ADVERTISEMENT

ತುಂಗಭದ್ರಾ ದಂಡೆ ನಿವಾಸಿಗಳಿಗೆ ಶಾಶ್ವತ ಪರಿಹಾರ ಎಂದು?

ಹೊನ್ನಾಳಿ: ಕಳೆದ ಮೂವತ್ತು ವರ್ಷಗಳಿಂದ ತಪ್ಪದ ಬಾಲರಾಜ್‌ಘಾಟ್ ನಿವಾಸಿಗಳ ಅರಣ್ಯ ರೋಧನ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 16:12 IST
Last Updated 4 ಆಗಸ್ಟ್ 2024, 16:12 IST
ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್‌ನ ಜನವಸತಿ ಪ್ರದೇಶಕ್ಕೆ ತುಂಗಭದ್ರಾ ನದಿ ನೀರು ನುಗ್ಗಿರುವುದು
ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್‌ನ ಜನವಸತಿ ಪ್ರದೇಶಕ್ಕೆ ತುಂಗಭದ್ರಾ ನದಿ ನೀರು ನುಗ್ಗಿರುವುದು   

ಹೊನ್ನಾಳಿ: ಪ್ರತಿವರ್ಷದ ಮಳೆಗಾಲದಲ್ಲಿ ಪಟ್ಟಣದ ಬಾಲರಾಜ್ ಘಾಟ್ ನಿವಾಸಿಗಳಿಗೆ ತುಂಗಭದ್ರಾ ಪ್ರವಾಹ ಭೀತಿ ಎದುರಾಗುತ್ತಿದೆ. ಇದರಿಂದ ನದಿ ದಂಡೆಯ ಮೇಲೆ ಅಧಿಕೃತ ಮತ್ತು ಅನಧಿಕೃತವಾಗಿ ವಾಸಿಸುತ್ತಿರುವ 30ಕ್ಕೂ ಹೆಚ್ಚು ಕುಟುಂಬಗಳು ನಾಲ್ಕಾರು ದಿನಗಳ ಕಾಲ ಬೇರೆಡೆಗೆ ತೆರಳಿ ವಾಸ ಮಾಡಬೇಕಾಗುತ್ತಿದೆ. ಇಲ್ಲವೇ ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿದ ಆರೈಕೆ ಕೇಂದ್ರಗಳಲ್ಲಿ ವಾಸ ಮಾಡಬೇಕಾಗುತ್ತಿದೆ. ಶಾಶ್ವತ ಪರಿಹಾರ ಸಿಗುವವರೆಗೂ ಈ ಸಮಸ್ಯೆಗೆ ಮುಕ್ತಿಯಿಂದ ಎನ್ನುತ್ತಾರೆ ಸ್ಥಳೀಯರು. 

ಪ್ರವಾಹ ಬಂದಾಗಲೆಲ್ಲ ಜಿಲ್ಲಾಧಿಕಾರಿ, ಸಚಿವರು, ಸ್ಥಳೀಯ ಶಾಸಕರು ಬಾಲರಾಜ್ ಘಾಟ್‌ಗೆ ಭೇಟಿ ನೀಡಿ, ಅಲ್ಲಿನ ನಿರಾಶ್ರಿತರಿಗೆ ತಾತ್ಕಾಲಿಕ ಊಟ ವಸತಿ ವ್ಯವಸ್ಥೆ ಕಲ್ಪಿಸಿ ಕೈ ತೊಳೆದುಕೊಳ್ಳುತ್ತಿರುವ ಸಂಗತಿ ಕಳೆದ 30 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಬಾಲರಾಜ್ ಘಾಟ್‌ನ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಿ ಎನ್ನುವ ಬೇಡಿಕೆಯನ್ನು ಜಿಲ್ಲಾಧಿಕಾರಿ ಮುಂದೆ ಇಡುವುದು ಸಾಮಾನ್ಯವಾಗಿದೆ. 

ಶಾಶ್ವತ ಸೂರು

ADVERTISEMENT

ಶಾಸಕ ಡಿ.ಜಿ. ಶಾಂತನಗೌಡ ಅವರು ಈ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಇಲ್ಲಿನ ನಿವಾಸಿಗಳಿಗೆ ಹೊಸದೊಂದು ಬಡಾವಣೆ ನಿರ್ಮಿಸಿ ಅಲ್ಲಿ ನಿವೇಶನ ನೀಡಿ, ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಟ್ಟಿದ್ದರು. ಬಾಲರಾಜ್ ಘಾಟ್‌ ನಿವಾಸಿಗಳು ನೂತನ ತುಂಗಭದ್ರಾ ಬಡಾವಣೆಗೆ ತೆರಳುತ್ತಿದ್ದರು. ಆದರೆ ಜನರು ತೊರೆದಿದ್ದ ಜಾಗದಲ್ಲಿ ಕೆಲವರು ತಾತ್ಕಾಲಿಕ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಹೀಗಾಗಿ ಸಮಸ್ಯೆ ಹಾಗೆಯೇ ಉಳಿದಿದೆ. 

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಮಲ್ಲದೇವರಕಟ್ಟೆಯಲ್ಲಿ ಆಶ್ರಯ ನಿವೇಶನ ಕಲ್ಪಿಸಿಕೊಡುವ ಸಂಬಂಧ 29 ಎಕರೆ ಜಮೀನು ಗುರುತಿಸಿ ಮಂಜೂರು ಮಾಡಿಸಿದ್ದರು. ಬಾಲರಾಜ್ ಘಾಟ್‌ನ ಕೆಲ ನಿವಾಸಿಗಳಿಗೆ ಅಲ್ಲಿ ನಿವೇಶನ ನೀಡುವ ಆಲೋಚನೆ ಹೊಂದಿದ್ದರು. ಆದರೆ ಪುರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರಣ ಯೋಜನೆ ನನೆಗುದಿಗೆ ಬಿದ್ದಿದೆ. ಈ ಬಾರಿ ಪ್ರವಾಹ ಉಂಟಾದಾಗ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಶಾಂತನಗೌಡ ಅವರು, ಸಂತ್ರಸ್ತರಿಗೆ ಶೀಘ್ರವೇ ಶಾಶ್ವತ ಸೂರು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು.

ತಡೆಗೋಡೆ ಪರಿಹಾರವೇ?: 

ನದಿ ಹರಿವಿನ ಜಾಗದಲ್ಲಿ ತಡೆಗೋಡೆ ನಿರ್ಮಿಸುವುದು ಮತ್ತೊಂದು ಸಾಧ್ಯತೆ. ಆದರೆ ಅದು ಕಾರ್ಯಸಾಧುವಲ್ಲ ಎಂದು ತಜ್ಞರು ಹೇಳುತ್ತಾರೆ. ತುಂಗಭದ್ರಾ ಸೇತುವೆಯಿಂದ ಬಾಲರಾಜ್‌ಘಾಟ್‌ವರೆಗೂ ತಡೆಗೋಡೆ ನಿರ್ಮಿಸಲು ನೂರಾರು ಕೋಟಿ ರೂಪಾಯಿಗಳ ಅವಶ್ಯಕತೆ ಇದ್ದು, ಅಷ್ಟೊಂದು ಪ್ರಮಾಣದಲ್ಲಿ ಅನುದಾನ ತರಲು ಸಾಧ್ಯವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಈ ಸಮಸ್ಯೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ ಎಂಬುದು ಸಂತ್ರಸ್ತರ ಆಗ್ರಹ.

ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್‌ನ ಜನವಸತಿ ಪ್ರದೇಶಕ್ಕೆ ತುಂಗಭದ್ರಾ ನದಿ ನೀರು ನುಗ್ಗಿರುವುದು

ಬಾಲರಾಜ್ ಘಾಟ್ ನಿವಾಸಿಗಳಿಗೆ ಬೇರೆ ನಿವೇಶನ ನೀಡಿ ಸೂರು ನಿರ್ಮಿಸಿಕೊಡುವುದೊಂದೇ ಶಾಶ್ವತ ಪರಿಹಾರ. ನೂರಾರು ಕೋಟಿ ಅನುದಾನ ತಂದು ತಡೆಗೋಡೆ ನಿರ್ಮಿಸಲು ಯಾರಿಂದಲೂ ಸಾಧ್ಯವಿಲ್ಲ. ಇಲ್ಲದಿದ್ದರೆ ಪ್ರತಿವರ್ಷ ಕಾಳಜಿ ಕೇಂದ್ರಕ್ಕೆ ಕಳಿಸುವುದು ಮತ್ತೆ ಅಲ್ಲಿಂದ ನದಿದಂಡೆಯ ಮೇಲಿನ ನಿವಾಸಕ್ಕೆ ಕಳಿಸುವುದು ನಡೆಯುತ್ತಲೇ ಇರುತ್ತದೆ

-ನಜೀರ್ ಅಹ್ಮದ್ ಬಾಲರಾಜ್ ಘಾಟ್ ನಿವಾಸಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.