ADVERTISEMENT

ದಾವಣಗೆರೆ: ತಡವಾಗಿ ಬಂದ ಆಮ್ಲಜನಕ ಹೊತ್ತ ಟ್ಯಾಂಕರ್‌

ಅನಾಹುತಕ್ಕೆ ಎಡೆಯಾಗದಂತೆ ಕಾರ್ಯನಿರ್ವಹಿಸಿದ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 7 ಮೇ 2021, 4:12 IST
Last Updated 7 ಮೇ 2021, 4:12 IST
ಮಹಾಂತೇಶ ಬೀಳಗಿ
ಮಹಾಂತೇಶ ಬೀಳಗಿ   

ದಾವಣಗೆರೆ: ಜಿಲ್ಲಾ ಆಸ್ಪತ್ರೆಗೆ ಆಕ್ಸಿಜನ್ ತುಂಬಿದ ಟ್ಯಾಂಕರ್ ಬರುವುದು ತಡವಾದ ಕಾರಣ ಒಂದಷ್ಟು ಹೊತ್ತು ಆಸ್ಪತ್ರೆಯಲ್ಲಿ ಗೊಂದಲು ಮತ್ತು ಬಿಗು ವಾತಾವರಣ ಸೃಷ್ಟಿಯಾಯಿತು. ಕೂಡಲೇ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆಸ್ಪತ್ರೆಗೆ ಧಾವಿಸಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಮತ್ತು ಏಜೆನ್ಸಿಯಿಂದ ಜಂಬೋ ಸಿಲಿಂಡರ್‌ಗಳನ್ನು ತರಿಸಿ ಆಮ್ಲಜನಕ ಕೊರತೆ ಆಗದಂತೆ ನೋಡಿಕೊಂಡರು.

ವಿಜಯನಗರ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ಲಿನಲ್ಲಿರುವ ಜಿಂದಾಳ್‌ನವರ ವಿಜಯನಗರ ಘಟಕದಿಂದ ಆಮ್ಲಜನಕ ಹೊತ್ತ ಟ್ಯಾಂಕರ್‌ ಲಾರಿಯು ಗುರುವಾರ ಬೆಳಿಗ್ಗೆ 8ಕ್ಕೆ ಬರಬೇಕಿತ್ತು. ಆದರೆ ಬಂದಿರಲಿಲ್ಲ. ಇದರಿಂದಾಗಿ 6 ಸಾವಿರ ಲೀಟರ್‌ ಆಮ್ಲಜನಕ ಸಂಗ್ರಹದ ಲಿಕ್ವಿಡ್‌ ಆಕ್ಸಿಜನ್‌ ಪ್ಲಾಂಟ್‌ನಲ್ಲಿ ಆಮ್ಲಜನಕ ಸಂಗ್ರಹ ಕಡಿಮೆಯಾಗತೊಡಗಿತ್ತು. ಈ ಬಗ್ಗೆ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ಗಮನಕ್ಕೆ ತಂದರು. ಅವರು ಕೂಡಲೇ ಖಾಸಗಿ ಆಸ್ಪತ್ರೆಗಳು, ಏಜೆನ್ಸಿ ಜತೆ ಮಾತನಾಡಿ ಜಂಬೋ ಸಿಲಿಂಡರ್‌ ವ್ಯವಸ್ಥೆ ಮಾಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಧಿಕಾರಿ ಹನುಮಂತರಾಯ ಅವರು ಝೀರೋ ಟ್ರಾಫಿಕ್‌ನಲ್ಲಿ ಆಮ್ಲಜನಕದ ಟ್ಯಾಂಕರ್‌ ಬರುವಂತೆ ಮಾಡಿದರು. ಮಧ್ಯಾಹ್ನ 12ಕ್ಕೆ ಟ್ಯಾಂಕರ್‌ ಬಂದು ತಲುಪಿತ್ತು.

ಕೊರೊನಾ ಸೋಂಕಿತ 300 ಮಂದಿ ಹಾಗೂ ಕೊರೊನಾ ಸೋಂಕಿತರಲ್ಲದ 102 ಮಂದಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಮ್ಲಜನಕ ಕೊರತೆಯಾಗಬಹುದು ಎಂಬ ಕಾರಣದಿಂದ ಆಸ್ಪತ್ರೆಯಲ್ಲಿ ಗಲಿಬಿಲಿ ಉಂಟಾಗಿತ್ತು. ಆದರೆ ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ADVERTISEMENT

ಪ್ರತಿದಿನ ಬೆಳಿಗ್ಗೆ ಜಿಲ್ಲಾ ಆಸ್ಪತ್ರೆಗೆ ಆಮ್ಲಜನಕ ಬರುತ್ತಿತ್ತು. ಆದರೆ, ಇಂದು ಉತ್ಪಾದನಾ ಘಟಕದಲ್ಲಿ ಟ್ಯಾಂಕರ್‌ಗೆ ಆಮ್ಲಜನಕ ತುಂಬುವಲ್ಲಿ ತಡವಾಗಿದ್ದ ಕಾರಣ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಟ್ಯಾಂಕರ್ ಬಂದಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.

ಮುಂದೆ ಹೀಗಾಗದಂತೆ ಎಚ್ಚರ ವಹಿಸಲಾಗಿದೆ: ಜಿಲ್ಲಾಧಿಕಾರಿ
‘ಜಿಂದಾಲ್‌ ಪ್ಲಾಂಟ್‌ನಿಂದ ಎಲ್ಲ ಕಡೆ ಆಮ್ಲಜನಕ ಪೂರೈಸಲಾಗುತ್ತಿದೆ. ಹರಿಹರ ಸದರ್ನ್‌ ಪ್ಲಾಂಟ್‌ಗೂ ಅಲ್ಲಿಂದಲೇ ಬರಬೇಕು. ಸದರ್ನ್‌ ಪ್ಲಾಂಟ್‌ನಿಂದ ಜಿಲ್ಲಾ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಆಗುತ್ತದೆ. ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ಲಿಕ್ವಿಡ್‌ ಆಕ್ಸಿಜನ್‌ ಪ್ಲಾಂಟ್‌ಗೆ ನೇರವಾಗಿ ಟ್ಯಾಂಕರ್‌ ಬರುತ್ತದೆ. ಗುರುವಾರ ಟ್ಯಾಂಕರ್‌ ಬರುವುದು ತಡವಾಯಿತು. ಮುಂದೆ ಹೀಗಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಸದರ್ನ್‌ ಪ್ಲಾಂಟ್‌ನಿಂದ ದಕ್ಷಿಣ ಕನ್ನಡ, ಉಡುಪಿಗೆ ಆಮ್ಲಜನಕ ಪೂರೈಕೆಯಾಗುತ್ತಿರುವುದರಿಂದ ಯಾವುದೇ ಸಮಸ್ಯೆ ಆಗಿಲ್ಲ. ನಮ್ಮಲ್ಲಿ ಇರುವ ಜಂಬೋ ಸಿಲಿಂಡರ್‌ಗಳಲ್ಲದೇ ಖಾಸಗಿಯವರಲ್ಲಿ ಇರುವ ಸಿಲಿಂಡರ್‌ ಪಡೆದುಕೊಂಡು ಸದರ್ನ್‌ ಪ್ಲಾಂಟ್‌ ಹಾಗೂ ರೇಣುಕಾ ಇಂಡಸ್ಟ್ರೀಸ್‌ನಿಂದ ಆಮ್ಲಜನಕ ತುಂಬಿಸಿಕೊಂಡು ಬಂದು ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು. ಒಟ್ಟು 336 ಜಂಬೋ ಸಿಲಿಂಡರ್‌ ಬಳಸಿದ್ದೆವು’ ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.