ಸಿ, ಬಿಕಾಂ ಓದುವುದರ ಜೊತೆಗೆ ಬಿಇಡಿ ಕೋರ್ಸ್‌ ಅನ್ನೂ ಮಾಡಲು ಅವಕಾಶ ಕಲ್ಪಿಸಲಾಗುವುದು’ ಎಂದು ಕುಲಪತಿ ಪ್ರೊ. ಶರಣಪ್ಪ ಹಲಸೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.