ADVERTISEMENT

ಮಹಿಳಾ ಒಕ್ಕೂಟದಿಂದ ತಯಾರಾಗುತ್ತಿವೆ ಸಾವಿರ ತಿರಂಗಾ!

ಜಿಲ್ಲಾ ಪಂಚಾಯಿತಿ ಸೂಚನೆ ಮೇರೆಗೆ ಕಾರ್ಯ

ಎನ್.ವಿ.ರಮೇಶ್
Published 11 ಆಗಸ್ಟ್ 2022, 6:53 IST
Last Updated 11 ಆಗಸ್ಟ್ 2022, 6:53 IST
ಬಸವಾಪಟ್ಟಣ ಸಮೀಪದ ಕೋಟೆಹಾಳಿನಲ್ಲಿ ತುಂಗಭದ್ರಾ ಸಂಜೀವಿನಿ ಒಕ್ಕೂಟದ ಮಹಿಳೆಯರು ರಾಷ್ಟ್ರಧ್ವಜ ಸಿದ್ಧತೆಯಲ್ಲಿ ತೊಡಗಿರುವುದು
ಬಸವಾಪಟ್ಟಣ ಸಮೀಪದ ಕೋಟೆಹಾಳಿನಲ್ಲಿ ತುಂಗಭದ್ರಾ ಸಂಜೀವಿನಿ ಒಕ್ಕೂಟದ ಮಹಿಳೆಯರು ರಾಷ್ಟ್ರಧ್ವಜ ಸಿದ್ಧತೆಯಲ್ಲಿ ತೊಡಗಿರುವುದು   

ಬಸವಾಪಟ್ಟಣ: ಸಮೀಪದ ಕೋಟೆಹಾಳು ಗ್ರಾಮದ ತುಂಗಭದ್ರಾ ಸಂಜೀವಿನಿ ಒಕ್ಕೂಟದ ಮಹಿಳೆಯರು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಅಂಗವಾಗಿ 1,000 ರಾಷ್ಟ್ರಧ್ವಜಗಳನ್ನು ಜಿಲ್ಲಾ ಪಂಚಾಯಿತಿಗೆ ತಯಾರಿಸಿ ಕೊಡಲು ಸನ್ನದ್ಧರಾಗಿದ್ದಾರೆ.

ದಾವಣಗೆರೆ ತಾಲ್ಲೂಕಿನ ತೋಳಹುಣಸೆ ಗ್ರಾಮದಲ್ಲಿರುವ ರುಡ್‌ಸೆಡ್‌ ಸಂಸ್ಥೆಯಲ್ಲಿ ಸಂಘದ ಸದಸ್ಯರು ರಾಷ್ಟ್ರಧ್ವಜ ತಯಾರಿಕೆಯಲ್ಲಿ ತರಬೇತಿ ಪಡೆದಿದ್ದಾರೆ.

‘1,000 ರಾಷ್ಟ್ರಧ್ವಜ ತಯಾರಿಸಿಕೊಡಲು ಜಿಲ್ಲಾ ಪಂಚಾಯಿತಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿ ಧ್ವಜಕ್ಕೆ ₹ 30‌ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮ ಸಂಘದ 20 ಜನ ಸದಸ್ಯೆಯರು ಧ್ವಜ ತಯಾರಿಕೆಯಲ್ಲಿ ತೊಡಗಿದ್ದಾರೆ’ ಎಂದು ಒಕ್ಕೂಟದ ಅಧ್ಯಕ್ಷೆ ಎಂ.ಬಿ. ಅಶ್ವಿನಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ರಾಷ್ಟ್ರಧ್ವಜ ತಯಾರಿಕೆಗೆ ‌600 ಮೀಟರ್‌ ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆ ಖರೀದಿಸಿದ್ದೇವೆ. ಈ ಧ್ವಜ ತಯಾರಿಕೆ ನಮಗೆ ರಾಷ್ಟ್ರಾಭಿಮಾನವೇ ಸ್ಫೂರ್ತಿ ನೀಡಿದೆ. ಈಗಾಗಲೇ ಅರ್ಧದಷ್ಟು ಧ್ವಜಗಳು ಸಿದ್ಧವಾಗಿವೆ. ಮಹಿಳೆಯರು ನಮ್ಮ ಸಂಘಕ್ಕೆ ಬಂದು ವೀಕ್ಷಿಸಿ ಮೆಚ್ಚುಗೆ ಸೂಚಿಸುತ್ತಿದ್ದಾರೆ’ ಎಂದು ಒಕ್ಕೂಟದ ಸಂಚಾಲಕಿ ಎಂ.ಸಿ.ಪವಿತ್ರ ಹೇಳಿದರು.

‘ಹುಬ್ಬಳ್ಳಿ, ಗರಗ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಮಾತ್ರ ತಯಾರಾಗುತ್ತಿದ್ದ ರಾಷ್ಟ್ರಧ್ವಜಗಳು ನಮ್ಮ ಗ್ರಾಮದಲ್ಲಿ ತಯಾರಾಗುತ್ತಿರುವುದು ನಮಗೆ ಹೆಮ್ಮೆ ತಂದಿದೆ. ಪ್ರತಿಯೊಬ್ಬರೂರಾಷ್ಟ್ರಧ್ವಜ ಹಾರಿಸುವುದರ ಮೂಲಕ ಸ್ವಾತಂತ್ರ್ಯೋತ್ಸವಕ್ಕೆ ಮೆರುಗು ನೀಡಬೇಕು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾಕ್ಷಿ ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.