ADVERTISEMENT

ಕೊನೆಭಾಗಕ್ಕೆ ನಾಲೆ ನೀರು ಪೂರೈಕೆಗೆ ರೈತರ ಧರಣಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 10:13 IST
Last Updated 28 ಜನವರಿ 2018, 10:13 IST

ಮಲೇಬೆನ್ನೂರು: ಭದ್ರಾ ಅಚ್ಚುಕಟ್ಟು ವ್ಯಾಪ್ತಿ ಕೊನೆಭಾಗ ರೈತರು ನಾಲೆ ನೀರು ಪೂರೈಕೆಗೆ ಆಗ್ರಹಿಸಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆಶ್ರಯದಲ್ಲಿ ಧರಣಿ ನಡೆಸಿದರು.

ನಾಲೆಗೆ ನೀರು ಬಿಟ್ಟು 20 ದಿನಗಳಾದರೂ ಕೊನೆಭಾಗ ತಲುಪಿಲ್ಲ. ಈಗಾಗಲೆ ಮೊದಲ ಆಂತರಿಕ ಸರದಿ ಮುಕ್ತಾಯವಾಗಿದೆ. ಬಸವಾಪಟ್ಟಣ ಉಪವಿಭಾಗದಲ್ಲಿ ಆಂತರಿಕ ಸರದಿ ಪಾಲಿಸುತ್ತಿಲ್ಲ. ಮೂರು ಬೆಳೆ ಕಳೆದುಕೊಂಡಿದ್ದೇವೆ, ಕೊನೆಬಾಗಕ್ಕೆ ನೀರು ಹರಿದು ಬರುತ್ತಿಲ್ಲ, ತೋಟಗಳು ನೀರು ಸಿಗದೆ ಒಣಗುತ್ತಿವೆ ಎಂದು ಎಂದು ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ಜಿ. ಪ್ರಭುಗೌಡ, ಫಾಲಾಕ್ಷಪ್ಪ, ಕೊಟ್ರೇಶಪ್ಪ ಭಾನುವಳ್ಳಿ ಆರೋಪಿಸಿದರು.

ಭತ್ತದ ನಾಟಿ ಹಚ್ಚಲು ರೈತರು ಸಸಿಮಡಿ ತಯಾರಿಸಿಕೊಂಡಿದ್ದಾರೆ. ನಿಗದಿತ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ. ಕೊಮಾರನಹಳ್ಳಿ ಪಿಯರ್ ಗೇಜ್ 3 ಅಡಿ ತೋರಿಸುತ್ತದೆ ಎಂದರು.

ADVERTISEMENT

ಒಂದು ಹಂತದಲ್ಲಿ ಇಇ ಮಲ್ಲಿಕಾರ್ಜುನ್, ಎಇಇ ಗವಿಸಿದ್ದೇಶ್ವರ, ಮಲ್ಲಿಕಾರ್ಜುನ್ ರೈತರಿಂದ ಆಕ್ರೋಶ ಎದುರಿಸಬೇಕಾಯಿತು. ಸಹನೆ ಕಳೆದುಕೊಂಡ ರೈತ ಸಮೂಹ ಬೆಸ್ಕಾಂ ಕಚೇರಿಗೆ ತೆರಳಿ ಶಾಖಾಧಿಕಾರಿ ವಿರುದ್ಧ ವಾಗ್ದಾಳಿ ನಡೆಸಿದರು. ಜಿಲ್ಲಾಡಳಿತ ಚನ್ನಗಿರಿ ವ್ಯಾಪ್ತಿಯಲ್ಲಿ ಪಂಪ್ ತೆರವು ಮಾಡುವಂತೆ ಆಗ್ರಹಿಸಿದರು.

ಡಿಸಿ ಎಸ್ಪಿ ಭೇಟಿ: ಭದ್ರಾನಾಲೆ ಮೇಲೆ ತೆರಳಿದ ಡಿಸಿ ಎಸ್.ರಮೇಶ್, ಎಸ್ಪಿ ಡಾ. ಭಿೀಮಾಶಂಕರ ಗುಳೇದ, ಡಿವೈಎಸ್ಪಿ ಮಂಜುನಾಥ್ ಗಂಗಲ್ ನೇತೃತ್ವದಲ್ಲಿ ನಾಲೆಗೆ ಅಳವಡಿಸಿದ್ದ 15ಕ್ಕೂ ಹೆಚ್ಚು ಅಕ್ರಮ ಪಂಪ್ ಸೆಟ್ ತೆರವುಗೊಳಿಸಿದರು. ಹಿರೆಹಾಲಿವಾಣ ವ್ಯಾಪ್ತಿಯಲ್ಲಿ ರೈತರು ಪೊಲೀಸರೊಡನೆ ವಾಗ್ವಾದ ನಡೆಸಿದಾಗ ಇಬ್ಬರು ರೈತರನ್ನು ಪೊಲೀಸರು ವಶಕ್ಕೆ ಪಡೆದರು.

ತಹಶೀಲ್ದಾರ್ ರೆಹಾನ್ ಪಾಷಾ, ಉಪತಹಶೀಲ್ದಾರ್ ಸೈಯದ್ ಕಲಿಂ ಉಲ್ಲಾ, ಆರ್ಐ ರವಿನಾಯ್ಕ್, ಸಿಪಿಐ ಲಕ್ಷಣ ನಾಯ್ಕ್ ,ಪಿಎಸ್ಐ ಸುನಿಲ್ ಕುಮಾರ್, ಕಂದಾಯ, ಬೆಸ್ಕಾಂ, ನೀರಾವರಿ ಇಲಾಖೆ ಸಿಬ್ಬಂದಿ ಇದ್ದರು. ‘ಪ್ರಜಾವಾಣಿ’ ಜತೆ ಮಾತನಾಡಿದ ಜಿಲ್ಲಾಧಿಕಾರಿ ರಮೇಶ್, ‘ಅಕ್ರಮ ಪಂಪ್ ಸೆಟ್ ತೆರವುಗೊಳಿಸುವ ಕಾರ್ಯಾಚರಣೆ ಮುಂದುವರೆಯಲಿದೆ ಎಂದರು.

ಅನಿರ್ದಿಷ್ಟ ಧರಣಿ: ರೈತ ಸಂಘದ ರಾಜ್ಯ ಉಪಾಧ್ಯಕ್ಷ ವಾಸನ ಓಂಕಾರಪ್ಪ ಮಾತನಾಡಿ, ‘ಕೊನೆಭಾಗಕ್ಕೆ ನೀರು ತಲುಪುವ ತನಕ ಅನಿರ್ದಿಷ್ಟ ಧರಣಿ ನಡೆಸುವುದಾಗಿ ತಿಳಿಸಿದರು. ಮಹೇಶಪ್ಪ, ಚಂದ್ರಪ್ಪ, ನಾಗರಾಜ್, ಹೊರಟ್ಟಿ ಬೀಮಪ್ಪ, ಸೇರಿದಂತೆ 200ಕ್ಕೂ ಹೆಚ್ಚು ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.