ADVERTISEMENT

ಹವಮಾನ ವೈಪರೀತ್ಯದಿಂದ ಮಕ್ಕಳಿಗೆ ಆರೋಗ್ಯ ಸಮಸ್ಯೆ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ನಿಗಾ ವಹಿಸಲು ವೈದ್ಯರಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 4:49 IST
Last Updated 22 ಸೆಪ್ಟೆಂಬರ್ 2021, 4:49 IST
ದಾವಣಗೆರೆಯ ಸಿ.ಜಿ.ಆಸ್ಪತ್ರೆಯ ಮಕ್ಕಳ ವಾರ್ಡ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಕ್ಕಳ ಆರೋಗ್ಯ ವಿಚಾರಿಸಿ, ವ್ಯವಸ್ಥೆಯನ್ನು ಪರಿಶೀಲಿಸಿದರು–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಸಿ.ಜಿ.ಆಸ್ಪತ್ರೆಯ ಮಕ್ಕಳ ವಾರ್ಡ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಕ್ಕಳ ಆರೋಗ್ಯ ವಿಚಾರಿಸಿ, ವ್ಯವಸ್ಥೆಯನ್ನು ಪರಿಶೀಲಿಸಿದರು–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ವಾತವರಣ ಬದಲಾಗುವುದರಿಂದ ವೈರಲ್ ಜ್ವರ ಹಾಗೂ ಡೆಂಗಿ ಹೆಚ್ಚಾಗಿ ಹರಡುತ್ತಿದೆ. ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗಳಲ್ಲಿ ಮಕ್ಕಳು ಹೆಚ್ಚಾಗಿ ದಾಖಲಾಗುತ್ತಿದ್ದಾರೆ. ವೈದ್ಯರು ಹಾಗೂ ಪೋಷಕರು ಮಕ್ಕಳ ಬಗೆಗೆ ನಿಗಾ ಇಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಕೋವಿಡ್-19 3ನೇ ಅಲೆ ಮುಂಜಾಗರೂಕ ಕ್ರಮವಾಗಿ ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿರುವ ಆಮ್ಲಜನಕ ಘಟಕ, ಜನರೇಟರ್, ಎಂಆರ್‌ಐ, ಮಕ್ಕಳ ವಾರ್ಡ್, ಮಕ್ಕಳ ತೀವ್ರ ನಿಗಾ ಚಿಕಿತ್ಸಾ ಘಟಕ (ಪಿಐಸಿಯು), ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಕ್ಕಳ ಆಸ್ಪತ್ರೆಯಲ್ಲಿ 65 ಬೆಡ್ ಇದ್ದು, 12 ಪಿಐಸಿಯು ಬೆಡ್ ಇದೆ. ಇದರಲ್ಲಿ 40 ಬೆಡ್ ಭರ್ತಿ ಆಗಿದ್ದು, 25 ಬೆಡ್ ಖಾಲಿ ಇವೆ. ವೈರಲ್ ಜ್ವರ 5 ದಿನಗಳೊಳಗೆ ಹಾಗೂ ಡೆಂಗಿ ಲೈಕ್ ಇಲ್‍ನೆಸ್ 10 ದಿನಗಳೊಳಗೆ ಕಡಿಮೆ ಆಗುತ್ತದೆ. ದಾಖಲಾಗಿರುವ 40 ಮಂದಿಯಲ್ಲಿ 7 ಮಕ್ಕಳಲ್ಲಿ ಡೆಂಗಿ ಇರಬೇಕು ಎಂದು ಶಂಕಿಸಲಾಗಿದೆ. ಅವರನ್ನು ರ‍್ಯಾಪಿಡ್ ಟೆಸ್ಟ್ ಮಾಡಿಸಲಾಗಿದೆ. ಡೆಂಗಿ ಸಂಬಂಧಿತ ಎಲಿಸಾ ಟೆಸ್ಟ್ ಮಾಡಬೇಕಿದೆ ಎಂದು ತಿಳಿಸಿದರು.

ADVERTISEMENT

ಬಾಪೂಜಿ ಆಸ್ಪತ್ರೆಯಲ್ಲಿ 21 ಮಕ್ಕಳು ವೈರಲ್ ಜ್ವರದಿಂದ ಬಳಲುತ್ತಿದ್ದು, ಅದರಲ್ಲಿ 10 ಮಕ್ಕಳು ಶಂಕಿತ ಡೆಂಗಿ ಜ್ವರದಿಂದ ಬಳಲುತ್ತಿದ್ದಾರೆ. ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ 110 ಮಕ್ಕಳು ದಾಖಲಾಗಿದ್ದು, ಅದರಲ್ಲಿ 28 ಶಂಕಿತ ಡೆಂಗಿ ಜ್ವರದಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ಯಾವುದೇ ತೊಂದರೆಯಿಲ್ಲ ಎಂದು ಮಾಹಿತಿ ನೀಡಿದರು.

ಕೋವಿಡ್ 3ನೇ ಅಲೆ ಸಂಭವ ಹೆಚ್ಚಿದ್ದು ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ಮಕ್ಕಳ ತಜ್ಞರು ತಿಳಿಸಿದ್ದಾರೆ. ಇದಕ್ಕೆ ಬೇಕಾದ ಹಾಸಿಗೆ, ವೆಂಟಿಲೆಟರ್ಸ್, ಪಾಟ್ಸ್, ಮಾನಿಟರ್ಸ್ ಸೇರಿ ಮಾನವ ಸಂಪನ್ಮೂಲಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಯ ಬೀಳುವ ವಾತವರಣ ನಿರ್ಮಾಣವಾಗಿಲ್ಲ ಎಂದು ಹೇಳಿದರು.

ಮಕ್ಕಳಿಗಾಗಿಯೇ ಮೀಸಲಾಗಿರುವ ವಾರ್ಡ್ ನಂ 65 ಹಾಗೂ 66 ಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಮಕ್ಕಳ ಆಸ್ಪತ್ರೆಗೆ ಬೇಕಾದ ಮಾನಿಟರ್ ಸ್ಟ್ಯಾಂಡ್, ಮಲ್ಟಿಪ್ಯಾರ ಮಾನಿಟರ್, ಐಸಿಯು ಕಾಟ್ಸ್, ವೆಂಟಿಲೆಟರ್ಸ್ ಗಳನ್ನು ಸೆ.29 ರೊಳಗಾಗಿ ಸಿದ್ಧತೆ ಮಾಡಿಟ್ಟುಕೊಂಡಿರಬೇಕು. ಆಸ್ಪತ್ರೆಗೆ ಬೇಕಾದ ಆಮ್ಲಜನಕ ಬೆಡ್, ಐಸಿಯು ಕಾಟ್‌ಗಳನ್ನು ಶನಿವಾರದ ಒಳಗಾಗಿ ತರಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ 30-40 ಅಡಿ ಸ್ಥಳಾವಕಾಶದಲ್ಲಿ ಹೊಸದಾಗಿ ಎಂ.ಆರ್.ಐ ಸ್ಕ್ಯಾನಿಂಗ್ ಕೇಂದ್ರ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ವೈದ್ಯಕೀಯ ಅಧ್ಯಯನ ಮಾಡುತ್ತಿರುವ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಕ್ಕಳ ಚಿಕಿತ್ಸೆ ಕುರಿತಂತೆ ತರಬೇತಿ ನೀಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ, ಹಿರಿಯ ಶುಶ್ರೂಷಕಿ ಡಾ. ಆಶಾ ಕಾಂಬ್ಳೆ, ಮಕ್ಕಳ ತಜ್ಞ ಡಾ. ಸುರೇಶ್, ಡಾ. ಮೋಹನ್ ಅವರೂ ಇದ್ದರು.

ಜಿಲ್ಲಾಸ್ಪತ್ರೆಯಲ್ಲಿ 3 ಪ್ಲಾಂಟ್

ಜಿಲ್ಲಾ ಆಸ್ಪತ್ರೆಯಲ್ಲಿ 1000 ಲೀಟರ್‌ ಸಾಮರ್ಥ್ಯದ ಪ್ರತ್ಯೇಕ 3 ಆಮ್ಲಜನಕ ಘಟಕಗಳ ಕಾಮಗಾರಿ ಮುಗಿದಿದೆ. ಕೊರೊನಾ 2ನೇ ಅಲೆ ಸಂದರ್ಭದಲ್ಲಿ ಆಮ್ಲಜನಕ ಕೊರತೆ ಉಂಟಾಗಿತ್ತು. ಈಗ ಈ ಕೊರತೆ ನೀಗಿದೆ. ಇದಕ್ಕೆ 500 ಕೆ.ವಿ. ಜನರೇಟರ್ ವಿದ್ಯುತ್ ಸಂಪರ್ಕ ವ್ಯವಸ್ಥೆ, ಪವರ್ ಬ್ಯಾಕಪ್ ಜನರೇಟರ್ ಹಾಗೂ ಡಿಸೇಲ್ ವ್ಯವಸ್ಥೆಯನ್ನು ಕೆಲವೇ ದಿನಗಳಲ್ಲಿ ಅಳವಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ವೈದ್ಯರು ಪರೀಕ್ಷೇಗೆ ಅನವಶ್ಯಕವಾಗಿ ಬೇರೆ ಆಸ್ಪತ್ರೆಗಳಿಗೆ ಕಳುಹಿಸುವಂತಿಲ್ಲ. ಒಂದು ವೇಳೆ ಸೂಚಿಸಿದರೆ ಅಂಥವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.