ADVERTISEMENT

ಚುನಾವಣೆ ಬಳಿಕ ಪರಿಷತ್‌ನಲ್ಲೂ ಬಿಜೆಪಿಗೆ ಬಹುಮತ: ಜಗದೀಶ ಶೆಟ್ಟರ್‌ ವಿಶ್ವಾಸ

‘ಜನಸ್ವರಾಜ್‌ ಸಮಾವೇಶ’ ತಂಡದ ನಾಯಕ ಮಾಜಿ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 8:34 IST
Last Updated 18 ನವೆಂಬರ್ 2021, 8:34 IST
ಜಗದೀಶ ಶೆಟ್ಟರ್
ಜಗದೀಶ ಶೆಟ್ಟರ್   

ದಾವಣಗೆರೆ: 25 ಸ್ಥಾನಗಳಿಗೆ ನಡೆಯಲಿರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಪರಿಷತ್‌ನಲ್ಲೂ ಬಹುಮತವನ್ನು ಹೊಂದಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಬಿಜೆಪಿ ಗುರುವಾರ ಹಮ್ಮಿಕೊಂಡಿರುವ ‘ಜನಸ್ವರಾಜ್‌ ಸಮಾವೇಶ’ದಲ್ಲಿ ಪಾಲ್ಗೊಳ್ಳುವ ಮೊದಲು ಸದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಲ್ಕು ತಂಡಗಳಲ್ಲಿ 31 ಜಿಲ್ಲೆಗಳಲ್ಲೂ ಜನಸ್ವರಾಜ್‌ ಸಮಾವೇಶ ನಡೆಸುತ್ತಿದ್ದೇವೆ. ಗುರುವಾರ ಸಮಾವೇಶಕ್ಕೆ ಚಾಲನೆ ನೀಡಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಪಕ್ಷವನ್ನು ಬೇರು ಮಟ್ಟದಲ್ಲಿ ಕಟ್ಟಲಾಗುವುದು. ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚಿರುವುದರಿಂದ ವಿಧಾನ ಪರಿಷತ್‌ನ 25 ಸ್ಥಾನಗಳ ಪೈಕಿ 15ಕ್ಕೂ ಹೆಚ್ಚರಲ್ಲಿ ಗೆಲ್ಲುತ್ತೇವೆ’ ಎಂದರು.

‘ಚುನಾವಣೆ ಫಲಿತಾಂಶದ ಬಳಿಕವೂ ಪರಿಷತ್‌ನಲ್ಲಿ ಜೆಡಿಎಸ್‌ ಜೊತೆಗಿನ ಬಾಂಧವ್ಯ ಮುಂದುವರಿಯಲಿದೆಯೇ?’ ಎಂಬ ಪ್ರಶ್ನೆಗೆ, ‘ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾದಾಗ 23 ಪಕ್ಷಗಳ ಬೆಂಬಲ ಪಡೆಯುವಂತಹ ಸ್ಥಿತಿ ಇತ್ತು. ಇಂದು ಕೇಂದ್ರ ಹಾಗೂ ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರ ನಡೆಸುತ್ತಿದ್ದೇವೆ. ಪರಿಷತ್‌ನಲ್ಲಿ ಬಹುಮತ ಇಲ್ಲದಿದ್ದರೂ ಸಂಖ್ಯಾಬಲದಲ್ಲಿ ನಾವೇ ಮೊದಲಿಗರಾಗಿದ್ದೆವು. ಚುನಾವಣೆ ಬಳಿಕ ನಮಗೆ ಸ್ಪಷ್ಟ ಬಹುಮತ ಸಿಗಲಿದೆ. ಆ ಬಳಿಕ ಜೆಡಿಎಸ್‌ ಜೊತೆಗಿನ ಬಾಂಧವ್ಯ ಕುರಿತು ಪಕ್ಷ ನಿರ್ಧಾರ ಕೈಗೊಳ್ಳಲಿದೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಅಧಿಕಾರ ವಿಕೇಂದ್ರೀಕರಣ, ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದು, ಪಂಚಾಯಿತಿ ಸದಸ್ಯರ ಮೂಲಕ ಮೂಲಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಹಳ್ಳಿಗಳನ್ನು ಅಭಿವೃದ್ಧಿಗೊಳಿಸುವ ವಿಚಾರಗಳನ್ನು ಮುಂದಿಟ್ಟುಕೊಂಡು ಪರಿಷತ್‌ ಚುನಾವಣೆಗೆ ಹೋಗುತ್ತಿದ್ದೇವೆ’ ಎಂದು ಶೆಟ್ಟರ್‌ ತಿಳಿಸಿದರು.

‘ಪಕ್ಷದಿಂದ ಸ್ಪರ್ಧಿಸಲು ನಾಯಕರು ಆಸಕ್ತಿ ತೋರಿಸುತ್ತಿಲ್ಲವೇ?’ ಎಂಬ ಪ್ರಶ್ನೆಗೆ, ‘ಪ್ರತಿ ಕ್ಷೇತ್ರದಲ್ಲೂ ಕನಿಷ್ಠ 4–5 ಜನ ಸ್ಪರ್ಧಿಸಲು ಆಸಕ್ತಿ ತೋರಿಸಿದ್ದಾರೆ. ಈಗಾಗಲೇ ಕೋರ್‌ ಕಮಿಟಿ ಸಭೆಯಲ್ಲಿ ಅಭ್ಯರ್ಥಿಯನ್ನು ಅಂತಿಮಗೊಳಿಸಿ ಪಕ್ಷದ ರಾಜ್ಯಾಧ್ಯಕ್ಷರು ಕೇಂದ್ರಕ್ಕೆ ಪಟ್ಟಿಯನ್ನು ಕಳುಹಿಸಿಕೊಟ್ಟಿದ್ದಾರೆ. ಶುಕ್ರವಾರ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ’ ಎಂದರು.

‘ಕಳೆದ ಉಪ ಚುನಾವಣೆ ಹಾಗೂ ಈಗಿನ ಪರಿಷತ್‌ ಚುನಾವಣೆಯ ಫಲಿತಾಂಶವನ್ನು ಜನಾದೇಶ ಎಂದು ಪರಿಗಣಿಸಬೇಕಾಗಿಲ್ಲ. ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್‌ನ ಸ್ಥಾನವನ್ನು ನಾವು ಗೆದ್ದುಕೊಂಡಿದ್ದೇವೆ. ಹಾನಗಲ್‌ನಲ್ಲಿ ಗೆಲ್ಲಲು ಸಾಧ್ಯವಾಗದಿದ್ದರೂ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಶಕ್ತಿಯನ್ನು ತೋರಿಸಿದ್ದೇವೆ. ಉಪ ಚುನಾವಣೆಯಲ್ಲಿ ಸೋಲು–ಗೆಲುವು ಸಹಜ. ಸಾರ್ವತ್ರಿಕ ಚುನಾವಣೆ ಫಲಿತಾಂಶಕ್ಕೆ ಮಾತ್ರ ಮುಖ್ಯಮಂತ್ರಿ ಬಾಧ್ಯಸ್ಥರಾಗಿರುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಚಿವರಾದ ಬೈರತಿ ಬಸವರಾಜ, ಕೆ.ಗೋಪಾಲಯ್ಯ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್‌.ವಿ.ರಾಮಚಂದ್ರ, ಪ್ರೊ.ಎನ್‌.ಲಿಂಗಣ್ಣ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ, ಎಂ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ಕೆ.ಎಸ್‌. ನವೀನ್‌, ತುಳಸಿ ಮುನಿರಾಜುಗೌಡ, ಮೇಯರ್‌ ಎಸ್‌.ಟಿ. ವೀರೇಶ್‌, ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಜಗದೀಶ ಇದ್ದರು.

‘ಬಿಟ್‌ ಕಾಯಿನ್‌: ಕಾಂಗ್ರೆಸ್‌ನಲ್ಲೇ ಪರಸ್ಪರ ಆರೋಪ’
‘ಬಿಜೆಪಿ ಆಡಳಿತದ ಬಗ್ಗೆ ಟೀಕಿಸಲು ಯಾವುದೇ ವಿಷಯ ಇಲ್ಲದಿರುವುದರಿಂದ ಕಾಂಗ್ರೆಸ್‌ನವರು ಬಿಟ್‌ ಕಾಯಿನ್‌ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ 2016ರಿಂದ ಮುಖ್ಯಮಂತ್ರಿಯಾಗಿದ್ದಾಗ ಬಿಟ್‌ ಕಾಯಿನ್‌ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳಬೇಕಿತ್ತು. ಈಗ ಬಿಟ್‌ ಕಾಯಿನ್‌ ಮಂತ್ರ ಜಪಿಸುತ್ತಿದ್ದಾರೆ. ಸಾಕ್ಷ್ಯಗಳಿದ್ದರೆ ಕೊಡಬೇಕಿತ್ತು. ಬೇಜವಾಬ್ದಾರಿಯಿಂದ ಆರೋಪಿಸುವುದು ಕಾಂಗ್ರೆಸ್‌ನವರ ಸ್ವಭಾವ’ ಎಂದು ಜಗದೀಶ ಶೆಟ್ಟರ್‌ ಟೀಕಿಸಿದರು.

‘ಸಿದ್ದರಾಮಯ್ಯ ತಮ್ಮ ಪಕ್ಷದವರನ್ನೇ ಗುರಿ ಮಾಡಿ ಆರೋಪಿಸುತ್ತಿದ್ದಾರೆ ಅನಿಸುತ್ತಿದೆ. ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ನಡೆಯುತ್ತಿದೆ’ ಎಂದು ದೂರಿದರು.

‘ಪ್ರಧಾನಿ ನರೇಂದ್ರ ಮೋದಿ ಜಗತ್ತಿನಲ್ಲಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇವರಿಗೆ ಪರ್ಯಾಯ ನಾಯಕರಾಗಿ ಕಾಂಗ್ರೆಸ್‌ ಪಕ್ಷದಲ್ಲಿ ಯಾರೂ ಬೆಳೆದಿಲ್ಲ. ಹೀಗಾಗಿ ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಯಡಿಯೂರಪ್ಪ ಪಕ್ಷದ ನಿರ್ವಿವಾದಿತ ನಾಯಕ
‘ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಯ ನಿರ್ವಿವಾದಿತ ಹಾಗೂ ಅತ್ಯುನ್ನತ ನಾಯಕರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲೇ ಪಕ್ಷ ಮುನ್ನಡೆಯುತ್ತಿದೆ. ಹೀಗಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಪಕ್ಷದ ನಾಯಕತ್ವದಲ್ಲಿ ನಿರ್ವಾತ ಸೃಷ್ಟಿಯಾಗಲು ಸಾಧ್ಯವಿಲ್ಲ’ ಎಂದು ಜಗದೀಶ ಶೆಟ್ಟರ್‌ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

*

ಯಾವಾಗ ಹಾಗೂ ಎಲ್ಲಿ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಬಿಜೆಪಿ ರಾಜ್ಯ ಅಧ್ಯಕ್ಷರು ಹಾಗೂ ಪಕ್ಷ ಸೂಚಿಸುತ್ತದೆಯೋ ಆಗಲೇ ಸ್ಪರ್ಧಿಸುತ್ತೇನೆ. ಇಂತಹ ಕಡೆಯಿಂದಲೇ ಸ್ಪರ್ಧಿಸಬೇಕು ಎಂದು ಇನ್ನೂ ನಿರ್ಧರಿಸಿಲ್ಲ.
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.