ADVERTISEMENT

ಕಾಂಗ್ರೆಸ್‌ನ ಸಾಧನಾ ಸಮಾವೇಶ ವಿಫಲ: ರೇಣುಕಾಚಾರ್ಯ ಟೀಕೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 9:46 IST
Last Updated 12 ಜನವರಿ 2018, 9:46 IST
ಜನವರಿ 30ರಂದು ಪಟ್ಟಣದ ಹಿರೇಕಲ್ಮಠದಲ್ಲಿ ತಾಲ್ಲೂಕು ಬಿಜೆಪಿ ಹಮ್ಮಿಕೊಂಡಿರುವ ನವಶಕ್ತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.
ಜನವರಿ 30ರಂದು ಪಟ್ಟಣದ ಹಿರೇಕಲ್ಮಠದಲ್ಲಿ ತಾಲ್ಲೂಕು ಬಿಜೆಪಿ ಹಮ್ಮಿಕೊಂಡಿರುವ ನವಶಕ್ತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.   

ಹೊನ್ನಾಳಿ: ಈಚೆಗೆ ಇಲ್ಲಿ ಹಮ್ಮಿಕೊಂಡಿದ್ದ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಸಾಧನಾ ಸಮಾವೇಶ ವಿಫಲವಾಗಿದೆ ಎಂದು ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಗುರುವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ನವಶಕ್ತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ಸೌಲಭ್ಯಗಳನ್ನು ಕೊಡುತ್ತೇವೆ, ಕಾರ್ಯಕ್ರಮಕ್ಕೆ ಬನ್ನಿ ಎಂದು ಶಾಸಕ ಡಿ.ಜಿ. ಶಾಂತನಗೌಡರು ಜನತೆಗೆ ಸುಳ್ಳು ಹೇಳಿ ಕರೆದರು. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನಾ ಸಮಾವೇಶಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಜನ ಸೇರಲಿಲ್ಲ’ ಎಂದರು.

ಈಗಲಾದರೂ ಶಾಂತನಗೌಡ ಅವರು ಸುಳ್ಳು ಹೇಳಿ ಸಮಾವೇಶಕ್ಕೆ ಕರೆ ತಂದಿದ್ದ ಫಲಾನುಭವಿಗಳಿಗೆ, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಹಾಗೂ ಸ್ವಸಹಾಯ ಗುಂಪುಗಳಿಗೆ ಧನಸಹಾಯದ ಚೆಕ್‌ಗಳನ್ನು ವಿತರಿಸಲಿ ಎಂದು ವ್ಯಂಗ್ಯವಾಡಿದರು.

ADVERTISEMENT

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಪರಿವರ್ತನಾ ಯಾತ್ರೆ ಯಶಸ್ವಿಯಾಗಿದೆ. ಯಾತ್ರೆಗೆ ಜನಸಾಗರ ಹರಿದುಬರುತ್ತಿದೆ. ಬಿಜೆಪಿ ಬಗ್ಗೆ ಕಾಂಗ್ರೆಸ್ ಇಲ್ಲ ಸಲ್ಲದ ಸುಳ್ಳುಗಳನ್ನು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಜ. 30ರಂದು ನಡೆಯುವ ನವಶಕ್ತಿ ಕಾರ್ಯಕ್ರಮಕ್ಕೆ ತಾಲ್ಲೂಕಿನ ಪ್ರತಿ ಬೂತ್‌ನಿಂದ 9 ಜನ ಅಪೇಕ್ಷಿತ ಕಾರ್ಯಕರ್ತರು ಸೇರುತ್ತಿದ್ದಾರೆ. ಅವರಿಗೆ ಮಾರ್ಗದರ್ಶನ ಮಾಡಲು ರಾಜ್ಯಮಟ್ಟದ ನಾಯಕರು ಬರಲಿದ್ದಾರೆ ಎಂದರು.

ಜ. 14ರಂದು ಪಟ್ಟಣದಲ್ಲಿ ನಡೆಯುವ ಸಿದ್ಧರಾಮ ಜಯಂತಿಗೆ ಯಡಿಯೂರಪ್ಪ ಬರುತ್ತಿದ್ದು, ತಾಲ್ಲೂಕು ಬಿಜೆಪಿ ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದು ಮನವಿ ಮಾಡಿದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಡಿ.ಜಿ. ರಾಜಪ್ಪ, ಕಾರ್ಯದರ್ಶಿ ಕೆ.ಪಿ.ಕುಬೇರಪ್ಪ, ಅರಕೆರೆ ನಾಗರಾಜ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ವೀರಶೇಖರಪ್ಪ, ಸುರೇಂದ್ರನಾಯ್ಕ, ಮುಖಂಡ ಎಂ.ಪಿ.ರಮೇಶ್, ದಿಡಗೂರು ಫಾಲಾಕ್ಷಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.