ADVERTISEMENT

ಚನ್ನಗಿರಿ: ₹ 9 ಕೋಟಿ ವೆಚ್ಚದ ಕಚೇರಿಗಳ ಸಂಕೀರ್ಣ

ಜನರ ಸಮಸ್ಯೆ ನಿವಾರಣೆಗೆ ಒಂದೇ ಸೂರಿನಡಿ ವಿವಿಧ ಇಲಾಖೆಗಳು

ಎಚ್.ವಿ.ನಟರಾಜ್
Published 23 ಜೂನ್ 2022, 2:20 IST
Last Updated 23 ಜೂನ್ 2022, 2:20 IST
ಚನ್ನಗಿರಿಯ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ  9 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಹುಮಹಡಿ ಕಚೇರಿಗಳ ಸಂಕೀರ್ಣ ಕಾಮಗಾರಿ
ಚನ್ನಗಿರಿಯ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ  9 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಹುಮಹಡಿ ಕಚೇರಿಗಳ ಸಂಕೀರ್ಣ ಕಾಮಗಾರಿ   

ಚನ್ನಗಿರಿ: ವಿಧಾನಸಭಾ ಕ್ಷೇತ್ರದ ಜನರು ಕಚೇರಿಗಳಿಂದ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಪಟ್ಟಣದಲ್ಲಿ ಬಹು ಮಹಡಿ ಕಚೇರಿಗಳ ಸಂಕೀರ್ಣ ನಿರ್ಮಾಣವಾಗುತ್ತಿದೆ. ಕಟ್ಟಡ ಕಾಮಗಾರಿ ಭರದಿಂದ ಸಾಗಿದೆ.

‌ತಾಲ್ಲೂಕು ಕೇಂದ್ರಕ್ಕೆ ಪ್ರತಿ ದಿನ ವಿವಿಧ ಗ್ರಾಮಗಳಿಂದ ವಿವಿಧ ಕಚೇರಿ ಕೆಲಸಕ್ಕಾಗಿ ನೂರಾರು ಜನರು ಬರುತ್ತಾರೆ. ವಿವಿಧ ಕಚೇರಿಗಳು ಪಟ್ಟಣದ ಎಲ್ಲ ಭಾಗಗಳಲ್ಲಿ ಹಂಚಿಹೋಗಿರುವುದರಿಂದ ಜನರು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಲೆಯಬೇಕಿದೆ.

ಜನರ ಅಲೆದಾಟ ತಪ್ಪಿಸುವ ಸಲುವಾಗಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಒಂದೇ ಕಡೆ ಕಚೇರಿಗಳ ಸಂಕೀರ್ಣ ನಿರ್ಮಿಸುವ ಚಿಂತನೆ ನಡೆಸಿದರು. 6 ಮಹಡಿಗಳ ಕಚೇರಿಗಳ ಸಂಕೀರ್ಣವನ್ನು ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ಶಾಸಕರು ₹ 9 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ.

ADVERTISEMENT

ಇದರ ಫಲವಾಗಿತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಬಹು ಮಹಡಿ ಕಚೇರಿಗಳ ಸಂಕೀರ್ಣ ಕಟ್ಟಡ ಕಾಮಗಾರಿಗೆ ಎರಡು ತಿಂಗಳ ಹಿಂದೆ ಭೂಮಿಪೂಜೆ ನಡೆಸಿದ್ದು, ಸದ್ಯ ಕಾಮಗಾರಿ ಭರದಿಂದ ಸಾಗಿದೆ.

ಸ್ವಂತ ಕಟ್ಟಡ ಇಲ್ಲದ ಕಚೇರಿಗಳು:

ಮೀನುಗಾರಿಕೆ ಇಲಾಖೆ, ಕಾರ್ಮಿಕ, ಅಕ್ಷರ ದಾಸೋಹ, ಸಹಕಾರ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ರೇಷ್ಮೆ, ಉಪ ನೋಂದಣಿ, ತಾಲ್ಲೂಕು ಖಜಾನೆ, ಭೂ ಮಾಪನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅರಣ್ಯ ಇಲಾಖೆ ಸಂಚಾರಿ ದಳ, ಕೆಐಆರ್‌ಡಿಎಲ್, ಸಣ್ಣ ನೀರಾವರಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಕೊಳಚೆ ನಿರ್ಮೂಲನಾ ಮಂಡಳಿಗೆ ಸ್ವಂತ ಕಟ್ಟಡ ಇಲ್ಲದೇ ಅನೇಕ ವರ್ಷಗಳಿಂದ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಹು ಮಹಡಿ ಕಚೇರಿಗಳ ಸಂಕೀರ್ಣ ಕಟ್ಟಡ ಕಾಮಗಾರಿ ಮುಕ್ತಾಯಗೊಂಡ ಮೇಲೆ ಈ ಕಚೇರಿಗಳು ಒಂದೆಡೆ ಕಾರ್ಯನಿರ್ವಹಿಸಲಿವೆ.

ತಾಲ್ಲೂಕಿನಲ್ಲಿಯೇ ಇದೇ ಪ್ರಥಮ ಬಾರಿಗೆ 6 ಮಹಡಿಗಳ ಕಚೇರಿಗಳ ಸಂಕೀರ್ಣ ನಿರ್ಮಾಣವಾಗುತ್ತಿರುವುದು ಪಟ್ಟಣದ ಜನರಲ್ಲಿ ಸಂತಸ ತಂದಿದೆ.

‘₹ 9 ಕೋಟಿ ವೆಚ್ಚದ ಬಹು ಮಹಡಿ ಕಚೇರಿಗಳ ಸಂಕೀರ್ಣ ಕಾಮಗಾರಿಯ ನಿರ್ವಹಣೆಯನ್ನು ಇಲಾಖೆ ಮಾಡುತ್ತಿದ್ದು, ಬೆಂಗಳೂರು ಮೂಲದ ಕಂಪನಿ ಗುತ್ತಿಗೆ ಪಡೆದುಕೊಂಡಿದೆ. 28ಕ್ಕಿಂತ ಹೆಚ್ಚು ಕೊಠಡಿಗಳನ್ನು ನಿರ್ಮಿಸಲಾಗುತ್ತದೆ. ವಿಶಾಲವಾದ ಸಭಾಂಗಣ, ವಾಹನಗಳ ನಿಲುಗಡೆಗೆ ವ್ಯವಸ್ಥೆ, ಲಿಫ್ಟ್‌ ಸೌಕರ್ಯ ಸೇರಿ ಎಲ್ಲ ರೀತಿಯ ಸೌಕರ್ಯಗಳನ್ನು ಈ ಕಚೇರಿಗಳ ಸಂಕೀರ್ಣದಲ್ಲಿ ಕಲ್ಪಿಸಲಾಗುವುದು. ಒಂದು ವರ್ಷದೊಳಗೆ ಕಾಮಗಾರಿಯನ್ನು ಮುಕ್ತಾಯಗೊಳಿಸಿ, ಲೋಕಾರ್ಪಣೆ ಮಾಡಲು ಸಿದ್ಧತೆ ನಡೆಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಎಇಇ ರವಿಕುಮಾರ್ ತಿಳಿಸಿದರು.

‘ತಾಲ್ಲೂಕಿನ ಜನರು ಕಚೇರಿಗಳ ಕಚೇರಿಗಳಿಂದ ಅಲೆಯುವುದನ್ನು ಕಂಡು, ಅವರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಲೋಕೋಪಯೋಗಿ ಸಚಿವರನ್ನು ಭೇಟಿ ಮಾಡಿ ₹ 9 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಲಾಗಿದೆ’ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.

ಕಚೇರಿ ಸಂಕೀರ್ಣ ಕಾಮಗಾರಿಗೆ ಈಗಾಗಲೇ ₹ 5 ಕೋಟಿ ಬಿಡುಗಡೆಯಾಗಿದೆ. ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ.

–ಮಾಡಾಳ್ ವಿರೂಪಾಕ್ಷಪ್ಪ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.