ADVERTISEMENT

ದಾವಣಗೆರೆ: ಶಾಲೆಗೆ ತೆರಳಿದ್ದ ವಿದ್ಯಾರ್ಥಿ ನಾಪತ್ತೆ

ಶುಲ್ಕ ತರಲು ಮನೆಗೆ ಕಳುಹಿಸಿದ್ದ ಆಡಳಿತ ಮಂಡಳಿ ವಿರುದ್ಧ ಪೋಷಕರ ದೂರು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 12:15 IST
Last Updated 13 ಡಿಸೆಂಬರ್ 2019, 12:15 IST
ಗುರುರಾಜ್‌ ಕೆ.
ಗುರುರಾಜ್‌ ಕೆ.   

ದಾವಣಗೆರೆ: ನಗರದ ಅಭಿನವ ಭಾರತಿ ಶಾಲೆಗೆ ಬುಧವಾರ (ಡಿ. 11) ತೆರಳಿದ್ದ 8ನೇ ತರಗತಿ ವಿದ್ಯಾರ್ಥಿ ಗುರುರಾಜ್‌ ಕೆ. ನಾಪತ್ತೆಯಾಗಿದ್ದು, ಆಡಳಿತ ಮಂಡಳಿಯ ವಿರುದ್ಧ ಪೋಷಕರು ವಿದ್ಯಾನಗರ ಪೊಲೀಸ್‌ ಠಾಣೆಗೆ ಗುರುವಾರ ದೂರು ನೀಡಿದ್ದಾರೆ.

ಈ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಗುರುರಾಜ್‌ನ ಅಜ್ಜಿ ಬಸಮ್ಮ, ‘ಬುಧವಾರ ಬೆಳಿಗ್ಗೆ 8.30ಕ್ಕೆ ಐವರು ವಿದ್ಯಾರ್ಥಿಗಳೊಂದಿಗೆ ಮೊಮ್ಮಗನೂ ಅಭಿನವ ಭಾರತಿ ಶಾಲೆಗೆ ಹೋಗಿದ್ದ. ಅಂದು ಸಂಜೆ ಆತ ಮನೆಗೆ ವಾಪಸ್‌ ಬಂದಿಲ್ಲ. ಈ ಬಗ್ಗೆ ಶಾಲೆಗೆ ಹೋಗಿ ವಿಚಾರಿಸಿದಾಗ, ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ತರಗತಿಯ ಶಿಕ್ಷಕರು ಶಾಲೆಯ ಕಾರ್ಯದರ್ಶಿ ಭರಮಗೌಡರ ಹಾಗೂ ಮುಖ್ಯ ಶಿಕ್ಷಕಿ ಬಳಿ ಕಳುಹಿಸಿದ್ದರು. ಬಳಿಕ ಬಾಕಿ ಶುಲ್ಕದ ಹಣವನ್ನು ತರವಂತೆ ಆತನನ್ನು ಮನೆಗೆ ಕಳುಹಿಸಿದ್ದರು ಎಂಬುದು ತಿಳಿಯಿತು. ಶಾಲೆಯಲ್ಲೇ ಆತನ ಬ್ಯಾಗ್‌ ಇತ್ತು. ಸಂಬಂಧಿಕರ ಮನೆಗೆ ತೆರಳಿ ಹುಡುಕಾಡಿದರೂ ಆತನ ಬಗ್ಗೆ ಸುಳಿವು ಸಿಕ್ಕಿಲ್ಲ. ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಲೇ ನನ್ನ ಮೊಮ್ಮಗ ಕಾಣೆಯಾಗಿದ್ದಾನೆ’ ಎಂದು ಅಳಲು ತೋಡಿಕೊಂಡರು.

ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್‌, ‘ಗುರುರಾಜ್‌ನ ಪೋಷಕರು ಕೂಲಿ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಅನುದಾನಿತ ಶಾಲೆಯಾಗಿದ್ದರೂ ಅನಧಿಕೃತವಾಗಿ ₹ 2,000 ಶುಲ್ಕವನ್ನು ಪಡೆಯಲಾಗುತ್ತಿದೆ. ಈಗಾಗಲೇ ₹ 500 ಪಾವತಿಸಿದ್ದರಂತೆ. ಶಾಲೆಯ ಹಾಜರಾತಿ ಪುಸ್ತಕದಲ್ಲಿ ಆತ ಬೆಳಿಗ್ಗೆ ಬಂದಿರುವ ಬಗ್ಗೆ ಉಲ್ಲೇಖವಿದೆ. ಈ ಬಗ್ಗೆ ಬಿಇಒ ಹಾಗೂ ಡಿಡಿಪಿಐಗೆ ದೂರು ನೀಡಲಾಗಿದ್ದು, ಬಾಕಿ ಹಣ ತರುವಂತೆ ವಿದ್ಯಾರ್ಥಿಯನ್ನು ಮನೆಗೆ ಕಳುಹಿಸಿ ಬೇಜವಾಬ್ದಾರಿತನ ಪ್ರದರ್ಶಿಸಿದ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ವರದಿ ಆಧರಿಸಿ ಕ್ರಮ: ಡಿಡಿಪಿಐ

‘ಶಾಲೆಗೆ ಬಂದಿದ್ದ ವಿದ್ಯಾರ್ಥಿ ನಾಪತ್ತೆಯಾಗಿರುವ ವಿಚಾರ ಗಮನಕ್ಕೆ ಬಂದಿದೆ. ಈ ಬಗ್ಗೆ ವರದಿ ನೀಡುವಂತೆ ಬಿಇಒಗೆ ಸೂಚಿಸಲಾಗಿದೆ. ವರದಿ ಆಧರಿಸಿ ಸಂಬಂಧಪಟ್ಟ ಶಿಕ್ಷಕರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಆಡಳಿತ ಮಂಡಳಿಗೂ ನೋಟಿಸ್‌ ನೀಡಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.