ADVERTISEMENT

ವಿಶ್ವ ಕನ್ನಡ ಸಮ್ಮೇಳನಕ್ಕೆ ಸರ್ಕಾರ ನಿರಾಸಕ್ತಿ: ಮನು ಬಳಿಗಾರ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 8:52 IST
Last Updated 26 ಜನವರಿ 2018, 8:52 IST

ದಾವಣಗೆರೆ: ದಾವಣಗೆರೆಯಲ್ಲಿ ನಡೆಯಬೇಕಿದ್ದ ವಿಶ್ವ ಕನ್ನಡ ಸಮ್ಮೇಳನಕ್ಕೆ ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ್‌ ಬೇಸರ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಶ್ವ ಕನ್ನಡ ಸಮ್ಮೇಳನವನ್ನು ಸರ್ಕಾರ ನಡೆಸಬೇಕಿದೆ. ಈಗಾಗಲೇ ಅನುದಾನವು ಬಿಡುಗಡೆಯಾಗಿದೆ. ಫೆಬ್ರುವರಿಯಲ್ಲಿ ನಡೆಯಬೇಕಿದ್ದ ಈ ಸಮ್ಮೇಳನಕ್ಕೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಒಂದೆರಡು ಸಭೆಗಳು ನಡೆದಿದ್ದವು. ಆ ಸಭೆಗಳಲ್ಲಿ ನಾನೂ ಭಾಗವಹಿಸಿ ಸಲಹೆ ನೀಡಿದ್ದೆ. ಆದರೆ ಈ ಕುರಿತು ಸರ್ಕಾರವಿನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲದಿರುವುದು ಕನ್ನಡ ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿಹಿಡಿಯುತ್ತಿದೆ’ ಎಂದರು.

ಚುನಾವಣೆ ಸಮೀಪಿಸುತ್ತಿದ್ದು, ಎಲ್ಲರೂ ರಾಜಕೀಯ ಜಂಜಾಟದಲ್ಲಿ ತೊಡಗಿದ್ದು, ಯಾರೊಬ್ಬರು ತಲೆಕಡಿಸಿಕೊಳ್ಳುತ್ತಿಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಚುನಾವಣೆಯ ಬಳಿಕ ಸಮ್ಮೇಳನ ನಡೆಯಬಹುದು ಎಂದು ಅಭಿಪ್ರಾಯಪಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.