ADVERTISEMENT

ತಿನಿಸು ಉದ್ಯಮಕ್ಕೆ ಬಲ ತುಂಬಿದ ಸಂಘ

ಸುರಹೊನ್ನೆಯ ಮಂಜುಳಾ ಕುಟುಂಬದ ಯಶೋಗಾಥೆ

ಡಿ.ಎಂ.ಹಾಲಾರಾಧ್ಯ
Published 13 ಅಕ್ಟೋಬರ್ 2022, 5:40 IST
Last Updated 13 ಅಕ್ಟೋಬರ್ 2022, 5:40 IST
ಮಂಜುಳಾ
ಮಂಜುಳಾ   

ನ್ಯಾಮತಿ: ದುರ್ಬಲ ಕುಟುಂಬಗಳನ್ನು ಸಂಘಟಿತರನ್ನಾಗಿ ಮಾಡಿ, ಅವರಿಗೆ ಹಣಕಾಸಿನ ನೆರವು ನೀಡುವುದು ಮಾತ್ರವಲ್ಲದೇ ಆತ್ಮವಿಶ್ವಾಸ ಹೆಚ್ಚಿಸುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರಿಯಾಗಿದೆ. ಈ ಯೋಜನೆ ಅಡಿ ಸಾಲ ಸೌಲಭ್ಯ ಪಡೆದು ಇಡೀ ಕುಟುಂಬವನ್ನು ನಿರ್ವಹಿಸುತ್ತಿರುವ ನ್ಯಾಮತಿ ತಾಲ್ಲೂಕಿನ ಸುರಹೊನ್ನೆಯ ಶಾಂತಿನಗರದ ನಿವಾಸಿ ಮಂಜುಳಾ ಅವರ ಯಶೋಗಾಥೆ ಇಲ್ಲಿದೆ.

ಶಿಕಾರಿಪುರ ಮೂಲದ ಇವರು, ಸುರಹೊನ್ನೆ ಗ್ರಾಮದ ರಾಜಪ್ಪ ಅವರನ್ನು ವಿವಾಹವಾಗಿದ್ದು, ಕೃಷಿ ಜಮೀನು, ಮನೆ ಇರದ್ದರಿಂದ ಬಡತನದಿಂದ ಹೊರಬರಲು ಚಿಕ್ಕದಾಗಿ ಬಂಡವಾಳ ತೊಡಗಿಸಿ ಬೋಟಿ, ಮಸಾಲೆ ಶೇಂಗಾ, ಕೋಡುಬಳೆ, ಚಕ್ಕುಲಿ, ಬಟಾಣಿ, ಆಲೂಗಡ್ಡೆ ಚಿಪ್ಸ್ ಮುಂತಾದ ತಿಂಡಿ– ತಿನಿಸುಗಳನ್ನು ಮನೆಯಲ್ಲಿ ತಯಾರಿಸಿ ಮಾರುತ್ತಿದ್ದರು. ಇದರಿಂದ ಸಾಕಷ್ಟು ಲಾಭ ಸಿಗದೇ ಜೀವನ ನಿರ್ವಹಣೆ ಕಷ್ಟಕರವಾಗಿತ್ತು. ಆಗ ಸಹಾಯ ನೀಡಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.

‘12 ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪರಿಚಯವಾಗಿ ‘ಸಿಗಂದೂರು ಚೌಡೇಶ್ವರಿ ಸ್ವ–ಸಹಾಯ ಸಂಘ’ದ ಸದಸ್ಯಳಾದೆ. ಸಂಘದಿಂದ ಆರಂಭದಲ್ಲಿ ₹ 10,000 ಸಾಲ ಪಡೆದೆ. ನಂತರ ₹ 3 ಲಕ್ಷದವರೆಗೂ ಸಾಲ ಪಡೆದು, ಸ್ವಂತ ಬಂಡವಾಳವನ್ನೂ ಹಾಕಿ ಅಂದಾಜು₹ 15 ಲಕ್ಷ ಮೌಲ್ಯದ ಯಂತ್ರೋಪಕರಣ ಖರೀದಿಸಿದ್ದೇನೆ. ಈಗ ಉತ್ತಮವಾಗಿ ವ್ಯಾಪಾರ, ವಹಿವಾಟು ನಡೆಯುತ್ತಿದೆ. ಇದಕ್ಕೆಲ್ಲ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೇ ಕಾರಣ’ ಎಂದುಮಂಜುಳಾ ವಿವರಿಸಿದರು.

ADVERTISEMENT

ಪತಿ ರಾಜಪ್ಪ, ಪುತ್ರರಾದ ವಿಜಯಕುಮಾರ, ಅಜಯಕುಮಾರ, ಪುತ್ರಿ ಪ್ರಿಯಾ, ಅಳಿಯ ಪರಮಾನಂದ ಹಾಗೂ ನಾಲ್ವರು ಸಹಾಯಕರೊಂದಿಗೆ ಪ್ರತಿ ದಿನ 24 ತರಹದ ವಿಧದ ತಿನಿಸುಗಳನ್ನು ಇವರು ತಯಾರಿಸುತ್ತಾರೆ. ದಾವಣಗೆರೆ, ಶಿವಮೊಗ್ಗ, ಹಾವೇರಿ ಜಿಲ್ಲೆಗಳ ಅಂಗಡಿಗಳಿಗೆ ಸ್ವಂತ ವಾಹನದಲ್ಲಿ ಪತಿ ಮತ್ತು ಮಕ್ಕಳು ಕೊಂಡೊಯ್ದು ಮಾರುತ್ತಾರೆ. ಇನ್ನು ಕೆಲವರು ಮನೆಯ ಬಳಿಯೇ ಬಂದು ಖರೀದಿಸಿಕೊಂಡು ಹೋಗುತ್ತಾರೆ.

‘ಕೋವಿಡ್ ವೇಳೆ 2 ವರ್ಷ ವ್ಯಾಪಾರ ಇಲ್ಲದೇ ತೊಂದರೆಯಾಗಿತ್ತು. ಆಗ ಸಾಲದ ಕಂತು ಪಾವತಿಸಲು ಕಷ್ಟವಾಗಿತ್ತು. ಸಂಕಷ್ಟದ ಸಮಯದಲ್ಲಿ ಧರ್ಮಸ್ಥಳ ಸಂಘದಿಂದ ಸಾಲ ಸಿಗುವುದರಿಂದ ತುಂಬಾ ಅನುಕೂಲವಾಗುತ್ತದೆ’ ಎಂದು ಮಂಜುಳಾ ಅವರ ಹಿರಿಯ ಪುತ್ರ ವಿಜಯಕುಮಾರ ತಿಳಿಸಿದರು.

ವಿಜಯಕುಮಾರ, ಮಂಜುಳಾ ಅವರ ಹಿರಿಯ ಪುತ್ರ. ‘ಮುಂದಿನ ದಿನಗಳಲ್ಲಿ ವ್ಯಾಪಾರವನ್ನು ಅಭಿವೃದ್ಧಿ ಪಡಿಸಬೇಕು ಎಂಬ ಉದ್ದೇಶ ಇದೆ. ಒಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಲವು ನನಗೆ ದುಡಿದು ತಿನ್ನುವ ದಾರಿ ತೋರಿಸಿದೆ’ ಎನ್ನುತ್ತಾರೆ ಮಂಜುಳಾ ಕುಟುಂಬದ ಸದಸ್ಯರು.

*

ವರ್ಷದಲ್ಲಿ ಆರು ತಿಂಗಳು ಸೀಸನ್ ಇರುತ್ತದೆ. ₹ 5 ಲಕ್ಷ ಬಂಡವಾಳ ಹೂಡಿಕೆ ಮಾಡಿದರೆ, ಖರ್ಚು–ವೆಚ್ಚ ಕಳೆದು ಅಂದಾಜು ₹ 3 ಲಕ್ಷ ಲಾಭ ಗಳಿಸಬಹುದು.
–ಮಂಜುಳಾ, ಶಾಂತಿನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.