ADVERTISEMENT

ಭೂಮಿ ಪರಿಹಾರಕ್ಕೆ ಟವರ್‌ ಏರಿದ ರೈತ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 9:45 IST
Last Updated 22 ಜನವರಿ 2018, 9:45 IST
ದಾವಣಗೆರೆ ತಾಲ್ಲೂಕಿನ ಮತ್ತಿ ಗ್ರಾಮದಲ್ಲಿ ಭಾನುವಾರ ವಿದ್ಯುತ್‌ ಉಪಕೇಂದ್ರ ನಿರ್ಮಾಣಕ್ಕೆ ಪಡೆದ ಜಮೀನಿಗೆ ಸೂಕ್ತ ಭೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರೈತ ಮೌಲಾಸಾಬ್‌ ಹೈಟೆನ್ಷನ್‌ ಟವರ್‌ ಏರಿ ಪ್ರತಿಭಟನೆ ನಡೆಸಿದರು.
ದಾವಣಗೆರೆ ತಾಲ್ಲೂಕಿನ ಮತ್ತಿ ಗ್ರಾಮದಲ್ಲಿ ಭಾನುವಾರ ವಿದ್ಯುತ್‌ ಉಪಕೇಂದ್ರ ನಿರ್ಮಾಣಕ್ಕೆ ಪಡೆದ ಜಮೀನಿಗೆ ಸೂಕ್ತ ಭೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರೈತ ಮೌಲಾಸಾಬ್‌ ಹೈಟೆನ್ಷನ್‌ ಟವರ್‌ ಏರಿ ಪ್ರತಿಭಟನೆ ನಡೆಸಿದರು.   

ದಾವಣಗೆರೆ: ವಿದ್ಯುತ್‌ ಉಪಕೇಂದ್ರ ನಿರ್ಮಾಣಕ್ಕಾಗಿ ಹೈಟೆನ್ಷನ್‌ ವಿದ್ಯುತ್ ಮಾರ್ಗದ ವೈರ್‌ಗಳು ಜಮೀನಿನಲ್ಲಿ ಹಾದುಹೋಗಿದ್ದು, ಸೂಕ್ತ ಭೂಮಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಭಾನುವಾರ ಮತ್ತಿಯಲ್ಲಿ ರೈತ ಮೌಲಾಸಾಬ್ ವಿದ್ಯುತ್ ಟವರ್ ಏರಿ ಪ್ರತಿಭಟನೆ ನಡೆಸಿದರು.

ಸುದ್ದಿ ತಿಳಿಯುತ್ತಿದ್ದಂತೆ ಜಮೀನಿಗೆ ಭೇಟಿ ನೀಡಿದ ಅಧಿಕಾರಿಗಳು ಹಾಗೂ ಪೊಲೀಸರು ಮೌಲಾಸಾಬ್‌ ಅವರ ಮನವೊಲಿಸಿ ಕೆಳಗಿಳಿಸಿದರು. ಈ ಸಂದಂರ್ಭ ಕಾಮಗಾರಿಗೆ ಜಮೀನು ನೀಡಿರುವ ರೈತರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಅಸ್ವಸ್ಥರಾದ ರೈತ ಹನುಮಂತಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಶ್ಯಾಗಲೆ ಬಳಿ ವಿದ್ಯುತ್‌ ಉಪಕೇಂದ್ರ ನಿರ್ಮಾಣಕ್ಕೆ ತಾಲ್ಲೂಕಿನ ಮತ್ತಿ, ಹೂವಿನಮಡು ಗ್ರಾಮಗಳ ರೈತರ ಜಮೀನುಗಳ ಮೇಲೆ ಹೈಟೆನ್ಷನ್‌ ವೈರ್ ಹಾಕಲಾಗುತ್ತಿದೆ. ಈ ಸಂಬಂಧ ಭೂಮಿ ಪರಿಹಾರ ನೀಡುವಂತೆ ಬೆಸ್ಕಾಂಗೆ ವಿರುದ್ಧ ಪ್ರತಿಭಟನೆ ನಡೆಸುತ್ತಲೇ ಬಂದಿದ್ದರೂ ಸ್ಪಂದಿಸಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ADVERTISEMENT

‘ಪ್ರತಿ ವರ್ಷ ಜಮೀನಿನಲ್ಲಿ ಬೆಳೆ ಬೆಳೆಯುತ್ತಿದ್ದೇವೆ. ಇದೀಗ 60/11 ಕೆವಿ ಸಾಮರ್ಥ್ಯದ ಮಾರ್ಗ ಅಳವಡಿಕೆಯಿಂದ ಕೃಷಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ’ ಎಂದು ರೈತರು ಅಳಲತೋಡಿಕೊಂಡರು.

ಶ್ಯಾಗಲೆ ಬಳಿ ವಿದ್ಯುತ್‌ ಉಪಕೇಂದ್ರ ನಿರ್ಮಾಣಕ್ಕೆ 2010ರಲ್ಲೇ ಅನುಮೋದನೆ ದೊರೆತಿದ್ದು, ಕಾಮಗಾರಿ ನಡೆಯುತ್ತಿದೆ. ಹಿಂದೆ ಅಧಿಕಾರಿಗಳು ಗುರುತಿಸಿದ ಸ್ಥಳದಲ್ಲೇ ಟವರ್‌ ಹಾಕಲಾಗುತ್ತಿದೆ. ಆದರೆ, ರೈತರು ಭೂಮಿ ಪರಿಹಾರಕ್ಕೆ ಆಗ್ರಹಿಸುತ್ತಿದ್ದಾರೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.