ADVERTISEMENT

ದಾವಣಗೆರೆ: ಎವಿಕೆ ರಸ್ತೆಯಲ್ಲಿ ಕಲೆಗಳ ಕಲರವ

ಚಿತ್ರಸಂತೆಯಲ್ಲಿ ರಾಜ್ಯ, ಹೊರರಾಜ್ಯಗಳಿಂದ ಬಂದ ಕಲಾವಿದರಿಂದ ಕಾಲಕೃತಿಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 4:54 IST
Last Updated 18 ಏಪ್ರಿಲ್ 2022, 4:54 IST
ದಾವಣಗೆರೆಯ ಎವಿಕೆ ರಸ್ತೆಯಲ್ಲಿ ಭಾನುವಾರ ಆಯೋಜಿಸಿದ್ದ ಚಿತ್ರ ಸಂತೆಯಲ್ಲಿ ಅಪ್ಪು ಚಿತ್ರವನ್ನು ಮಗುವಿಗೆ ತೋರಿಸುತ್ತಿರುವ ಮಹಿಳೆ –ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್
ದಾವಣಗೆರೆಯ ಎವಿಕೆ ರಸ್ತೆಯಲ್ಲಿ ಭಾನುವಾರ ಆಯೋಜಿಸಿದ್ದ ಚಿತ್ರ ಸಂತೆಯಲ್ಲಿ ಅಪ್ಪು ಚಿತ್ರವನ್ನು ಮಗುವಿಗೆ ತೋರಿಸುತ್ತಿರುವ ಮಹಿಳೆ –ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್   

ದಾವಣಗೆರೆ: ರಸ್ತೆಯ ಇಕ್ಕೆಲಗಳಲ್ಲಿ ಚಿತ್ರಕಲಾಕೃತಿಗಳ ಸಾಲು. ಅದರ ಪಕ್ಕದಲ್ಲಿ ಕಾದು ಕುಳಿತ ಕಲಾವಿದರು. ಅತ್ತಿತ್ತ ಕಲಾಸಕ್ತರ ದಂಡು. ಇಲ್ಲಿನ ಎವಿಕೆ ಕಾಲೇಜು ರಸ್ತೆ ಪ್ರತಿದಿನ ವಾಹನ ದಟ್ಟಣೆಯಿಂದ ತುಂಬಿ ಹೋಗಿರುತ್ತಿದ್ದರೆ, ಭಾನುವಾರ ಕಲೆ, ಕಲಾವಿದ, ಕಲಾಸಕ್ತರ ಕಲರವದಲ್ಲಿ ತುಂಬಿ ಹೋಗಿತ್ತು.

ದಾವಣಗೆರೆ ಚಿತ್ರಕಲಾ ಪರಿಷತ್‌ ಭಾನುವಾರ ಹಮ್ಮಿಕೊಂಡಿದ್ದ ಚಿತ್ರಸಂತೆ ಇದಕ್ಕೆ ಅವಕಾಶ ಮಾಡಿಕೊಟ್ಟಿತು.

ಚಿತ್ರಕಲಾ ಶಿಕ್ಷಕ ದಿವಾಕರ ಅವರ ಪೇಪರ್ ಆರ್ಟ್‌ ಗಮನ ಸೆಳೆದವು. ಕಾಗದದಲ್ಲೇ ಕುವೆಂಪು, ಸಿರಿಗೆರೆ ಸ್ವಾಮೀಜಿ, ವೀರೇಂದ್ರ ಹೆಗ್ಗಡೆ ಸಹಿತ ಅನೇಕರ ಕಲಾಕೃತಿಗಳನ್ನು ವಿಶಿಷ್ಟವಾಗಿ ರಚಿಸಿದ್ದರು. ಮೈಸೂರಿನ ಶಿವಕುಮಾರ್ ಅವರು ಮಕ್ಕಳ ಬಾಲ್ಯವನ್ನು ಚಿತ್ರಗಳ ಮೂಲಕ ಕಟ್ಟಿಕೊಟ್ಟರು.

ADVERTISEMENT

ಬೆಂಗಳೂರಿನ ಸಜೀವನ್‌ ಅವರ ಪರಿಸರದ ಬಗೆಗಿನ ಆಯಿಲ್‌ ಪೇಂಟ್‌ಗಳು, ಬೆಂಗಳೂರಿನ ಬೆನ್ಸಿ ಮತ್ತು ಅಂಜುದೇವಿ ಅವರ ಆಬ್‌ಸ್ಟ್ರ್ಯಾಕ್ಟ್‌ ಮತ್ತು ಅಕ್ರಲಿಕ್ ಚಿತ್ರಗಳು, ಅವರು ಅಕ್ಕಿಮೇಲೆ ಹೆಸರು ಬರೆದುಕೊಡುವ ಕೌಶಲಗಳು ಚೆನ್ನಾಗಿದ್ದವು. ಶಿವಾನಂದ ಬೋತ ಅವರು ಆಯಿಲ್‌ ಕ್ಯಾನ್‌ವಾಸ್‌ನಲ್ಲಿ ಎತ್ತಿನಬಂಡಿ, ಕುದುರೆ ಬಂಡಿ ಹಣ್ಣು ಮಾರುವ ಅಜ್ಜಿ, ಮನೆ ವಾತಾವರಣ, ಪುಟ್ಟ ಮಗುವನ ಸ್ನಾನ ಮೂಡಿಸಿದ್ದರು.

ಹರಿಹರದ ನೂರ್‌ ಫಾತಿಮಾ ಅವರ ರೆಕ್ಸಿನ್‌ ಆರ್ಟ್‌, ರೂಪಾಶ್ರೀ ನೇತೃತ್ವದ ಸಾಯಿ ಬ್ರಷ್‌ ಪ್ಲೇ ಸಂಸ್ಥೆಯ ಮಕ್ಕಳು ಬಿಡಿಸಿದ್ದ ವರ್ಲಿ, ಅಪರೂಪದ ಗೋಂದ್‌ ಆರ್ಟ್‌, ಮಹಾರಾಷ್ಟ್ರ ಕೊಲ್ಲಾಪುರದ ಮಾಧವಿ ಡಿ. ಗೋಯ್ಲ್‌ಕರ್‌, ದತ್ತಾತ್ರೇಯ್‌ ಗೋಯ್ಲ್‌ಕರ್‌ ಅವರ ಆಯಿಲ್‌ ಪೇಂಟ್‌ನಲ್ಲಿ ಅರಳಿದ ದೇಗುಲಗಳು, ಜಿಎಂಐಟಿಯ ವಿದ್ಯಾರ್ಥಿಗಳ ಮಂಡಲ್ ಆರ್ಟ್‌ಗಳು ಆಕರ್ಷಕವಾಗಿದ್ದವು.

ರೀಮಾ ರವಿಚಂದ್ರನ್‌ ದರ್ಶನ ಅವರು ದುಪ್ಪಟ್ಟಾದಲ್ಲಿ ಬಿಡಿಸಿದ ಚಿತ್ರಗಳು (ಒಗೆದರೂ ಅಳಿಸಿ ಹೋಗದ) ಕಲಾಸಕ್ತರನ್ನು ಸೆಳೆದವು. ವೀಣಾ ಪಾಲಂಕರ್‌ ಅವರು ಬಿಹಾರದ ಸಾಂಪ್ರದಾಯಿಕ ಮಧುಬನಿ ಕಲೆ (ಮಿಥಿಲಾ ಆರ್ಟ್‌), ಶಿವರಾಜ್‌ ಅವರ ಕ್ರಿಯೇಟಿವ್‌ ವರ್ಕ್‌ ಮೂಲಕ ಮಾಡಿದ ಸಣ್ಣ ಬೈಕ್‌ಗಳು ಮಕ್ಕಳನ್ನು ಸೆಳೆದವು. ಮಂಜುಳಾ ಕರಿಗಾರ್‌ ಅವರ ಅಗರಬತ್ತಿ ಕಡ್ಡಿಯಿಂದ ಕಲಾಕೃತಿಗಳನ್ನು ರಚಿಸಿದ್ದರು.

ಜಯರಾಮ ಬೆಂಗಳೂರು, ಗದಗದ ಗೋಪಾಲಕೃಷ್ಣ, ವಿ.ಕೆ. ವಂಟಗೋಡಿ, ಸತಾರದ ಆಕಾಶ್‌, ಶಿವಮೊಗ್ಗದ ಕೃಷ್ಣ ಪ್ರಭು, ಜಗಳೂರಿನ ಶಿವಕುಮಾರ್‌, ದಾವಣಗೆರೆಯ ಶಾಂತಯ್ಯ ಪರಡಿಮಠ, ಗಂಗಾಧರ ಹೂವಿನಹಡಗಲಿ ಅವರ ಚಿತ್ರಗಳು ಗಮನ ಸೆಳೆದವು.

ರಾಜೇಶ್‌ ದಾವಣಗೆರೆ ಅವರ ಬಾಲ್‌ ಪೆನ್‌ ಆರ್ಟ್‌, ಕಲಾಕೃತಿ ಆರ್ಟ್‌ಫಾರ್ಮ್‌ನ ಸಿದ್ಧಲಿಂಗಯ್ಯ ಜೆ.ಸಿ, ಪ್ರಶಾಂತ್‌, ಎಚ್‌.ಎಸ್‌. ಹರಿಪ್ರಸಾದ್‌ ಅವರ ತ್ರೀಡಿ ಸ್ಕಲ್‌ಪ್ಚರ್‌ಗಳು ಭಾರಿ ಬೆಲೆ ಬಾಳುವಂಥವುಗಳಾಗಿದ್ದವು. ಇದಲ್ಲದೇ ₹ 1 ಲಕ್ಷಕ್ಕಿಂತಲೂ ಅಧಿಕ ಮೌಲ್ಯದ ಕ್ಯಾನ್ವಾಸ್‌ ಪೇಂಟ್‌ ಪ್ರಮುಖ ಆಕರ್ಷಣಾ ಕಲೆಯಾಗಿತ್ತು.

ಕರಿಯಪ್ಪ ಹಂಚಿನಮನೆ ಅವರ ಜನಪದ ಆಚರಣೆಗಳನ್ನು ಬಿಂಬಿಸುವ ಸಮಕಾಲಿನ ಕಲೆಗಳು, ಕೆ.ಎಂ. ಸಂತೋಷ್‌ ಅವರ ಇಚಿಂಗ್‌ ಮಲ್ಟಿಕಲರ್‌ ಪ್ರಿಂಟ್‌, ಚನ್ನಗಿರಿ ಕ್ಯಾತಣ್ಣವರ್‌ ಅವರ ಚುಕ್ಕಿಚಿತ್ರಗಳು, ಮಂಜುನಾಥ ಗೌಡ ಅರಸಿಕೆರೆ ಅವರ ಚುಕ್ಕಿಯಲ್ಲಿ ಅರಳಿದ ದೇವರ ಚಿತ್ರಗಳು, ಶ್ರೀನಿವಾಸ ಅವರ ಪೆನ್‌, ಪೆನ್ಸಿಲ್‌ನ ಆಧುನಿಕ ಕಲೆಗಳು, ಹರಿಹರ ಕೃಷ್ಣ ಜಿ.ಎಸ್‌. ಅವರ ನೈಫ್‌ ಪೇಂಟಿಂಗ್‌,

ಜವಳಿ ಶಾಂತಕುಮಾರ್‌, ಎಂ.ಎನ್‌. ಕರಿಗಾರ ಹುಬ್ಬಳ್ಳಿ, ಮೇಘಶ್ರೀ ದಾವಣಗೆರೆ, ಅನುಷಾ ದಾವಣಗೆರೆ, ವಿಜಯ ಎಸ್‌. ಪಾಟೀಲ್‌, ಎಂ.ಎಸ್‌. ಲಂಗೋಟಿ ಶಿಗ್ಗಾಂವ್‌, ಶ್ರೀರಾಮುಲು ಶಿಗ್ಗಾಂವ್‌, ಹರಿಣಿ ಎಲ್‌.ಪಿ. ಪ್ರಶಾಂತ್ ಅಥಣಿ, ವಿಶಾಲಾಕ್ಷಿ ಹರಪನಹಳ್ಳಿ, ವಿಶಾಲಾಕ್ಷಿ ಹರಪನಹಳ್ಳಿ, ಅಶೋಕ್‌ ಜಿ. ಬೆಂಗಳೂರು, ಡಿ. ಆರ್ಟ್‌ ಸಂಸ್ಥೆಯವರು, ಚಂದ್ರಶೇಖರ್‌, ಜ್ಯೋತಿರಾಜ್‌ ವಿಶಿಷ್ಟ ಕಲೆಗಳನ್ನು ಪ್ರದರ್ಶಿಸಿದರು.

ಮಹಾಲಿಂಗಪ್ಪ ಅವರ ರಿಯಲಿಸ್ಟಿಕ್‌, ಡೆಕೊರೇಟಿವ್‌, ಆಬ್‌ಸ್ಟ್ರಾಕ್ಟ್‌ ಆರ್ಟ್‌ಗಳು, ರಾಣೆಬೆನ್ನೂರಿನ ಶಿವಪ್ಪ ಹಾದಿಮನಿ ಅವರ ಹೊಸ ಶೈಲಿಯ ಡೈಮಂಡ್‌ ಸ್ಟ್ರಿಕ್‌ ಪೇಂಟಿಂಗ್‌, ಕಾಂಚನ ರತ್ನ ಅವರ ಸಾಮಾಜಿಕ ಕಾರಣಗಳನ್ನಿಟ್ಟುಕೊಂಡು ಪತ್ರಿಕೆಯ ಸುದ್ದಿಯ ಮೇಲೆ ಮಾಡಿದ ಚಿತ್ರಗಳು, ಹರಿಹರದ ರೇವಣಸಿದ್ದಪ್ಪ ಅವರ ಸ್ಪ್ರೆಡ್ ಆರ್ಟ್‌ಗಳನ್ನು ಜನ ಕುತೂಹಲದಿಂದ ನೋಡಿದರು. ಮಲ್ಲಿಕಾರ್ಜುನ ಅವರು ತೆಂಗಿನಕಾಯಿಲ್ಲಿ ಕಲೆ ಸೃಷ್ಟಿಸಿದ್ದರು.

ಲ್ಯಾಂಡ್‌ಸ್ಕೇಪ್‌, ಪೋರ್ಟ್‌ರೇಟ್‌, ಪೆನ್‌, ಪೆನ್ಸಿಲ್‌ ಆರ್ಟ್‌, ಎಂಬೋಸ್‌ ಆರ್ಟ್‌, ಮೂರ್ತ, ಅಮೂರ್ತ ಕಲೆಗಳ ಚಿತ್ರಗಳು ಪ್ರದರ್ಶನಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.