ADVERTISEMENT

ಪಾತಾಳಕ್ಕಿಳಿದ ಬದನೆ ದರ; ಆತಂಕದಲ್ಲಿ ರೈತ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2022, 6:27 IST
Last Updated 12 ಡಿಸೆಂಬರ್ 2022, 6:27 IST
ಬಸವಾಪಟ್ಟಣದ ರೈತ ಇನಾಯತ್ ಉಲ್ಲಾ ಬೆಳೆದ ಒಂದು ಎಕರೆ ಬದನೆಯನ್ನು ಕೀಳದೇ ಬಿಟ್ಟಿರುವುದು
ಬಸವಾಪಟ್ಟಣದ ರೈತ ಇನಾಯತ್ ಉಲ್ಲಾ ಬೆಳೆದ ಒಂದು ಎಕರೆ ಬದನೆಯನ್ನು ಕೀಳದೇ ಬಿಟ್ಟಿರುವುದು   

ಬಸವಾಪಟ್ಟಣ: ನಿತ್ಯದ ಬಳಕೆಯ ತರಕಾರಿ ಬದನೆಯ ಬೆಲೆ ನಿರೀಕ್ಷೆಗೂ ಮೀರಿ ಕುಸಿತವಾಗಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ.

ಎರಡು ತಿಂಗಳ ಹಿಂದೆ ಕೆ.ಜಿ.ಗೆ ₹60 ಮಾರಾಟವಾಗುತ್ತಿದ್ದ ಬದನೆಕಾಯಿ ದರ ಈಗ ₹15ರಿಂದ ₹20ಕ್ಕೆ ಇಳಿದಿದೆ. ₹1,000 ಮಾರಾಟವಾಗುತ್ತಿದ್ದ 20 ಕೆ.ಜಿ. ತೂಗುವ ಒಂದು ಕ್ರೇಟ್‌ ಬದನೆ ಈಗ ಕೇವಲ ₹80ರಿಂದ ₹100ಕ್ಕೆ ಇಳಿದಿದೆ.

‘ಎರಡು ಎಕರೆ ಬದನೆ ಗಿಡಗಳ ನಾಟಿ ಮಾಡಿದ್ದೆ. ಬೆಲೆ ಕುಸಿತದಿಂದ ಒಂದು ಎಕರೆ ಬದನೆಯನ್ನು ಕೀಳುವುದನ್ನೇ ಬಿಟ್ಟಿದ್ದೇನೆ. ಎಲ್ಲವೂ ನೆಲಕ್ಕೆ ಬಿದ್ದು ಹೋಗುತ್ತಿವೆ. ಬದನೆ ಬೆಳೆಗೆ ಎಕರೆಗೆ ₹40,000 ಖರ್ಚಾಗಿದ್ದು, ಈಗ ಹಾಕಿದ ಬಂಡವಾಳ ಕೈಗೆ ಬರುವುದು ದೂರದ ಮಾತೇ ಆಗಿದೆ’ ಎನ್ನುತ್ತಾರೆ ಇಲ್ಲಿನ ರೈತ ಇನಾಯತ್‌ ಉಲ್ಲಾ.

ADVERTISEMENT

‘ಬದನೆಗೆ ಬೆಲೆ ಹೆಚ್ಚಾಗಿದ್ದಾಗ ಸಾಕಷ್ಟು ಲಾಭ ಬರುತ್ತಿತ್ತು. ಆದರೆ, ಈಗ ಬೆಲೆ ಕುಸಿತದಿಂದ ಒಂದು ಕ್ವಿಂಟಲ್‌ ಬದನೆ ಮಾರಾಟ ಮಾಡಿದರೂ ₹100 ಲಾಭವಾಗುತ್ತಿಲ್ಲ. ಆದರೆ, ಬಳಕೆದಾರರು ಮಾತ್ರ ಸೋವಿ ಎನ್ನುವ ಖುಷಿಯಲ್ಲಿದ್ದಾರೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಸಖಲೀನ್‌ ಸಾಹೇಬ್‌.

‘ಈ ಭಾಗದಲ್ಲಿ ಹಸಿ ಅವರೆಕಾಯಿ ಸಾಕಷ್ಟು ಮಾರಾಟಕ್ಕೆ ಬಂದಿದೆ. ‘ಅವರೆ’ಗೆ ಮನಸೋತ ಜನ ಬದನೆಯನ್ನು ಕೊಳ್ಳುತ್ತಿಲ್ಲ. ಬೆಲೆ ಹೆಚ್ಚಾಗಬಹುದು ಎಂಬ ಯೋಚನೆಯಲ್ಲಿ ಕೀಳದೇ ಬಿಟ್ಟ ದೊಡ್ಡ ಗಾತ್ರದ ಬದನೆಯನ್ನು ಈಗ ಬೆಳೆಗಾರರು ನಮ್ಮ ಅಂಗಡಿಗಳಿಗೆ ತಂದು ಮಾರುತ್ತಿದ್ದಾರೆ. ಅದರಲ್ಲಿ ಹುಳಗಳು ಕಂಡು ಬಂದಿವೆ. ತರಕಾರಿ ಕೊಳ್ಳುವವರು ಹುಳತುಂಬಿದ ಬದನೆಯನ್ನು ಬುಟ್ಟಿಯಲ್ಲಿಯೇ ಬಿಟ್ಟು ಹೋಗುತ್ತಾರೆ. ನಷ್ಟ ಹೆಚ್ಚಾಗುತ್ತಿದೆ’ ಎನ್ನುತ್ತಾರೆ ವ್ಯಾಪಾರಿ ಅಮ್ಜದ್‌ಖಾನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.