ಬಸವಾಪಟ್ಟಣ: ‘ರೈತರು ತಮ್ಮ ಅಡಿಕೆ ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಪಪ್ಪಾಯ ಸಸಿಗಳನ್ನು ನಾಟಿ ಮಾಡುತ್ತಿದ್ದು, ಸರಿಯಾದ ಮಾಹಿತಿ ಇಲ್ಲದೆ ಸಸಿಗಳು ಸಾಯುತ್ತಿವೆ. ರೈತರು ಈ ಬಗ್ಗೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿ ಗಂಗಾಧರಪ್ಪಗೌಡ ಬಿರಾದಾರ್ ರೈತರಿಗೆ ಸಲಹೆ ನೀಡಿದರು.
‘ನಾಟಿಗೆ ಸಿದ್ಧವಾಗಿರುವ ಪಪ್ಪಾಯ ಸಸಿಗಳ ಬೇರುಗಳು ಮತ್ತು ಎಲೆಗಳ ಮೇಲೆ ಗಾಯ ಕಂಡು ಬರುತ್ತದೆ. ಇದರಿಂದ ಡ್ಯಾಂಪಿಂಗ್ ಆಫ್ ಶಿಲೀಂದ್ರ ರೋಗ ಉಂಟಾಗುತ್ತದೆ. ಅಲ್ಲದೇ ಹೆಚ್ಚಿನ ತಾಪಮಾನದಿಂದಾಗಿ ಕಾಂಡದ ಅಂಗಾಂಶ ಕುಸಿತ ಉಂಟಾಗಿ ಸಸಿಗಳು ಸಾವನ್ನಪ್ಪುತ್ತವೆ’ ಎಂದು ಹೇಳಿದರು.
‘ಇದಕ್ಕೆ ಪರಿಹಾರವೆಂದರೆ, ರೋಗ ನಿರೋಧಕ ತಳಿಗಳ ಆಯ್ಕೆ, ಪ್ರತಿಷ್ಠಿತ ನರ್ಸರಿಗಳಿಂದ ಸಸಿಗಳ ಖರೀದಿ, ಸಸಿಗಳ ನಾಟಿಗೆ ಮುನ್ನ ಮಣ್ಣಿಗೆ ಶಿಲೀಂದ್ರ ನಾಶಕಗಳನ್ನು ಸೇರಿಸಬೇಕು. ನಾಟಿಯ ನಂತರ ಈ ರೋಗಗಳು ಕಂಡು ಬಂದಲ್ಲಿ ಪ್ರತಿ ಲೀಟರ್ ನೀರಿಗೆ ಎರಡು ಗ್ರಾಂ ಶಿಲೀಂದ್ರ ನಾಶಕವನ್ನು ಸೇರಿಸಿ ಸಿಂಪಡಿಸಬೇಕು. ರೋಗ ಹತೋಟಿಗೆ ಬಾರದಿದ್ದಲ್ಲಿ ‘ಕ್ಯಾಪ್ರಟ್ರಾನ್ 50wp’ ಶಿಲೀಂದ್ರ ನಾಶಕವನ್ನು ಸಸಿಗಳ ಬುಡದಲ್ಲಿ ಬೇರುಗಳು ನೆನೆಯುವಂತೆ ಸಿಂಪಡಿಸಬೇಕು. ಅಡಿಕೆ ಸಸಿಗಳಿಗೆ ಹಾಯಿಸಿದ ನೀರು ಪಪ್ಪಾಯ ಸಸಿಗಳಿಗೆ ಅತಿ ಶೀತ ಉಂಟುಮಾಡುವುದರಿಂದ ಎರಡು ದಿನಕ್ಕೊಮ್ಮೆ ನೀರು ಹಾಯಿಸಬೇಕು’ ಎಂದು ಗಂಗಾಧರಪ್ಪಗೌಡ ತಿಳಿಸಿದರು.
ಕೀಟ ವಿಜ್ಞಾನಿ ಶರಣಪ್ಪ ಹಾಗೂ ರೈತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.